ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಬಿರುಗಾಳಿ ಮಳೆಗೆ ನೆಲಕಚ್ಚಿದ ಬಾಳೆ

ಹಲವು ತೋಟಗಳಿಗೆ ಭಾಗಶಃ ಹಾನಿ: ಪರಿಹಾರ ಸಿಗುವುದು ಕಷ್ಟ
Published 9 ಮೇ 2024, 15:25 IST
Last Updated 9 ಮೇ 2024, 15:25 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರ ಮತ್ತು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ರಾತ್ರಿ ಭಾರಿ ಗಾಳಿ ಸಹಿತ ಲಘುವಾಗಿ ಮಳೆ ಸುರಿದಿದ್ದು, ಬುಕ್ಕಸಾಗರ, ವೆಂಕಟಾಪುರ, ಹಂಪಿ, ಕಡ್ಡಿರಾಂಪುರ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಬಾಳೆ ತೋಟಗಳು ನೆಲಕಚ್ಚಿವೆ.

ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿದ್ದು, ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲ. ರಾತ್ರಿ 11 ಗಂಟೆ ಸುಮಾರಿಗೆ ಗುಡುಗು, ಮಿಂಚು ಸಹಿತ ಸಾಧಾರಣ ಮಳೆ ಸುರಿಯಿತು. ಗಾಳಿಯ ವೇಗ ಜಾಸ್ತಿಯಾಗಿತ್ತು. ಇದರಿಂದಾಗಿ ಗೊನೆಹಾಕಿದ ಬಾಳೆಗಿಡಗಳ ಸಹಿತ ನೂರಾರು ಬಾಳೆಗಿಡಗಳು ನೆಲಕಚ್ಚಿದವು.

ಬುಕ್ಕಸಾಗರದ ಹನುಮಂತಪ್ಪ ಎಂಬುವರು ಸುಮಾರು 11 ಎಕರೆ ಗದ್ದೆಯಲ್ಲಿ ಬೆಳೆದಿದ್ದ ಬಾಳೆತೋಟ ನೆಲ ಕಚ್ಚಿದರೆ, ಜೆ.ಎನ್‌. ಕಾಳಿದಾಸ, ಆರ್‌.ಶೇಕ್ಷಾವಲಿ, ಜೆ.ಕರವೀರಪ್ಪ, ಮಾಲಿಬಾಷಾ, ಇ.ಕೃಷ್ಣಪ್ಪ, ಎ.ಬಾಷಾ, ಕೆ.ಬಾಷಾ, ಮೇಟಿ ನಾಯ್ಕ್ ಮೊದಲಾದವರ ತೋಟಗಳಲ್ಲಿ ಸಹ ಬಾಳೆಗಿಡಗಳು ನೆಲಸಮವಾಗಿವೆ.

‘ಬೆಳೆ ಕೈಗೆ ಬರುವ ಹಂತದಲ್ಲಿ ಈ ಹಾನಿ ಸಂಭವಿಸಿದೆ. ಸರ್ಕಾರ ನಮಗೆ ಪರಿಹಾರ ನೀಡಬೇಕು. ಮೂರು ವರ್ಷದ ಹಿಂದೆ ಇದೇ ರೀತಿ ಗಾಳಿ, ಮಳೆಗೆ ಬಾಳೆ ತೋಟ ನಾಶವಾಗಿದ್ದಾಗ ಸರ್ಕಾರದಿಂದ ಯಾವ ನೆರವೂ ಸಿಕ್ಕಿರಲಿಲ್ಲ. ಮತ್ತೆ ಅದೇ ರೀತಿಯ ಅನ್ಯಾಯ ಆಗಬಾರದು’ ಎಂದು ಹನುಮಂತಪ್ಪ ಅವರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಎಚ್.ಆರ್.ಗವಿಯಪ್ಪ, ತಹಶೀಲ್ದಾರ್ ಶ್ರುತಿ ಎಂ.ಎಂ., ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಚಿದಾನಂದ ಇತರರು ಹಾನಿಯ ಪರಿಶೀಲನೆ ನಡೆಸಿದರು. 

‘ಮೊದಲ ಗಾಳಿ ಮಳೆಗೇ ಇಷ್ಟೆಲ್ಲ ಹಾನಿ ಸಂಭವಿಸಿದೆ. ಸರ್ಕಾರ ತಕ್ಷಣ ಪರಿಹಾರ ಒದಗಿಸಬೇಕು ಹಾಗೂ ರೈತರ ಸಾಲ ಮನ್ನಾ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ರೈತರ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಒತ್ತಾಯಿಸಿದರು.

‘ರಾತ್ರಿ ಹೊತ್ತಿನಲ್ಲಿ ಬೀಸಿದ ಗಾಳಿ ಮತ್ತು ಮಳೆಗೆ ರೈತರು ಬೆಳೆದಿದ್ದ ಬೆಳೆ ಕೈಗೆ ಬರದಂತಾಗಿದೆ. ರೈತರ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು, ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಪಡೆದ ಸಾಲ ಮನ್ನಾ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ರೈತರ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಘಟಕದ ಉಪಾಧ್ಯಕ್ಷ ಎಲ್‌.ಎಸ್.ರುದ್ರಪ್ಪ ಆಗ್ರಹಿಸಿದರು.

ಮಳೆ ವಿವರ: ಹೊಸಪೇಟೆ ತಾಲ್ಲೂಕಿನಲ್ಲಿ ಬಿದ್ದ ಮಳೆ ವಿವರ–ಹೊಸಪೇಟೆ ಐಬಿ–14.6 ಮಿ.ಮೀ., ರೈಲುನಿಲ್ದಾಣ–13.5 ಮಿ.ಮೀ., ಟಿ.ಬಿ.ಡ್ಯಾಂ–2 ಮಿ.ಮೀ., ಕಮಲಾಪುರ–43 ಮಿ.ಮೀ., ಗಾದಿಗನೂರು–19.2 ಮಿ.ಮೀ. ಹಾಗೂ ಮರಿಯಮ್ಮನಹಳ್ಳಿ–13.5 ಮಿ.ಮೀ.

ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರ ಪ್ರದೇಶದಲ್ಲಿ ಗಾಳಿಮಳೆಯಿಂದ ಹಾನಿಗೊಂಡ ಬಾಳೆ ತೋಟ
ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರ ಪ್ರದೇಶದಲ್ಲಿ ಗಾಳಿಮಳೆಯಿಂದ ಹಾನಿಗೊಂಡ ಬಾಳೆ ತೋಟ

ಪರಿಹಾರದ ಭರವಸೆ

‘ಸರ್ಕಾರದ ಮಾರ್ಗಸೂಚಿಯಂತೆ ಶೇ 33ಕ್ಕಿಂತ ಅಧಿಕ ಹಾನಿ ಸಂಭವಿಸಿದ ಹೊಲ/ಗದ್ದೆಗಳಿಗೆ ಪರಿಹಾರ ಸಿಗಲಿದೆ. ನೀರಾವರಿ ಆಶ್ರಿತ ಭೂಮಿ ಆಗಿರುವ ಕಾರಣ ಹೆಕ್ಟೇರ್‌ಗೆ ₹25 ಸಾವಿರದಷ್ಟು ಪರಿಹಾರ ಕೊಡುವ ಅವಕಾಶ ಇದೆ. ಹಾನಿಯ ಅಂದಾಜು ಮಾಡಲಾಗುತ್ತಿದ್ದು ತ್ವರಿತವಾಗಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಚಿದಾನಂದ ‘ಪ್ರಜಾವಾಣಿ’ಗೆ ತಿಳಿಸಿದರು. ‘ಸರ್ಕಾರದ ಮಾರ್ಗಸೂಚಿಯಂತೆ ಶೇ 33ಕ್ಕಿಂತ ಕಡಿಮೆ ಹಾನಿಗೊಂಡ ತೋಟಗಳಿಗೆ ಪರಿಹಾರ ಕೊಡುವುದು ಕಷ್ಟವಾಗುತ್ತದೆ. ಈ ಹಿಂದೆ ಹಾಗೆ ಆಗಿದ್ದ ಕಾರಣ ಪರಿಹಾರದ ಹಣ ಸಿಕ್ಕಿರಲಾರದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT