ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಬಿಜೆಪಿ ಕಾರ್ಯಕಾರಿಣಿಯಲ್ಲಿ ವಿಜಯನಗರ ವೈಭವ

Last Updated 15 ಏಪ್ರಿಲ್ 2022, 16:02 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಶನಿವಾರದಿಂದ (ಏ.16) ಆರಂಭವಾಗಲಿರುವ ಎರಡು ದಿನಗಳ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ವಿಜಯನಗರ ವೈಭವ ನೆನಪಿಸುವಂತೆ ಕಾರ್ಯಕ್ರಮ ರೂಪಿಸಿರುವುದು ವಿಶೇಷ.

ನಗರದ ಭಟ್ರಹಳ್ಳಿ ಆಂಜನೇಯ ದೇವಸ್ಥಾನದ ಪರಿಸರದಲ್ಲಿ ಕಾರ್ಯಕಾರಿಣಿ ನಡೆಯಲಿದ್ದು, ಸ್ವಾಗತ ಕಮಾನು, ಪ್ರವೇಶ ದ್ವಾರ, ವೇದಿಕೆಯಲ್ಲಿ ವಿಜಯನಗರ ಸಾಮ್ರಾಜ್ಯದ ಕುರುಹುಗಳಿರುವುದು ವಿಶೇಷ. ಸ್ವಾಗತ ಕಮಾನಿನಲ್ಲಿ ಕಲ್ಲಿನ ರಥದ ಪ್ರತಿಕೃತಿ ನಿರ್ಮಿಸಲಾಗಿದೆ.

ಇನ್ನು, ಸಪ್ತಸ್ವರ ಮಂಟಪವನ್ನು ಹೋಲುವಂತೆ ಮಹಾದ್ವಾರ ಮಾಡಲಾಗಿದೆ. ವೇದಿಕೆಯಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನದ ಬಿಷ್ಟಪ್ಪಯ್ಯ ಗೋಪುರ, ಉಗ್ರ ನರಸಿಂಹ, ಆಂಜನೇಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಮುಂಭಾಗದಲ್ಲಿ ಮಿನಿ ತುಂಗಭದ್ರಾ ಜಲಾಶಯ ತಲೆ ಎತ್ತಿದ್ದು, ಜುಳು ಜುಳು ನೀರು ಹರಿದು ಹೋಗಲು ವ್ಯವಸ್ಥೆ ಮಾಡಿದ್ದು, ಎಲ್ಲರನ್ನೂ ಅದು ಆಕರ್ಷಿಸುತ್ತಿದೆ.

ಮಹಾದ್ವಾರಕ್ಕೆ ಅಂಜನಾದೇವಿ, ಸಭಾ ಮಂಟಪಕ್ಕೆ ಮಹರ್ಷಿ ಮಾತಂಗಮುನಿ ಅವರ ಹೆಸರಿಡಲಾಗಿದೆ. ಸಭಾ ಮಂಟಪದಲ್ಲಿ 800ಕ್ಕೂ ಹೆಚ್ಚು ಜನ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇಡೀ ಮಂಟಪದಲ್ಲಿ ಎ.ಸಿ. ವ್ಯವಸ್ಥೆ ಮಾಡಲಾಗಿದೆ. ಅದರ ಮಗ್ಗುಲಲ್ಲೇ ಕುಳಿತುಕೊಂಡು ಊಟ ಮಾಡಲು ಭೋಜನ ಮನೆ ನಿರ್ಮಿಸಲಾಗಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಭಿತ್ತಿಪತ್ರ, ಮುಖಂಡರ ಭಾವಚಿತ್ರಗಳ ಕಲಾಕೃತಿಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕೆ ಮಹರ್ಷಿ ವಾಲ್ಮೀಕಿ ಪ್ರದರ್ಶಿನಿ ಎಂದು ಹೆಸರಿಡಲಾಗಿದೆ. ನಗರದ ವಿವಿಧ ಭಾಗಗಳಿಂದ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲೂ ಬಿಜೆಪಿ ಬಾವುಟ, ಕಟೌಟ್‌, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಪ್ರಮುಖ ಮಾರ್ಗಗಳಲ್ಲಿ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿದೆ. ಇಡೀ ನಗರ ಬಿಜೆಪಿ ಮಯವಾಗಿದೆ. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಇಡೀ ದಿನ ಕಾರ್ಯಕ್ರಮ ನಡೆಯಲಿರುವ ಸ್ಥಳದಲ್ಲಿ ಓಡಾಡಿ ಸಿದ್ಧತೆ ಪರಿಶೀಲಿಸಿದರು.

ಕಾರ್ಯಕ್ರಮ ನಡೆಯಲಿರುವ ಸ್ಥಳದಲ್ಲಿ ಸಿದ್ಧತೆ ಪರಿಶೀಲಿಸಿದ ಆನಂದ್ ಸಿಂಗ್
ಕಾರ್ಯಕ್ರಮ ನಡೆಯಲಿರುವ ಸ್ಥಳದಲ್ಲಿ ಸಿದ್ಧತೆ ಪರಿಶೀಲಿಸಿದ ಆನಂದ್ ಸಿಂಗ್

ಭದ್ರತೆಗೆ ಮೂರು ಜಿಲ್ಲೆ ಪೊಲೀಸರು

ಬಿಜೆಪಿ ಕಾರ್ಯಕಾರಿಣಿ ನಡೆಯಲಿರುವ ಸ್ಥಳದಲ್ಲಿ ಭದ್ರತೆ ಒದಗಿಸಲು ಮೂರು ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ.

‘ಶನಿವಾರ ಬಿಜೆಪಿ ಕಾರ್ಯಕಾರಿಣಿ ಹಾಗೂ ಹಂಪಿಯಲ್ಲಿ ಜೋಡಿ ರಥೋತ್ಸವ ನಡೆಯಲಿದೆ. ಸಾವಿರಾರು ಜನ ಸೇರುವ ನಿರೀಕ್ಷೆ ಇರುವುದರಿಂದ ಬಳ್ಳಾರಿ, ಕೊಪ್ಪಳ, ರಾಯಚೂರಿನಿಂದ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಬಿಜೆಪಿ ಸಭೆ ನಡೆಯಲಿರುವ ಸ್ಥಳದಲ್ಲಿ ಎಂದಿನಂತೆ ಸಾರ್ವಜನಿಕರ ವಾಹನಗಳು ಸಂಚರಿಸಬಹುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಝಡ್‌ ಪ್ಲಸ್‌ ಭದ್ರತೆ ಇರುವುದರಿಂದ ಅವರು ಬಂದು ಹೋಗುವ ವೇಳೆ ಕೆಲಕಾಲ ಸಂಚಾರ ನಿಯಂತ್ರಿಸಲಾಗುವುದು. ಆದರೆ, ಸಾರ್ವಜನಿಕರ ಸಂಚಾರ ಸಂಪೂರ್ಣ ಬಂದ್‌ ಮಾಡುವುದಿಲ್ಲ’ ಎಂದು ಎಸ್ಪಿ ಡಾ. ಅರುಣ್‌ ಕೆ. ‘ಪ್ರಜಾವಾಣಿ’ಗೆ ತಿಳಿಸಿದರು.

***
ಯಾವುದೇ ರೀತಿಯ ಕುಂದು ಕೊರತೆ ಆಗದಂತೆ ಬಿಜೆಪಿ ಕಾರ್ಯಕಾರಿಣಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಶಸ್ವಿಯಾಗಿ ನೆರವೇರಲಿದೆ.

–ಆನಂದ್‌ ಸಿಂಗ್‌, ಪ್ರವಾಸೋದ್ಯಮ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT