ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹರಪನಹಳ್ಳಿ: ಕಲುಷಿತ ನೀರು ಪೂರೈಕೆ ತಡೆಗೆ ಕ್ಲೊರೊಸ್ಕೋಪ್

Published 20 ಮೇ 2024, 6:37 IST
Last Updated 20 ಮೇ 2024, 6:37 IST
ಅಕ್ಷರ ಗಾತ್ರ

ಹರಪನಹಳ್ಳಿ: ಕಲುಷಿತ ನೀರು ಸೇವನೆಯಿಂದ ಜನರು ಅಸ್ವಸ್ಥಗೊಳ್ಳುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿದ್ದು, ಇಂತಹ ಘಟನೆಗಳನ್ನು ತಪ್ಪಿಸಲು ಮತ್ತು ಜನರ ಆರೋಗ್ಯದ ಕಾಳಜಿಯಿಂದ ಇಲ್ಲಿಯ ಪುರಸಭೆ ನಿತ್ಯವೂ ಶುದ್ಧೀಕರಿಸಿದ ನೀರನ್ನು ಪರೀಕ್ಷಿಸಿ ಪಟ್ಟಣದ ಜನತೆಗೆ ಪೂರೈಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಈ ಕೆಲಸಕ್ಕಾಗಿ ಪುರಸಭೆ ನೀರಗಂಟಿಗಳಿಗೆ (ವಾಟರ್‌ಮನ್‌) ಕ್ಲೊರೊಸ್ಕೋಪ್ ಯಂತ್ರ ವಿತರಿಸಿದೆ. ಯಂತ್ರ ಹೊಂದಿರುವ 10 ಜನ ಸಿಬ್ಬಂದಿ ಪ್ರತಿದಿನ ಕ್ಲೊರೊಸ್ಕೋಪ್‌ನಲ್ಲಿ ನೀರಿನ ಮಾದರಿ ಪರೀಕ್ಷಿಸಿ, ನೀರಿನ ಗುಣಮಟ್ಟ ತಿಳಿದು, ನೀರು ಪೂರೈಸುತ್ತಾರೆ. ನೀರು ಶುದ್ಧೀಕರಣ ಆಗದಿದ್ದರೆ ಸರಬರಾಜು ಸ್ಥಗಿತಗೊಳಿಸಿ ಮತ್ತೊಮ್ಮೆ ಶುದ್ಧೀಕರಿಸಲು ಈ ಚಿಕ್ಕ ಯಂತ್ರ ನೀರಗಂಟಿಗಳಿಗೆ ಸಹಕಾರಿ ಆಗಿದೆ.

‘ಮೊದಲು ನೀರಿಗೆ ಬ್ಲೀಚಿಂಗ್ ಪೌಡರ್ ಬಳಸಲಾಗುತ್ತಿತ್ತು. ಆದರೆ ಈಗ ನೀರು ಶುದ್ದೀಕರಣ ಘಟಕದಲ್ಲಿ ಕ್ಲೊರಿನೇಷನ್ ಯಂತ್ರ ಅಳವಡಿಸಲಾಗಿದೆ. ಓವರ್ ಹೆಡ್ ಟ್ಯಾಂಕ್ ಮೂಲಕ ಪಟ್ಟಣದ ಜನತೆಗೆ ನೀರು ಪೂರೈಕೆ ನಡೆಯುತ್ತಿದೆ. ಇಲ್ಲಿಂದ ಹೊರ ಹೋಗುವ ನೀರು ಶುದ್ಧೀಕರಣವಾಗಿದೆ ಎಂಬುದನ್ನು ನಿತ್ಯ ನಮ್ಮ ನೀರಗಂಟಿಗಳು ಪರೀಕ್ಷಿಸುತ್ತಾರೆ’ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ.

‘ನಳಗಳ ನೀರಿನ ಮಾದರಿ ಪಡೆದು ಪರೀಕ್ಷಿಸಿದಾಗ ಓವರ್‌ಹೆಡ್ ಟ್ಯಾಂಕ್, ಸಂಪ್ ಅಥವಾ ಟ್ಯಾಂಕರ್‌ನ ನೀರು 2 ಪಿಪಿಎಂ ಕ್ಲೋರಿನ್, ನಳಗಳಲ್ಲಿ ಪರಿಶೀಲಿಸಿದಾಗ 0.2ರಿಂದ 0.5 ಪಿಪಿಎಂ ಕ್ಲೋರಿನ್ ಪ್ರಮಾಣ ಇರಬೇಕು. ನೀರು ಕುಡಿಯುಲು ಯೋಗ್ಯವಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಪೂರೈಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಪಟ್ಟಣದ 18ನೇ ವಾರ್ಡ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ನೀರಿನ ಮಾದರಿ ಪರೀಕ್ಷಿಸುತ್ತಿರುವುದರಿಂದ ಕಲುಷಿತ ನೀರು ಪೂರೈಕೆ ತಡೆಯಲು ಸಾಧ್ಯವಾಗಿದೆ. ಜತೆಗೆ ಕುಡಿಯುವ ನೀರಿನಿಂದಾಗಿ ಉಲ್ಬಣಿಸುತ್ತಿದ್ದ ಸಮಸ್ಯೆಗಳು ಕಡಿಮೆಯಾಗಿವೆ’ ಎನ್ನುತ್ತಾರೆ ಪುರಸಭೆ ಸದಸ್ಯ ಮಂಜುನಾಥ ಇಜಂತಕರ್.

ಹರಪನಹಳ್ಳಿ ಪಟ್ಟಣದಲ್ಲಿ ನೀರಿನ ಮಾದರಿ ಪರಿಶೀಲಿಸುತ್ತಿರುವ ಪುರಸಭೆಯ ನೀರಗಂಟಿ
ಹರಪನಹಳ್ಳಿ ಪಟ್ಟಣದಲ್ಲಿ ನೀರಿನ ಮಾದರಿ ಪರಿಶೀಲಿಸುತ್ತಿರುವ ಪುರಸಭೆಯ ನೀರಗಂಟಿ
ನೀರು ಮಾದರಿ ಪರೀಕ್ಷೆ ಹೇಗೆ?
ಪುರಸಭೆ ನೀರಗಂಟಿಗಳಿಗೆ ಕೊಟ್ಟಿರುವ ಕ್ಲೊರೊಸ್ಕೋಪ್ ಮಿಷನ್ ಟೆಸ್ಟ್ ಟ್ಯೂಬ್‌ನಲ್ಲಿ ¾ ಭಾಗ ತೆಗೆದುಕೊಂಡು 2ರಿಂದ 3 ಹನಿ ಅರ್ಥೊಟಾದಲಿನ್ ದ್ರಾವಣ ಹಾಕಿ ಚೆನ್ನಾಗಿ ಕುಲುಕುತ್ತಾರೆ. ನೀರಿನಲ್ಲಾಗುವ ಬಣ್ಣ ಬದಲಾವಣೆಯನ್ನು ಕ್ಲೊರೊಸ್ಕೋಪ್‌ನಲ್ಲಿ ಗಮನಿಸಿ ಹಾಗೂ ಕ್ಲೊರಿನ್ ಪ್ರಮಾಣದ ಸಂಖ್ಯೆ ಆಧರಿಸಿ ನೀರು ಶುದ್ದವಾಗಿರುವ ಬಗ್ಗೆ ದೃಢಪಡಿಸಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT