ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ| ಕೂಡ್ಲಿಗಿ ಕಾಂಗ್ರೆಸ್‌ನಲ್ಲಿ ಏನಾಗುತ್ತಿದೆ?

ಈ ಸಲದ ಚುನಾವಣೆಯಲ್ಲಿ ಹೊಸ ಮುಖ ಕಣಕ್ಕಿಳಿಸಲು ಚಿಂತನೆ
Last Updated 19 ಮಾರ್ಚ್ 2023, 9:47 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಏಕಮಾತ್ರ ಕ್ಷೇತ್ರ ಕೂಡ್ಲಿಗಿ.

ಆಶ್ಚರ್ಯಕರ ಫಲಿತಾಂಶಕ್ಕೆ ಈ ಕ್ಷೇತ್ರ ಹೆಸರಾಗಿದೆ. ಇಷ್ಟೇ ಅಲ್ಲ, ಚುನಾವಣೆಯಲ್ಲಿ ಕೊನೆಯ ಸಂದರ್ಭದಲ್ಲಿ ಅಚ್ಚರಿ ಎಂಬಂತೆ ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಿಸಿ ಜಯ ಗಳಿಸಿದ ನಿದರ್ಶನಗಳು ಅನೇಕ ಇವೆ. ಇದಕ್ಕೆ ತಾಜಾ ನಿದರ್ಶನ 2018ರ ಚುನಾವಣೆ. ನಾಮಪತ್ರ ಸಲ್ಲಿಕೆಗೆ ಕೆಲವೇ ದಿನಗಳಿರುವಾಗ ಎನ್‌.ವೈ. ಗೋಪಾಲಕೃಷ್ಣ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿದಾಗ, ಅವರು ಕೂಡ್ಲಿಗಿಗೆ ವಲಸೆ ಬಂದು ಬಿಜೆಪಿಯಿಂದ ನಾಮಪತ್ರ ಸಲ್ಲಿಸಿ ಗೆಲುವು ಸಾಧಿಸಿದ್ದು.

ಹೀಗೆ ಹಲವು ಅಚ್ಚರಿ ಫಲಿತಾಂಶ ನೀಡಿರುವ ಕ್ಷೇತ್ರದಲ್ಲಿ 1999ರ ನಂತರ ಕಾಂಗ್ರೆಸ್‌ ಪುನಃ ಗೆದ್ದಿಲ್ಲ. 1999ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರು ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆಗ ಕೂಡ್ಲಿಗಿ–ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಸಿರಾಜ್‌ ಶೇಖ್‌ ಜಯ ಗಳಿಸಿದ್ದರು. ಕ್ಷೇತ್ರ ಪುನರ್‌ ವಿಂಗಡಣೆ ನಂತರ ಈ ಕ್ಷೇತ್ರ ಎಸ್ಟಿಗೆ ಮೀಸಲಾಯಿತು. ಅದಾದ ನಂತರ ಕಾಂಗ್ರೆಸ್‌ ಜಯ ಕಂಡಿಲ್ಲ. 2018ರಲ್ಲಿ ಕಾಂಗ್ರೆಸ್‌ನಿಂದ ಈ ಕ್ಷೇತ್ರದಿಂದ ಸ್ಪರ್ಧಿಸಿ ಗುಜ್ಜಲ್‌ ರಘು ಸೋಲು ಕಂಡಿದ್ದಾರೆ. ಹೀಗಿದ್ದರೂ ಈ ಸಲ ಅವರು ಟಿಕೆಟ್‌ ಕೋರಿ ಪುನಃ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಸಲ ಅವರಿಗೆ ಟಿಕೆಟ್‌ ಕೊಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಇನ್ನುಳಿದಂತೆ ಲೋಕೇಶ್‌ ನಾಯಕ, ಜಿ. ನಾಗಮಣಿ, ಕಾವಲಿ ಶಿವಪ್ಪ ನಾಯಕ, ನರಸಿಂಹಗಿರಿ ವೆಂಕಟೇಶ್‌, ಡಾ. ಎನ್‌.ಟಿ. ಶ್ರೀನಿವಾಸ್‌, ಕಮಲಾಪುರದ ಗುರುರಾಜ ನಾಯಕ, ಬಳ್ಳಾರಿ ಪರಮೇಶ್ವರಪ್ಪ, ಹರಪನಹಳ್ಳಿಯ ಪರಮೇಶ್ವರಪ್ಪ ಅವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

1999ರ ನಂತರ ಕಾಂಗ್ರೆಸ್‌ ಕ್ಷೇತ್ರದಲ್ಲಿ ಗೆಲ್ಲದಿದ್ದರೂ ಕ್ಷೇತ್ರದಲ್ಲಿಯೇ ಇದ್ದು ಪಕ್ಷಕ್ಕಾಗಿ ಶ್ರಮಿಸಿ, ಅದರ ಅಸ್ತಿತ್ವ ಉಳಿಸಿಕೊಂಡು ಬಂದವರಿಗೆ ಈ ಸಲದ ಚುನಾವಣೆಯಲ್ಲಿ ಟಿಕೆಟ್‌ ಕೊಡಲು ಗಂಭೀರ ಚಿಂತನೆ ನಡೆದಿದೆ ಎಂದು ಕಾಂಗ್ರೆಸ್‌ ಮೂಲಗಳಿಂದ ಗೊತ್ತಾಗಿದೆ. ಅರ್ಜಿ ಸಲ್ಲಿಸಿದ ಪೈಕಿ ಒಂಬತ್ತು ಜನರಲ್ಲಿ ನಾಗಮಣಿ ಒಬ್ಬರೇ ಮಹಿಳೆ. ಮಹಿಳಾ ಕೋಟಾದಲ್ಲಿ ಟಿಕೆಟ್‌ ಕೊಡಬೇಕೆಂಬ ವಿಷಯ ಮುನ್ನಲೆಗೆ ಬಂದರೆ ಅವರಿಗೆ ಟಿಕೆಟ್‌ ಸಿಕ್ಕರೂ ಅಚ್ಚರಿ ಪಡಬೇಕಿಲ್ಲ.

ಲೋಕೇಶ್‌ ನಾಯಕ ಅವರು 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದಿದ್ದಾಗ ಪಕ್ಷದಿಂದ ಹೊರಬಂದು ಪಕ್ಷೇತರರಾಗಿ ಸ್ಪರ್ಧಿಸಿ 18 ಸಾವಿರ ಮತಗಳನ್ನು ಪಡೆದಿದ್ದರು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹಗಿರಿ ವೆಂಕಟೇಶ್‌ ಅವರು 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಕಾವಲಿ ಶಿವಪ್ಪ ನಾಯಕ ಹಾಲಿ ಪಟ್ಟಣ ಪಂಚಾಯಿತಿ ಸದಸ್ಯರಾಗಿದ್ದಾರೆ. ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷರೂ ಹೌದು.

ಡಾ. ಎನ್‌.ಟಿ. ಶ್ರೀನಿವಾಸ್‌, ಗುರುರಾಜ ನಾಯಕ, ಬಳ್ಳಾರಿಯ ಪರಮೇಶ್ವರಪ್ಪ, ಹರಪನಹಳ್ಳಿಯ ಪರಮೇಶ್ವರಪ್ಪ ಕೂಡ ಟಿಕೆಟ್‌ಗಾಗಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಸ್ಥಳೀಯವಾಗಿ ಪಕ್ಷದಲ್ಲಿ ಕ್ರಿಯಾಶೀಲರಾಗಿ ಇರುವವರಿಗೆ ಟಿಕೆಟ್‌ ನೀಡಬೇಕೆಂಬ ವಿಚಾರಕ್ಕೆ ಹೆಚ್ಚು ಒತ್ತು ಕೊಟ್ಟರೆ ಇವರಿಗೆ ಟಿಕೆಟ್‌ ಸಿಗುವುದು ಅನುಮಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT