ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ: ಗುಡ್ಡ, ಕಂದರದಲ್ಲಿ ಕಾರುಗಳ ಜಿಗಿದಾಟ

ಹೊಸಪೇಟೆಯಲ್ಲಿ ‘ಉತ್ಸವ್‌ ದಿ ಹಂಪಿ’ ರಾಷ್ಟ್ರೀಯ ಆಫ್‌ರೋಡ್‌ ಚಾಲೆಂಜ್‌ ಮೋಟರ್‌ ಸ್ಫೋರ್ಟ್ಸ್‌
Published : 29 ಸೆಪ್ಟೆಂಬರ್ 2024, 5:54 IST
Last Updated : 29 ಸೆಪ್ಟೆಂಬರ್ 2024, 5:54 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಹೊಸಪೇಟೆ ಸುತ್ತಮುತ್ತಲಿನ ಹಸಿರು ಗುಡ್ಡ, ಕಂದರಗಳಲ್ಲಿ  ಶಕ್ತಿಶಾಲಿ ವಾಹನಗಳು ಗುಡ್ಡ ಏರಿ, ಕಂದರಕ್ಕೆ ಜಾರಿ, ಬಿದ್ದು, ಎದ್ದು ಸಾಗುವ ಮೂಲಕ ವಿಜಯನಗರ ಮೋಟಾರ್‌ಸ್ಫೋರ್ಟ್ಸ್‌ ಅಕಾಡೆಮಿ ಆಯೋಜನೆಯ ಐದನೇ ಆವೃತ್ತಿಯ ‘ಉತ್ಸವ್ ದಿ ಹಂಪಿ’ ಆಫ್‌ರೋಡ್‌ 4x4 ರಾಷ್ಟ್ರೀಯ ಚಾಲೆಂಜ್‌ ಮೋಟಾರ್ ಸ್ಫೋರ್ಟ್ಸ್‌ ರೋಮಾಂಚಕಾರಿಯಾಗಿ ಆರಂಭವಾಯಿತು.

ವಿಶ್ವ ಪಾರಂಪರಿಕ ತಾಣ ಹಂಪಿಗೆ ಪ್ರವಾಸಿಗರನ್ನು ಇನ್ನಷ್ಟು ಹೆಚ್ಚು ಸೆಳೆಯುವ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಈ ವಾಹನಗಳ ರೇಸ್‌ ನಡೆಯುತ್ತಿದ್ದು, ಐದನೇ ಆವೃತ್ತಿ ಸಹ ಶನಿವಾರ ಬೆಳಿಗ್ಗೆ 10.30ರ ಸುಮಾರಿಗೆ ಉತ್ಸಾಹದಿಂದ ಶುರುವಾಯಿತು. 

ಕಾರಿಗನೂರು ಹೆದ್ದಾರಿ ಬದಿಯಲ್ಲಿ ಮೂರು ಟ್ರ್ಯಾಕ್‌ಗಳನ್ನು ನಿರ್ಮಿಸಲಾಗಿದ್ದರೆ, ರಾಜಾಪುರದ  ಗುಡ್ಡಗಳಲ್ಲಿ ಮನುಷ್ಯರು ಓಡಾಡುವುದೇ ಕಷ್ಟ ಎಂಬ ಸ್ಥಳದಲ್ಲಿ ವಾಹನಗಳು ಏದುಸಿರುಬಿಟ್ಟು ಗುಡ್ಡ ಹತ್ತಿದವು. ಅಂಬೆಗಾಲಿಡುತ್ತ ಗುಡ್ಡ ಇಳಿದವು. ಕೆಲವು  ಕಂದರಕ್ಕೆ ಮೆಲ್ಲನೆ ಜಾರಿ ಮತ್ತೆ ಮೇಲೆದ್ದು ಸಾಗಿದವು. ಗೋಡೆಯಂತಹ ಸ್ಥಳದಲ್ಲಿ ವಿಂಚಿಂಗ್‌ ಸಹಾಯದಿಂದ ಇಳಿದ ವಾಹನಗಳ ಶಕ್ತಿ, ಚಾಲಕರ ಯುಕ್ತಿಗೆ ಪ್ರೇಕ್ಷಕರು ಬೆರಗಾದರು.

80 ವಾಹನಗಳ ಭಾಗಿ: ಐದನೇ ಆವೃತ್ತಿಯ ‘ಉತ್ಸವ್‌ ದಿ ಹಂಪಿ’ ಆಫ್‌ರೋಡ್‌ ಚಾಲೆಂಜ್‌ನಲ್ಲಿ 80 ವಾಹನಗಳು ಪಾಲ್ಗೊಂಡಿವೆ. ಇದರಲ್ಲಿ ಪ್ರೊ ಮಾಡಿಫೈಡ್‌, ಮಾಡಿಫೈಡ್‌ ಮತ್ತು ಸ್ಟಾಕ್‌ ವಿಭಾಗಗಳು ಸೇರಿವೆ. ಒಂದು ವಾಹನಕ್ಕೆ ಇಬ್ಬರಂತೆ ಸುಮಾರು  160ರಷ್ಟು ಚಾಲಕರು ಪಾಲ್ಗೊಂಡಿದ್ದು, ಹತ್ತು ಮಂದಿ ಮಹಿಳೆಯರೂ ಇದ್ದಾರೆ. ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ, ರಾಜಸ್ಥಾನ, ದೆಹಲಿ ಸಹಿತ ದೇಶದ ನಾನಾ ಭಾಗಗಳಿಂದ ವಾಹನ ಪ್ರೇಮಿ ಸ್ಪರ್ಧಿಗಳು ಇಲ್ಲಿ ಪಾಲ್ಗೊಂಡಿದ್ದು, ಕೆಲವರು ಸತತ ಐದನೇ ಬಾರಿಗೆ ಇಲ್ಲಿಗೆ ಬಂದಿದ್ದಾರೆ.

‘ಇಲ್ಲಿನ ಟ್ರ್ಯಾಕ್‌ ಬಹಳ ಚೆನ್ನಾಗಿದೆ. ಹೆಚ್ಚೇನೂ ಭೂಮಿ ಅಗೆಯದೆ ಇದ್ದ ಪರಿಸರದಲ್ಲೇ ಅತ್ಯುತ್ತಮ ಆಫ್‌ರೋಡ್ ಟ್ರ್ಯಾಕ್‌ ಸಿದ್ಧಗೊಂಡಿದೆ. ಇದು ಸವಾರರಿಗೆ ನಿಜಕ್ಕೂ ಸವಾಲು ಒಡ್ಡುತ್ತಿದ್ದು, ಇಲ್ಲಿ ಸ್ಪರ್ಧಿಸುವ ಅನುಭವ ವಿಶಿಷ್ಟವಾದುದು’ ಎಂದು ತಮಿಳುನಾಡಿನ ಸ್ಪರ್ಧಿ ಸುರೇಶ್ ಎಂಬವುವರು ತಮ್ಮ ಅನುಭವ ಹಂಚಿಕೊಂಡರು. ಅವರು ಸ್ಟಾಕ್‌ ವಿಭಾಗದಲ್ಲಿ ಸಹ ಚಾಲಕರಾಗಿದ್ದಾರೆ.

ಸುಪ್ರೀಂ ಕೋರ್ಟ್‌ ವಕೀಲ ದರ್ಪಣ್‌ ಗೌಡ ಅವರು ಈ ಮೋಟಾರ್‌ ಸ್ಫೋರ್ಟ್‌ ಸಂಘಟನಾ ಸಮಿತಿಯ ಅಧ್ಯಕ್ಷರಾಗಿದ್ದು, ಬೆಂಗಳೂರಿನ ರೋಹಿತ್ ಗೌಡ ಅವರು ಸಹ ಸಂತೋಷ್  ಅವರೊಂದಿಗೆ ಸಹ ಕ್ರೀಡೆಯ ಯಶಸ್ಸಿಗೆ ಕೈಜೋಡಿಸಿದ್ದಾರೆ. ಅಶ್ವಿನ್‌ ನಾಯಕ್‌, ಮಂಜುನಾಥ ಸಹಿತ ಸ್ಥಳೀಯರು ಈ ಸಾಹಸ ಕ್ರೀಡೆಯ ಆಯೋಜನೆಯಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.

ವಾಕಿಟಾಕಿಗಳೊಂದಿಗೆ ಸಜ್ಜಾಗಿದ್ದ 60ಕ್ಕೂ ಅಧಿಕ ಮಂದಿ ಸುರಕ್ಷಿತವಾಗಿ ಮೋಟಾರ್‌ ಸ್ಫೋರ್ಟ್‌ ಆಯೋಜಿಸುವಲ್ಲಿ ಮುತುವರ್ಜಿ ವಹಿಸಿದ್ದು, ಅಗ್ನಿಶಾಮಕ ವಾಹನ, ಆಂಬುಲೆನ್ಸ್‌, ಕ್ರೇನ್‌ ಸಹಿತ ಅಗತ್ಯದ ಸೌಲಭ್ಯಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು. ನೂರಕ್ಕೂ ಅಧಿಕ ತಂತ್ರಜ್ಞರು, ಸಿಬ್ಬಂದಿ ಒಟ್ಟಾರೆ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಪೊಲೀಸರು ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು.

ಶುಕ್ರವಾರ ಸಂಜೆ ಶಾಸಕ ಎಚ್‌.ಆರ್.ಗವಿಯಪ್ಪ ಅವರು ಈ ಮೋಟಾರ್‌ ಸ್ಪೋರ್ಟ್ಸ್‌ಗೆ ಹಸಿರು ನಿಶಾನೆ ತೋರಿಸಿದ್ದರು. 

2019ರಲ್ಲಿ ಎಂಎವಿ ಸ್ಥಾಪನೆ:

ವಾಹನ ಚಾಲನೆಯಲ್ಲಿ ಆಸಕ್ತಿ ಇರುವ ಉತ್ಸಾಹಿಗಳು ಸೇರಿಕೊಂಡು 2019ರಲ್ಲಿ ವಿಜಯನಗರ ಮೋಟಾರ್‌ಸ್ಫೋರ್ಟ್ಸ್‌ ಅಕಾಡೆಮಿ (ಎಂಎವಿ) ಸ್ಥಾಪಿಸಿದ್ದರು. ಇಂದು ಈ ಅಕಾಡೆಮಿ ಉತ್ತರ ಕರ್ನಾಟಕ ಭಾಗದ ಅತ್ಯಂತ ಕ್ರಿಯಾಶೀಲ ಮೋಟಾರ್‌ ಸ್ಫೋರ್ಟ್‌ ತರಬೇತಿ ಸಂಸ್ಥೆಯಾಗಿ ಬದಲಾಗಿದ್ದು, ಉತ್ಸವ್‌  ದಿ ಹಂಪಿ ಅದರ ಬಹಳ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದೆನಿಸಿದೆ. ಈಗಾಗಲೇ ಈ ಅಕಾಡೆಮಿ ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್‌ಷಿಪ್‌ ನಡೆಸಿದೆ.

ಹೊಸಪೇಟೆ ಈಗ ಆಫ್‌ರೋಡ್‌ ನೆಚ್ಚಿನ ತಾಣ

‘ದೇಶದಲ್ಲಿ ಒಟ್ಟು ನಾಲ್ಕು ಕಡೆಗಳಲ್ಲಿ ಮಾತ್ರ ರಾಷ್ಟ್ರೀಯ ಮಟ್ಟದ ಆಫ್‌ರೋಡ್ ಚಾಲೆಂಜ್‌ ನಡೆಯುತ್ತಿದೆ. ಹೊಸಪೇಟೆ ಈಗಾಗಲೇ ಈ ವಿಚಾರದಲ್ಲಿ ಖ್ಯಾತವಾಗಿದೆ. ಗೋವಾ ಕೇರಳ ಮತ್ತು ರಾಜಸ್ಥಾನಗಳಲ್ಲಿ ಮಾತ್ರ ಇದೇ ರೀತಿಯ ರಾಷ್ಟ್ರೀಯ ಚಾಲೆಂಜ್ ನಡೆಯುತ್ತಿದೆ. ಹೀಗಾಗಿ ರಾಜ್ಯದಲ್ಲಿ ಆಫ್‌ ರೋಡ್‌ ಮೋಟಾರ್‌ ಸ್ಪೋರ್ಟ್ಸ್‌ಗೆ ಹೊಸಪೇಟೆ ಸುತ್ತಮುತ್ತಲಿನ ಬೆಟ್ಟಗಳು ಕಣಿವೆಗಳು ಬಹಳ ಸೂಕ್ತವಾಗಿ ಹೊಂದಿಕೆಯಾಗಿವೆ’ ಎಂದು ಮೋಟಾರ್‌ ಸ್ಫೋರ್ಟ್ಸ್‌ನ ಆಯೋಜಕರಲ್ಲಿ ಒಬ್ಬರಾದ ಸಂತೋಷ್‌ ಎಚ್.ಎಂ.‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರೊ ಮಾಡಿಫೈಡ್‌ ಅತ್ಯಂತ ಶಕ್ತಿಶಾಲಿ

ಪ್ರೊ ಮಾಡಿಫೈಡ್ ವಾಹನಗಳು ಅತ್ಯಂತ ಶಕ್ತಿಶಾಲಿ ವಾಹನಗಳು. ಅತ್ಯಂತ ಕಡಿದಾದ ಬೆಟ್ಟ ಕಂದರ ಕಣಿವೆ ಇಳಿದು ಹತ್ತುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿರುತ್ತದೆ. ವಿಂಚಿಂಗ್‌ ಈ ವಾಹನಗಳ ವೈಶಿಷ್ಟ್ಯಗಳಲ್ಲಿ ಒಂದು. ಒಂದೊಂದು ವಾಹನಕ್ಕೆ ಕೆಲವೊಬ್ಬರು ₹1 ಕೋಟಿಗೂ ಅಧಿಕ ವೆಚ್ಚ ಮಾಡಿದ್ದೂ ಇದೆ.  ಮಾಡಿಫೈಡ್‌ ವಿಭಾಗ ಎಂದರೆ ಟಯರ್‌ ಬದಲಿಸುವುದು ಮತ್ತು ಇತರ ಸಣ್ಣಪುಟ್ಟ ಬದಲಾವಣೆ ಮಾಡಿದಂತಹ ವಾಹನಗಳು. ಸ್ಟಾಕ್‌ ವಿಭಾಗ ಎಂದರೆ ಯಾವುದೇ ಬದಲಾವಣೆ ಮಾಡದಂತಹ ಶೋರೂಂನಿಂದ ತರುವಾಗ ಇರುವ ರೀತಿಯ ವಾಹನ.

ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಈ ಸ್ಫೋರ್ಟ್ಸ್‌ ಸಹಕಾರಿ ಆಗಲಿದೆ ವಿವಿಧ ಇಲಾಖೆಗಳು ನೀಡುತ್ತಿರುವ ಸಹಕಾರವೂ ಸ್ತುತ್ಯರ್ಹ.
ಸಂತೋಷ್‌ ಎಚ್‌.ಎಂ., ಮೋಟಾರ್‌ ಸ್ಫೋರ್ಟ್ಸ್‌ ಸಂಘಟಕ
ಹೊಸಪೇಟೆ ಸಮೀಪದ ಕಾರಿಗನೂರಿನಲ್ಲಿ ಶನಿವಾರ ನಡೆದ ಮೋಟಾರ್ ಸ್ಫೋರ್ಟ್ಸ್‌ನ ಒಂದು ರೋಮಾಂಚಕ ದೃಶ್ಯ  –ಪ್ರಜಾವಾಣಿ ಚಿತ್ರ/ ಲವ ಕೆ.
ಹೊಸಪೇಟೆ ಸಮೀಪದ ಕಾರಿಗನೂರಿನಲ್ಲಿ ಶನಿವಾರ ನಡೆದ ಮೋಟಾರ್ ಸ್ಫೋರ್ಟ್ಸ್‌ನ ಒಂದು ರೋಮಾಂಚಕ ದೃಶ್ಯ  –ಪ್ರಜಾವಾಣಿ ಚಿತ್ರ/ ಲವ ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT