ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

120 ಮನೆಗಳಿಗೆ ಭೇಟಿ ನೀಡಿದ ಶಿಕ್ಷಕ

ಮಂಗಳೂರಿನಲ್ಲಿ ಮಾಡಿದ್ದ ಪ್ರಯೋಗ– ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಉದ್ದೇಶ
Published 22 ಮಾರ್ಚ್ 2024, 5:43 IST
Last Updated 22 ಮಾರ್ಚ್ 2024, 5:43 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಮಂಗಳೂರಿನ ಮುಲ್ಲಕಾಡು ಸರ್ಕಾರಿ ಪ್ರೌಢಶಾಲೆ ಹಲವು ಕಾರಣಗಳಿಂದ ಬಹಳ ಖ್ಯಾತ. ಅಲ್ಲಿ ಶಿಕ್ಷಕರಾಗಿ ಒಂಭತ್ತು ವರ್ಷ ಸೇವೆ ಸಲ್ಲಿಸಿದ ಸೋಮಪ್ಪ ಎಂ. ಅವರು ನಗರದಲ್ಲಿ 120 ಮನೆಗಳಿಗೆ ಭೇಟಿ ನೀಡುವ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ತಮ್ಮದೇ ಆದ ಪ್ರಯತ್ನ ನಡೆಸಿದ್ದಾರೆ.

ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ (ಮಾಜಿ ಪುರಸಭೆ) ಸಮಾಜ ವಿಜ್ಞಾನ ಶಿಕ್ಷಕ ಸೋಮಪ್ಪ ಅವರು ಕಲಿಕೆಯಲ್ಲಿ ಸ್ವಲ್ಪ ಹಿಂದೆ ಬಿದ್ದಿರುವ ಮತ್ತು ಕಟ್ಟಪಟ್ಟು ಪ್ರಯತ್ನ ನಡೆಸುತ್ತಿರುವ 120 ವಿದ್ಯಾರ್ಥಿನಿಯರ ಮನೆಗಳಿಗೆ ತೆರಳಿ ಅವರ ಮನೆಯ ಪರಿಸರ, ಓದುವ ವಾತಾವರಣ ತಿಳಿದುಕೊಂಡು, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂಬ ಮಾಹಿತಿಯನ್ನು ವಿದ್ಯಾರ್ಥಿನಿಯರಿಗೆ ಹಾಗೂ ಅವರ ಪೋಷಕರಿಗೆ ನೀಡಿ ಬಂದಿದ್ದಾರೆ. ಹೀಗೆ ಮನೆ ಭೇಟಿಯನ್ನು ಒಮ್ಮೆ ಮಾಡಿ ಬಂದಿಲ್ಲ, ಮೂರರಿಂದ ನಾಲ್ಕು ಬಾರಿ ಈ ಮನೆಗಳಿಗೆ ಭೇಟಿ ನೀಡಿದ್ದಾರೆ.

‘ಮುಲ್ಲಕಾಡು ಶಾಲೆಯಲ್ಲಿ ಐದು ವರ್ಷ ನಾನು ಮನೆ ಮನೆಗೆ ತೆರಳಿ ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸಲು ಪ್ರಯತ್ನಿಸಿದ್ದೆ. ಅದಕ್ಕೆ ಉತ್ತಮ ಪ್ರತಿಫಲವೂ ದೊರೆತಿತ್ತು. ಮಂಗಳೂರು ಕಡೆ ಶ್ರೀಮಂತರ ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಬಡವರು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರ ಮಕ್ಕಳಷ್ಟೇ ಇಂತಹ ಶಾಲೆಗಳಿಗೆ ಸಾಮಾನ್ಯವಾಗಿ ಬರುತ್ತಾರೆ. ಅವರನ್ನು ಓದುವ ಕಡೆಗೆ ತಿರುಗಿಸುವುದು ಸವಾಲಿನ ಸಂಗತಿ. ಕೋವಿಡ್‌ ಸಮಯದಲ್ಲಂತೂ ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈ ಎಲ್ಲ ಪ್ರಯತ್ನದಲ್ಲಿ ಸಫಲತೆ ಸಾಧಿಸಿದ್ದೆ’ ಎಂದು ಸೋಮಪ್ಪ ಅವರು ಹೆಮ್ಮೆಯಿಂದ ‘ಪ್ರಜಾವಾಣಿ’ ಬಳಿ ತಮ್ಮ ಅನುಭವ ಹಂಚಿಕೊಂಡರು.

‘ಮಂಗಳೂರಿಗೂ, ಹೊಸಪೇಟೆಗೂ ಬಹಳ ವ್ಯತ್ಯಾಸ ಇದೆ. ಮಂಗಳೂರಿನಲ್ಲಿ ಸಹ ಬಡತನದ ಬೇಗೆ ಇದ್ದೇ ಇದೆ, ಆದರೆ ಪೋಷಕರ ಕಾಳಜಿ ಸ್ವಲ್ಪ ಹೆಚ್ಚೇ ಇದೆ. ಶಾಲೆಗಳಿಗೆ ಬೇಕಾದ ಸೌಲಭ್ಯಗಳನ್ನು ಎಸ್‌ಡಿಎಂಸಿ ಸದಸ್ಯರು, ಸಂಘ ಸಂಸ್ಥೆಗಳು ನಿರಂತರವಾಗಿ ನೀಡುತ್ತವೆ. ಹೊಸಪೇಟೆ ಭಾಗದಲ್ಲಿ ಇಂತಹ ವಿಚಾರದಲ್ಲಿ ಸ್ವಲ್ಪ ಕೊರತೆ ಕಾಣಿಸುತ್ತಿದೆ. ಪೋಷಕರ ಕುಡಿತದ ಹವ್ಯಾಸ, ಉದಾಸೀನ ಮನೋಭಾವ, ಬಾಲ್ಯವಿವಾಹ ಮೊದಲಾದ ಸಮಸ್ಯೆಗಳ ನಡುವೆ ವಿದ್ಯಾರ್ಥಿನಿಯರು ಓದಬೇಕು. ಎಸ್ಸೆಸ್ಸೆಲ್ಸಿ ಪಾಸಾದರೂ ಪಿಯುಸಿಯಲ್ಲಿ ಫೇಲ್‌ ಆಗುವ ಸಾಧ್ಯತೆ ಇಲ್ಲಿ ಅಧಿಕ ಇದೆ’ ಎಂದು ಅವರು ಹೇಳಿದರು.

ಆಗಸ್ಟ್‌ನಿಂದ ಮನೆ ಭೇಟಿ: ಸೋಮಪ್ಪ ಅವರು ಕಳೆದ ಆಗಸ್ಟ್‌ನಿಂದ ಮನೆ ಭೇಟಿ ಆರಂಭಿಸಿದ್ದರು. ಕೆಲವೊಮ್ಮೆ ಶಾಲೆಯ ಮುಖ್ಯಾಧ್ಯಾಪಕಿ ಪ್ರಮೀಳಾ ಬಿ.ಅಲಗಣಿ ಅವರೂ ಸಾಥ್‌ ನೀಡಿದ್ದಾರೆ.

ಸೋಮಪ್ಪ ಅವರು ತಮ್ಮ ಬೈಕ್‌ನಲ್ಲಿ ಹೊಸಪೇಟೆ ನಗರ ಮಾತ್ರವಲ್ಲದೆ, ಕಣಿವೆರಾಯನ ಗುಡಿ, ವಡ್ಡರಹಳ್ಳಿ, ಜಿ. ಜಿ. ಕ್ಯಾಂಪ್, ಮಲಪನಗುಡಿ, ಹೊಸ ಹಂಪಿ, ಕಡ್ಡಿರಾಂಪುರ ತಾಂಡಾ, ಕಡ್ಡಿರಾಂಪುರ, ಬೆನಾಕಪುರ, ಹೊಸೂರು, ಹಿಪ್ಪಿತೇರಿ ಮಗಾಣಿ ಸೇರಿ 11 ಊರುಗಳ 120 ಮನೆಗಳಿಗೆ ಸುಮಾರು ಮೂರು ಬಾರಿ ಭೇಟಿ ನೀಡಿದ್ದಾರೆ.

ತಾಲ್ಲೂಕಿಗೆ ದ್ವಿತೀಯ ಕಳೆದ ಸಾಲಿನಲ್ಲಿ (2022–23) ನಗರದ ಮಾಜಿ ಪುರಸಭೆ ಶಾಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ 92ರಷ್ಟು ಸಾಧನೆಯೊಂದಿಗೆ ತಾಲ್ಲೂಕಿಗೆ ದ್ವಿತೀಯ ಸ್ಥಾನದಲ್ಲಿತ್ತು. ಈ ಬಾರಿಯ ಪರೀಕ್ಷೆಗೆ ಶಾಲೆಯ 190ರಷ್ಟು ವಿದ್ಯಾರ್ಥಿನಿಯರು ಸಜ್ಜಾಗುತ್ತಿದ್ದು ಶಿಕ್ಷಕ ಸೋಮಪ್ಪ ಅವರ ಮನೆ ಭೇಟಿಯ ಪ್ರಯತ್ನ ಎಂತಹ ಫಲಿತಾಂಶ ತಂದುಕೊಡುತ್ತದೆ ಎಂಬ ಕುತೂಹಲ ಗರಿಗೆದರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT