ಎಂ.ಜಿ.ಬಾಲಕೃಷ್ಣ
ಹೊಸಪೇಟೆ (ವಿಜಯನಗರ): ತಾಲ್ಲೂಕಿನ ನಾಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡಿ ಓಬಳಾಪುರದ ಸರ್ವೇ ನಂಬರ್ 44ರಲ್ಲಿನ 5.22 ಎಕರೆ ನಿವೇಶನವನ್ನು 92 ಮಂದಿ ಆಶ್ರಯ ಫಲಾನುಭವಿಗಳಿಗೆ ಮಂಜೂರು ಮಾಡಿ, ಹಕ್ಕುಪತ್ರ ನೀಡಿ 32 ವರ್ಷ ಕಳೆದಿದೆ. ಆದರೆ ಸೂರಿನ ಕನಸು ಮಾತ್ರ ನನಸಾಗಲೇ ಇಲ್ಲ!
ದೂರದ ಬೋರ್‌ವೆಲ್‌ನಿಂದ ಸೈಕಲ್‌ನಲ್ಲಿ ನೀರು ತರುತ್ತಿದ್ದ ಹನುಮಂತಪ್ಪ ಅವರ ವಯಸ್ಸು 66. ತಮಗೆ ದೊರೆತ ನಿವೇಶನದಲ್ಲಿ ಗುಡಿಸಲು ಹಾಕಿಕೊಂಡು ನೆಲೆಸಿದ್ದಾರೆ. ವಿದ್ಯುತ್ ಇಲ್ಲ. ನೀರಿಲ್ಲ. ಯಾವ ಸೌಲಭ್ಯವೂ ಇಲ್ಲ. 1991ರ ನವೆಂಬರ್ 19ರಂದು ತಮ್ಮಂತೆ 92 ಮಂದಿಗೆ ಪಟ್ಟಾ ನೀಡಿದ್ದಾಗ ತೆಗೆಸಿಕೊಂಡು ಫೋಟೊವನ್ನು ತೋರಿಸಿ ತಾವು 34 ವರ್ಷದವನಿದ್ದಾಗ ಹೀಗೆ ಇದ್ದೆ ಎಂದು ಬೊಚ್ಚುಬಾಯಿಯಲ್ಲಿ ನಗೆ ಬೀರಿದರು. ಆದರೆ ಸೂರಿನ ಕನಸು ನನಸಾಗದ ದುಗುಡ ಎದೆಯೊಳಗೆ ಮಡುಗಟ್ಟಿತ್ತು.
‘ಪಟ್ಟಾ ಪಡೆದ ಸಾಕಷ್ಟು ಮಂದಿ ಇಂದು ಇಲ್ಲ. ಸರ್ಕಾರ ಆಶ್ರಯ ಮನೆಯ ಭರವಸೆಯನ್ನಷ್ಟೇ ನೀಡಿತು, ಸೂರು ಕೊಡಲಿಲ್ಲ. ಪಂಚಾಯ್ತಿಯಲ್ಲಿ ಡಿಮಾಂಡ್ ರಿಜಿಸ್ಟರ್‌ನಲ್ಲಿ ಸೇರಿಸಿ ರಸೀದಿ ನೀಡಲಿಲ್ಲ. ಹೀಗಾಗಿ ಯಾವ ಸೌಲಭ್ಯವೂ ಸಿಗಲಿಲ್ಲ’ ಎಂದು ಅವರು ಅಳಲು ತೋಡಿಕೊಂಡರು.
ಸಮಸ್ಯೆಯ ಅರಿವಿದೆ. ಸರ್ಕಾರ ಈಗಷ್ಟೇ ರಚನೆಯಾಗಿದೆ. ಪಂಚಾಯ್ತಿಯ ಡಿಮಾಂಡ್ ರಿಜಸ್ಟರ್‌ನಲ್ಲಿ ಸೇರಿಸಿ ರಸೀದಿ ನೀಡಲು ಕ್ರಮ ಕೈಗೊಳ್ಳುವುದು.ನಿಶ್ಚಿತ ಎಚ್.ಆರ್.ಗವಿಯಪ್ಪ, ಶಾಸಕರು, ಹೊಸಪೇಟೆ
ಈ ಹಿಂದೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ನಾಗವೇಣಿ ಬಸವರಾಜ್ ಅವರು ಈ ನಿವೇಶನ ಅಭಿವೃದ್ಧಿಪಡಿಸಲು ಸ್ವಂತವಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿದ್ದರು. ಮೂರು ನೀರಿನ ಟ್ಯಾಂಕ್ ಕಟ್ಟಿಸಿಕೊಟ್ಟಿದ್ದರು. ಎರಡು ಕೊಳವೆ ಬಾವಿ ಕೊರೆಸಿದ್ದರು. ಒಂದಿಷ್ಟು ಕಾಂಕ್ರೀಟ್ ಚರಂಡಿಯನ್ನೂ ನಿರ್ಮಿಸಿದ್ದರು. ಬಳಿಕ ಆನಂದ್ ಸಿಂಗ್ ಅವರು ಶಾಸಕರಾಗಿದ್ದಾಗ ಎಂಎಲ್‌ಎ ನಿಧಿಯಿಂದ ದುಡ್ಡು ಮಂಜೂರು ಮಾಡಿಸಿದ್ದರು. ಯಾವಾಗ ಪಕ್ಕದ ದೇವಸ್ಥಾನದವರಿಂದ ವಿರೋಧ ವ್ಯಕ್ತವಾಯಿತೋ, ಆಗ ಎಂಎಲ್‌ಎ ನಿಧಿ ದೇವಸ್ಥಾನದ ರಸ್ತೆಗೆ ವರ್ಗಾವಣೆಗೊಂಡಿತು.
ಹೀಗೆ ಸರ್ವೇ ನಂಬರ್ 44ರಲ್ಲಿ ಹತ್ತಾರು ಗುಡಿಸಲುಗಳು ಇಂದು ಗಾಳಿಗೆ ಹಾರಿ ಹೋಗಿವೆ. ಬಾಡಿಗೆ ಕೊಟ್ಟು ಜೀವನ ಸಾಗಿಸಲು ಸಾಧ್ಯವಿಲ್ಲದ ಎರಡು ಮೂರು ಫಲಾನುಭವಿಗಳು ಇಲ್ಲಿ ಗುಡಿಸಲುಗಳಲ್ಲಿ ನೆಲೆಸಿದ್ದಾರೆ.
ಸರ್ಕಾರಿ ಕಚೇರಿಯಲ್ಲಿ ಮೂಲ ಪಟ್ಟಿ ಕಳೆದುಹೋದರೆ ಜನ ಹೇಗೆ ಹೊಣೆಗಾರರಾಗುತ್ತಾರೆ? ಹುಡುಕಿಸಿ ಫಲಾನುಭವಿಗಳಿಗೆ ವ್ಯವಸ್ಥೆ ಕಲ್ಪಿಸುವುದು ಮುಖ್ಯವಲ್ಲವೇ?.ರಘು ತಳವಾರ್, ಮೃತ ಫಲಾನುಭವಿ ಹೇಮಗಿರಿಯಪ್ಪ ಅವರ ಪುತ್ರ
‘ನಾನು ಇಲ್ಲಿಗೆ ಹೊಸದಾಗಿ ಬಂದಿದ್ದೇನೆ. ಮಾಹಿತಿ ತರಿಸಿಕೊಂಡು ಈ ವಿಷಯದ ಬಗ್ಗೆ ಗಮನ ಹರಿಸುತ್ತೇನೆ‘ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಪ್ರತಿಕ್ರಿಯಿಸಿದರು.
ಕಳೆದ ವರ್ಷ ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಫಲಾನುಭವಿಗಳಿಗೆ ಶೀಘ್ರ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದ್ದರು. ಬಳಿಕ ಏನೂ ಆಗಲಿಲ್ಲ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಇದು ವೋಟ್ ರಾಜಕಾರಣದ ವಿಷಯುವೂ ಆಗಿತ್ತು. ಮತ್ತೆ ಏನೂ ನಡೆಯಲಿಲ್ಲ. ಮಾಡದ ತಪ್ಪಿಗೆ ನಮಗೇಕೆ ಶಿಕ್ಷೆ ಎಂಬುದು ಜೀವದಲ್ಲಿರುವ ಫಲಾನುಭವಿಗಳು ಮತ್ತು ಮೃತ ಫಲಾನುಭವಿಗಳ ಕುಟುಂಬದವರ ಪ್ರಶ್ನೆ.
ಫಲಾನುಭವಿಗಳ ಪಟ್ಟಿಯೇ ಇಲ್ಲ!
‘ನಕ್ಷೆ ಮಾಡಿದ್ದು ನಿಜ. ಆಶ್ರಯ ಯೋಜನೆಯಲ್ಲಿ ಫಲಾನುಭವಿಗಳ ಪಟ್ಟಿ ಮುಖ್ಯ. ಇಲ್ಲಿ ಆ ಮೂಲ ಪಟ್ಟಿಯೇ ಇಲ್ಲ. ಕೆಲವೊಂದು ಹಕ್ಕುಪತ್ರಗಳಿಗೆ ಒಂದೇ ದಿನ ಇಬ್ಬರು ತಹಶೀಲ್ದಾರರು ಸಹಿ ಹಾಕಿದ್ದು ಇದೆ. ಕೆಲವು ದೃಢೀಕೃತ ಹಕ್ಕುಪತ್ರಗಳಿಗೆ ತಾಲ್ಲೂಕು ಪಂಚಾಯ್ತಿಯಿಂದಲೂ ದೃಢೀಕರಿಸಿ ಕೊಡಲಾಗಿದೆ. ಪಟ್ಟಿಯಲ್ಲಿ ಗೊಂದಲ ಇರುವ ಕಾರಣಕ್ಕೇ ಡಿಮಾಂಡ್ ರಿಜಿಸ್ಟರ್‌ನಲ್ಲಿ ಸೇರಿಸಿಲ್ಲ. ಮೇಲಧಿಕಾರಿಗಳು ಸೂಚಿಸಿದಂತೆ ಕ್ರಮ ಕೈಗೊಳ್ಳುತ್ತೇವೆ. ಈಗಿನ ಸ್ಥಿತಿಯಲ್ಲಿ ಕ್ರಮ ಕೈಗೊಂಡರೆ ಯಾರಾದರೂ ಕೋರ್ಟ್ ಮೆಟ್ಟಿಲು ಏರಿದರೆ ನಾವು ಹೊಣೆಗಾರರಾಗಬೇಕಾಗುತ್ತದೆ’ ಎಂದು ನಾಗೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ‘ಪ್ರಜಾವಾಣಿ‘ಗೆ ತಿಳಿಸಿದರು.
ಪಕ್ಕದ ದೇವಸ್ಥಾನದ ಕಡೆಯಿಂದ ಪಾರ್ಕಿಂಗ್ ಜಾಗಕ್ಕಾಗಿ ಈ ಜಾಗ ಬಿಟ್ಟುಕೊಡಬೇಕೆಂಬ ಒತ್ತಡ ಇದೆಯೇ ಎಂದು ಕೇಳಿದಾಗ ‘ಈ ಬಗ್ಗೆ ಮನವಿಗಳು ಬಂದಿರುವುದು ನಿಜ ಆದರೆ ಅದು ವಿಷಯವೇ ಅಲ್ಲ. ಮೂಲಪಟ್ಟಿ ದೊರೆತರೆ ಫಲಾನುಭವಿಗಳನ್ನು ಗುರುತಿಸಿ ಡಿಮಾಂಡ್ ರಿಜಿಸ್ಟರ್ ಮಾಡುವುದು ಸಾಧ್ಯ. ಆದರೂ ಮೇಲಧಿಕಾರಿಗಳು ಏನು ಸೂಚಿಸುತ್ತಾರೋ ಅದನ್ನು ಮಾಡುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.