ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸ್ತುವಾರಿ ಸಚಿವ ಜಮೀರ್ ವಿರುದ್ಧ ಸಿಡಿದೆದ್ದ ವಿಜಯನಗರ ಜಿಲ್ಲಾ ಕಾಂಗ್ರೆಸ್ ಘಟಕ

‘ತಕ್ಷಣ ಸಚಿವರನ್ನು ಬದಲಿಸಿ, ತಪ್ಪಿದಲ್ಲಿ ಪಕ್ಷ ಇನ್ನಷ್ಟು ಛಿದ್ರ’
Published 6 ಫೆಬ್ರುವರಿ 2024, 8:57 IST
Last Updated 6 ಫೆಬ್ರುವರಿ 2024, 8:57 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಜಿಲ್ಲಾ ಕಾಂಗ್ರೆಸ್ ಘಟಕ ತಿರುಗಿಬಿದ್ದಿದ್ದು, ತಕ್ಷಣ ಉಸ್ತುವಾರಿ ಸಚಿವರನ್ನು ಬದಲಿಸಬೇಕು, ತಪ್ಪಿದಲ್ಲಿ ಈಗಾಗಲೇ ಮೂರು ಬಣಗಳಾಗಿ ಛಿದ್ರವಾಗಿರುವ ಪಕ್ಷ ಇನ್ನಷ್ಟು ಛಿದ್ರಗೊಳ್ಳುವ ಅಪಾಯ ಇದೆ ಎಂದು ಎಚ್ಚರಿಸಿದೆ.

‘ಅಪರೂಪಕ್ಕೆ ಜಿಲ್ಲೆಗೆ ಬರುವ ಉಸ್ತುವಾರಿ ಸಚಿವರಿಗೆ ಅವರದೇ ಇಲಾಖೆಯಾಗಿರುವ ವಸತಿ ಸಮಸ್ಯೆಗಳ ಬಗ್ಗೆ ಗಮನ ಕೊಡುವ ಆಸಕ್ತಿಯೇ ಇಲ್ಲ. ಬದಲಿಗೆ ₹ 5 ಸಾವಿರ ಕೊಟ್ಟು ಪ್ರಚಾರ ಪಡೆಯುವ ಗೀಳು ಶುರುವಾಗಿದೆ. ಅವರ ವಿರುದ್ಧ ಸಾಕಷ್ಟು ಭಷ್ಟಾಚಾರ ದೂರುಗಳೂ ಕೇಳಿಬರತೊಡಗಿವೆ. ಅವರನ್ನು ಇನ್ನಷ್ಟು ದಿನ ಉಸ್ತುವಾರಿ ಸಚಿವರನ್ನಾಗಿ ಉಳಿಸಿಕೊಂಡರೆ ಪಕ್ಷಕ್ಕೆ ಸರಿಪಡಿಸಲಾಗದಂತಹ ಹಾನಿ ಉಂಟಾಗಬಹುದು’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿರಾಜ್‌ ಶೇಖ್ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಖಾಸಗಿ ಏಜೆಂಟ್‌ಗಳನ್ನು ಇಟ್ಟುಕೊಂಡು ಕೆಲಸ ಮಾಡಿಸುತ್ತಿದ್ದಾರೆ. ಇಂತಹ ಮೂರ್ನಾಲ್ಕು ಜನರು ಸರ್ಕಾರಿ ವೇದಿಕೆಗಳಲ್ಲಿ, ಪ್ಲೆಕ್ಸ್‌ಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಪಕ್ಷದ ಅಧ್ಯಕ್ಷರಿಗೆ, ಕಾರ್ಯಕರ್ತರಿಗೆ ಬೆಲೆಯನ್ನೇ ನೀಡುತ್ತಿಲ್ಲ. ಸ್ಥಳೀಯ ಶಾಸಕರನ್ನೂ ಕಡೆಗಣಿಸಿ ತಮ್ಮ ಇಷ್ಟದಂತೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ’ ಎಂದು ಸಿರಾಜ್ ಶೇಖ್ ದೂರಿದರು.

‘ಜಮೀರ್ ಅವರು ಮುಖ್ಯಮಂತ್ರಿ ಅವರಿಗೆ ಆಪ್ತ ಇರಬಹುದು, ಆದರೆ ಜಿಲ್ಲೆಯಲ್ಲಿ ಕೆಲವ ಮಾಡುವುದಕ್ಕೆ ಒಂದು ರೀತಿ, ರಿವಾಜು ಇರುತ್ತದೆ. ಅವರ ವಿರುದ್ಧ ಮಾತನಾಡಿದ್ದಕ್ಕೆ ಪಕ್ಷದ ಅಧ್ಯಕ್ಷ ಸ್ಥಾನದಿಂದ ನನ್ನನ್ನು ಕಿತ್ತುಹಾಕುವ ಸಾಧ್ಯತೆಯೂ ಇದೆ. ಅದಕ್ಕೆ ನಾನು ಸಿದ್ಧನಿದ್ದೇನೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆ ಇಂತಹ ಬೆಳವಣಿಗೆ ಆಗಬಾರದಿತ್ತು. ಪಕ್ಷಕ್ಕೆ ಇನ್ನಷ್ಟು ಹಾನಿ ಆಗುವುದನ್ನು ತಪ್ಪಿಸುವ ಸಲುವಾಗಿಯೇ ನಾನು ಸಚಿವರ ವಿರುದ್ಧ ಈಗ ಧ್ವನಿ ಎತ್ತಿದ್ದೇನೆ’ ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಸಂಪೂರ್ಣ ಕಡೆಗಣನೆ: ‘ಹಂಪಿ ಉತ್ಸವ ಯಶಸ್ವಿಯಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ, ಹಂಪಿ ಉತ್ಸವದಲ್ಲಿ ಪಕ್ಷದ ಕಾರ್ಯಕರ್ತರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಪಕ್ಷದ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಉತ್ಸವಕ್ಕೆ ಆಹ್ವಾನ ನೀಡಿಲ್ಲ, ಹೊಸಪೇಟೆ ನಗರಸಭೆ ಸದಸ್ಯರನ್ನೂ ಆಹ್ವಾನಿಸಿರಲಿಲ್ಲ. ಇದರಿಂದ ಕಾರ್ಯಕರ್ತರ ಉತ್ಸಾಹ ಕುಸಿಯುವಂತಾಗುತ್ತದೆ’ ಎಂದು ಡಿಸಿಸಿ ಅಧ್ಯಕ್ಷರು ಹೇಳಿದರು.

ಕೆಪಿಸಿಸಿಗೆ ದೂರು

ಜಿಲ್ಲೆಯಲ್ಲಿ ಪಕ್ಷಕ್ಕೆ ಎದುರಾಗಿರುವ ಸಮಸ್ಯೆಗಳ ಕುರಿತು ಈಗಾಗಲೇ ಕೆಪಿಸಿಸಿಗೆ ದೂರು ನೀಡಲಾಗಿದೆ. ಆದರೆ ಪಕ್ಷವನ್ನು ನಾಶಪಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿರುವುದರಿಂದ ಬಹಿರಂಗವಾಗಿ ಸಚಿವರ ವಿರುದ್ಧ ಹೇಳಿಕೆ ನೀಡಿರುವುದಾಗಿ ಸಿರಾಜ್‌ ಶೇಖ್ ತಿಳಿಸಿದರು.

ಪ್ರಚಾರ ಪ್ರಿಯ ಕೆಲ ಅಧಿಕಾರಿಗಳು ಇದೀಗ ಸಚಿವರ ಖಾಸಗಿ ವ್ಯಕ್ತಿಗಳೊಂದಿಗೆ ಸೇರಿಕೊಂಡು ಆಡಳಿತ ನಡೆಸತೊಗಡಗಿದ್ದಾರೆ. ಇಂತಹವರಿಂದ ಸರ್ಕಾರಕ್ಕೆ, ಆ ಮೂಲಕ ಆಡಳಿತಾರೂಢ ಪಕ್ಷಕ್ಕೆ ಕೆಟ್ಟ ಹೆಸರು ಬಂದರೆ ಅದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT