ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇನ್ನಾದರೂ ತುಂಗಾಭದ್ರಾ ಜಲಾಶಯದ ಹೂಳು ತೆಗೆಸಿ: ಪ್ರಧಾನಿಗೆ ಉಗ್ರಪ್ಪ ಪತ್ರ

Published : 14 ಆಗಸ್ಟ್ 2024, 15:13 IST
Last Updated : 14 ಆಗಸ್ಟ್ 2024, 15:13 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ ಗೇಟ್‌ ನೀರುಪಾಲದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ, ಜಲಾಶಯದಲ್ಲಿ ತುಂಬಿರುವ 33 ಟಿಎಂಸಿ ಅಡಿಯಷ್ಟು ಹೂಳನ್ನು ತೆಗೆಸಲು ಇನ್ನದರೂ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

‘ಪ್ರತಿ ವರ್ಷ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬಳಸಬಹುದಾದ 200 ಟಿಎಂಸಿ ಅಡಿಯಷ್ಟು ನೀರು ವ್ಯರ್ಥವಾಗಿ ನದಿ ಸೇರುತ್ತಿದೆ. ಅಣೆಕಟ್ಟೆ ನಿರ್ಮಾಣವಾಗಿ 70 ವರ್ಷ ಕಳೆದಿದ್ದು, ಒಮ್ಮೆಯೂ ಹೂಳು ತೆಗೆಯುವ ಪ್ರಯತ್ನ ನಡೆದಿಲ್ಲ. ಈಗಾಗಲೇ 33 ಟಿಎಂಸಿ ಅಡಿಯಷ್ಟು ಹೂಳು ತುಂಬಿಕೊಂಡು ನಮ್ಮ ಹಕ್ಕಿನ ನೀರಿಗೆ ಕನ್ನ ಬಿದ್ದಿದೆ. ಇನ್ನಾದರೂ ಹೂಳು ತೆಗೆಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

’ತುಂಗಭದ್ರಾ ಮಂಡಳಿ ತನ್ನ ಕರ್ತವ್ಯಗಳನ್ನು ಮರೆತು, ತನಗಿರುವ  ಸಂಪನ್ಮೂಲವನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲೇ ತಲ್ಲೀನವಾಗಿದೆ. ಹೂಳಿನ ಸಮಸ್ಯೆ ಗೊತ್ತಿದ್ದೂ ಮಂಡಳಿ ಮೂಕ ಪ್ರೇಕ್ಷಕನಾಗಿದೆ. ವ್ಯರ್ಥವಾಗಿ ಹರಿಯುವ ನೀರು ಸೇರುವುದು ಕೆಳಭಾಗದ ರಾಜ್ಯಗಳಿಗೆ. ಮಂಡಳಿ ಯಾವತ್ತೂ ರಾಜ್ಯದ ಬದಲಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣಗಳತ್ತಲೇ ತನ್ನ ಒಲವು ತೋರಿಸುತ್ತ ಬಂದಿದೆ. ಈ ವಿಚಾರದಲ್ಲಿ ರಾಜ್ಯದ ಜನ ತಾಳ್ಮೆಯನ್ನು ಮಂಡಳಿ ಪರೀಕ್ಷಿಸಬಾರದು’ ಎಂದು ಅವರು ಕೇಳಿಕೊಂಡಿದ್ದಾರೆ.

‘ಹೂಳು ತೆಗೆಯಲು ಬೇಕಾದ ವೆಚ್ಚದ ಬಗ್ಗೆ ಅಂದಾಜು ಮಾಡಬೇಕು. ಅಧಿಕ ವೆಚ್ಚವಾಗುತ್ತದೆ ಎಂದಾದರೆ ಸಮತೋಲನ ಜಲಾಶಯ ನಿರ್ಮಾಣಕ್ಕೆ ಮುಂದಾಗಬೇಕು, ಅದಕ್ಕೆ ಇತರ ರಾಜ್ಯಗಳ ಮನವೊಲಿಸುವ ಕೆಲಸವನ್ನು ಮಂಡಳಿಯೇ ಮಾಡಬೇಕು ಹಾಗೂ ಕೇಂದ್ರದಿಂದ ಮತ್ತು ಈ ಫಲಾನುಭವಿ ರಾಜ್ಯಗಳಿಂದ ಹಣ ಸಂಗ್ರಹಕ್ಕೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ಉಗ್ರಪ್ಪ ಸಲಹೆ ನೀಡಿದ್ದಾರೆ.

ತ್ವರಿತ ದುರಸ್ತಿಗೆ ರೈತ ಸಂಘ ಆಗ್ರಹ

ಕಂಪ್ಲಿ: ತುಂಗಭದ್ರಾ ಜಲಾಶಯದ 19ನೇ ಗೇಟ್ ಅನ್ನು ತ್ವರಿತವಾಗಿ ದುರಸ್ತಿಗೊಳಿಸಬೇಕು ಮತ್ತು ಜಲಾಶಯದ ನೀರಿನ ಸಂಗ್ರಹವನ್ನೂ ಕಾಪಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು. ಈ ಕುರಿತ ಮನವಿಪತ್ರವನ್ನು ತಹಶೀಲ್ದಾರ್ ಶಿವರಾಜ ಅವರಿಗೆ ಮಂಗಳವಾರ ಸಲ್ಲಿಸಿದರು.

ಬಳಿಕ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ. ಕಾಶೀಮ್‍ಸಾಬ್ ಮಾತನಾಡಿ, ಜಲಾಶಯದ 19ನೇ ಗೇಟ್ ಕೊಚ್ಚಿ ಹೋಗಿರುವುದರಿಂದ ಅಪಾರ ಪ್ರಮಾಣದ ನೀರು ನದಿಗೆ ವ್ಯರ್ಥವಾಗಿ ಹರಿಯುತ್ತಿದೆ. ಇದರಿಂದ ರೈತರ ಬೆಳೆಗೆ ಮುಂದಿನ ದಿನಗಳಲ್ಲಿ ನೀರಿನ ಕೊರತೆಯಾಗುವ ಸಾಧ್ಯತೆ ಇದೆ. ಸರ್ಕಾರ ಎಚ್ಚೆತ್ತು ನೀರು ತಡೆಯಲು ಅಗತ್ಯವಾದ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ವಿ. ವೀರೇಶ ಮಾತನಾಡಿ, ಜಲಾಶಯದ ನೀರನ್ನು ನಂಬಿ ಈಗಾಗಲೇ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ, ಮೆಣಸಿನಕಾಯಿ ಸೇರಿ ವಿವಿಧ ಬೆಳೆ ಬೆಳೆಯಲಾಗಿದೆ. ಸಕಾಲಕ್ಕೆ ಮಳೆಯೂ ಕೈಕೊಟ್ಟಿದ್ದು, ಜಲಾಶಯದ ನೀರೇ ಬೆಳೆಗಳಿಗೆ ಆಧಾರವಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ತಜ್ಞರು, ಅಧಿಕಾರಿಗಳು ರೈತರ ಹಿತ ಕಾಪಾಡುವಂತೆ ವಿನಂತಿಸಿದರು. ಎಮ್ಮಿಗನೂರು ಗ್ರಾಮ ಘಟಕದ ಅಧ್ಯಕ್ಷ ಸಣ್ಣ ಜಡೆಪ್ಪ, ರೈತರಾದ ಬಳ್ಳಾಪುರ ಲಿಂಗಪ್ಪ, ಬಿ. ಸದಾಶಿವಪ್ಪ, ಎನ್. ಸೂಗಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT