ಹೊಸಪೇಟೆ (ವಿಜಯನಗರ): ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಆನ್‌ಲೈನ್‌ನಲ್ಲಿ ಮತದಾನ ಪ್ರಕ್ರಿಯೆ ಭರದಿಂದ ಸಾಗಿದ್ದು, ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲೂ ಕಂಡುಬರದಂತಹ ಉತ್ಸಾಹ ಮತ್ತು ಪೈಪೋಟಿ ವಿಜಯನಗರ ಜಿಲ್ಲೆಯಲ್ಲಿ ಕಾಣಿಸಿದೆ. ಜತೆಗೆ ಹಣದ ಹೊಳೆಯೂ ಧಾರಾಳವಾಗಿ ಹರಿಯುತ್ತಿರುವ ಶಂಕೆ ವ್ಯಕ್ತವಾಗಿದೆ.
ಕಣದಲ್ಲಿ 13 ಮಂದಿ ಇದ್ದರೂ, ಅಶೋಕ್ ಬಿ.ನಾಯ್ಕ್ ಮತ್ತು ಶೇಖ್ ತಾಜುದ್ದೀನ್ ಅವರ ನಡುವೆ ನೇರ ಪೈಪೋಟಿಯ ವಾತಾವರಣ ನೆಲೆಸಿದೆ ಎಂದು ಹೇಳಲಾಗುತ್ತಿದೆ. ಬಳ್ಳಾರಿಯಿಂದ ಪ್ರತ್ಯೇಕಗೊಡು ವಿಜಯನಗರ ಜಿಲ್ಲೆ ರಚನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಯುವ ಕಾಂಗ್ರೆಸ್ ಘಟಕಕ್ಕೆ ಚುನಾವಣೆ ನಡೆಯುತ್ತಿದ್ದು, ಹಿರಿಯರ ಹಸ್ತಕ್ಷೇಪ ಇಲ್ಲ ಎಂದು ಹೇಳುತ್ತಿದ್ದರೂ, ಪಕ್ಷದ ವಲಯದಲ್ಲಿ ಎರಡು ಬಣಗಳಾಗಿ ವಿಭಜನೆಗೊಂಡು ಗೆಲ್ಲಿಸಿಕೊಂಡು ಬರುವ ಜಿದ್ದು ನೆಲೆಸಿದೆ ಎಂದು ಹೇಳಲಾಗುತ್ತಿದೆ.
‘ಈ ಹಿಂದೆ ನಡೆದ ಯುವ ಕಾಂಗ್ರೆಸ್ ಅಂತರಿಕ ಚುನಾವಣೆಯಲ್ಲಿ ಈ ತರಹದ ಪೈಪೋಟಿ ಇರುತ್ತಿರಲಿಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತರು ಚುನಾವಣೆಯಲ್ಲಿ ಭಾಗವಹಿಸಿ ಪದಾಧಿಕಾರಿಗಳಾಗಿ ಆಯ್ಕೆಯಾಗುತ್ತಿದ್ದರು. ಈಗ ನಡೆಯುತ್ತಿರುವ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಹಣ ಬಲ, ತೋಳ್ಬಲ ಕಂಡುಬರುತ್ತಿದೆ, ಅತಿ ಹೆಚ್ಚಿನ ಮತಗಳನ್ನು ಹಾಕಿಸುವವರಿಗೆ, ಮತ ಹಾಕುವವರಿಗೆ ಹಣ ನೀಡಿ, ಅತಿ ಹೆಚ್ಚು ಮತಗಳನ್ನು ಹಾಕಿಸುವ ಮುಖಂಡರಿಗೆ, ಯುವಕರಿಗೆ ದುಬಾರಿ ಉಡುಗೊರೆಗಳನ್ನು, ವಿದೇಶಿ ಪ್ರವಾಸಗಳನ್ನು ವ್ಯವಸ್ಥೆ ಮಾಡಿಸುವ ಭರವಸೆಗಳನ್ನು ನೀಡುತ್ತಿರುವ ಕುರಿತು ಮಾಹಿತಿ ಲಭಿಸಿದೆ’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ವಿಶೇಷವೆಂದರೆ ಕಾಂಗ್ರೆಸ್ ಹೊರತುಪಡಿಸಿ ಇನ್ನೊಂದು ಪಕ್ಷದ ಶಾಸಕರೊಬ್ಬರು ಸಹ ಯುವ ಕಾಂಗ್ರೆಸ್ ಚುನಾವಣೆಗೆ ವಿಶೇಷ ಆಸಕ್ತಿ ತೋರಿಸುತ್ತಿರುವ ಮಾಹಿತಿ ಲಭಿಸಿದೆ. ಇದಕ್ಕೆ ಸೆಡ್ಡು ಹೊಡೆಯಲು ಇನ್ನೊಂದು ಬಣದಲ್ಲಿ ಸಹ ಬಹಳ ಸಕ್ರಿಯ ಚಟುವವಟಿಕೆ ನಡೆದಿದೆ. ಹೀಗಾಗಿ ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲೂ ಕಾಣಿಸದ ತುರಿಸಿನ ಪೈಪೋಟಿ ಈ ಜಿಲ್ಲೆಯಲ್ಲಿ ಮಾತ್ರ ಕಾಣಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೈಕೊಟ್ಟ ಶಾಸಕ: ಕಾಂಗ್ರೆಸ್ ಶಾಸಕರೊಬ್ಬರು ತಮ್ಮ ಪರವಾಗಿ ಕೆಲಸ ಮಾಡಿದ್ದ ಯುವಕರೊಬ್ಬರಿಗೆ ವಾಗ್ದಾನ ನೀಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ತಮ್ಮ ಮಾತಿಗೆ ವಿರುದ್ಧವಾಗಿ ನಡೆದುಕೊಂಡು ಕೈಕೊಟ್ಟರು ಎಂಬ ಆರೋಪ ಕೇಳಿಬಂದಿದೆ. ಮತ್ತೊಂದೆಡೆ ಉನ್ನತ ಸ್ಥಾನ ಅಲಂಕರಿಸಿದ ಹಿರಿಯ ನಾಯಕರು ಸಹ ‘ಯುವ ನಾಯಕ’ರಿಂದ ಲಕ್ಷಗಟ್ಟಲೆ ದುಡ್ಡು ಪಡೆದಿದ್ದಾರೆ ಎಂಬ ವಿಷಯವೂ ಪಕ್ಷದ ವಲಯದಲ್ಲಿ ಚರ್ಚೆಯಾಗುತ್ತಿದೆ.
ಇದು ಯುವಕರಿಗಾಗಿಯೇ ಇರುವ ಚುನಾವಣೆ ಪಕ್ಷದ ಹಿರಿಯ ನಾಯಕರು ಶಾಮೀಲಾಗಬಾರದು ಎಂಬ ಸ್ಪಷ್ಟ ಸೂಚನೆ ಇದೆ ಅದನ್ನು ಪಾಲಿಸಲಾಗುತ್ತಿದೆ.ಸಿರಾಜ್ ಶೇಖ್, ಅಧ್ಯಕ್ಷ, ಕಾಂಗ್ರೆಸ್ ಜಿಲ್ಲಾ ಘಟಕ
13 ಮಂದಿ ಕಣದಲ್ಲಿ ಇಬ್ಬರ ನಡುವೆಯೇ ಪೈಪೋಟಿ
ವಿಜಯನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 13 ಮಂದಿ ಸ್ಪರ್ಧಿಸಿದ್ದಾರೆ. ಅವರೆಂದರೆ ಭರತ್ ಕುಮಾರ್ ಸಿ.ಆರ್. ಅಶೋಕ್ ಬಿ.ನಾಯ್ಕ್ ಜೀಶನ್ ಎಂ.ಡಿ. ಕೆ.ಇಮ್ತಿಯಾಜ್ ನಾಗರಾಜ್ ಬಾದಲಡಕಿ ಹರಿಶ್ಚಂದ್ರ ನಾಯ್ಕ್ ಎಲ್.ಎಲ್. ಶೇಖ್ ತಾಜುದ್ದೀನ್ ಶಿವಪ್ಪ ಎಚ್. ಪ್ರವೀಣ್ ಕುಮಾರ್ ಟಿ. ಆಯೇಷಾ ಬೇಗಂ ಸಿ. ಶೌಕತ್ ಜಿ. ಶಿವಣ್ಣ ಕೆ.ವಿ. ನಾಗರಾಜ ಶೇಖರ್. ಈ ಪೈಕಿ ಅಶೋಕ್ ನಾಯ್ಕ್ ಮತ್ತು ಶೇಖ್ ತಾಜುದ್ದೀನ್ ಅವರ ನಡುವೆಯೇ ನೇರ ಪೈಪೋಟಿ ಇದೆ ಈ ಇಬ್ಬರ ಪೈಕಿ ಒಬ್ಬರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಕೆಲವು ಅಭ್ಯರ್ಥಿಗಳು ತಟಸ್ಥರಾಗಿ ಇರುವ ನಿಟ್ಟಿನಲ್ಲಿ ಒಳ ಒಪ್ಪಂದ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮತದಾನ ಹೇಗೆ?
ಯುವ ಕಾಂಗ್ರೆಸ್ ಸದಸ್ಯತ್ವ ಪಡೆದ ಯುವಕ ಒಟ್ಟು ಆರು ಮತಗಳನ್ನು ಚಲಾಯಿಸಲು ಅವಕಾಶ ಇದೆ. ‘ಐವೈಸಿ’ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಚುನಾವಣೆ ಆಯೋಗ ನೀಡಿರುವ ಗುರುತಿನ ಚೀಟಿಯನ್ನು ಹೊಂದಿರುವವರು ಮತ ನೀಡಲು ಅವಕಾಶ ಇದೆ. 1ನೇ ಮತವನ್ನು ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಗೆ 2ನೇ ಮತ ರಾಜ್ಯ ಉಪಾಧ್ಯಕ್ಷ ಅಥವಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಭ್ಯರ್ಥಿಗಳಿಗೆ 3ನೇ ಮತ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿಗೆ 4ನೇ ಮತ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿಗೆ 5ನೇ ಮತ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗೆ ಹಾಗೂ 6ನೇ ಮತವನ್ನು ಬ್ಲಾಕ್ ಅಥವಾ ಮಂಡಲ ಅಭ್ಯರ್ಥಿಗೆ ಚಲಾಯಿಸಬೇಕು. ಜತೆಗೆ ₹50 ಶುಲ್ಕವನ್ನೂ ಪಾವತಿಸಬೇಕು. ಎಲ್ಲವೂ ವ್ಯವಸ್ಥಿತವಾಗಿಯೇ ನಡೆಯುತ್ತಿದ್ದರೂ ಯುವಕರನ್ನು ಓಲೈಸಲು ನಡೆಯುವ ಕಸರತ್ತು ವಿಶೇಷವಾಗಿ ಗಮನ ಸೆಳೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.