ಭಾನುವಾರ, ಮೇ 9, 2021
26 °C
13ನೇ ದಿನಕ್ಕೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರ

ಡಿಸಿ ಜತೆ ಖಾಸಗಿ ವಾಹನಮಾಲೀಕರು, ಚಾಲಕರು ವಾಗ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರ ಸೋಮವಾರ 13ನೇ ದಿನಕ್ಕೆ ಕಾಲಿರಿಸಿದೆ.

ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ಹೆಚ್ಚಾಗಿರುವುದರಿಂದ ಸೋಮವಾರ ಖಾಸಗಿ ವಾಹನಗಳನ್ನು ನಗರದ ಕೇಂದ್ರ ಬಸ್‌ ನಿಲ್ದಾಣದೊಳಗೆ ಸಂಚರಿಸಲು ಅವಕಾಶ ಕಲ್ಪಿಸಲಿಲ್ಲ. ಇದರಿಂದ ಸಿಟ್ಟಿಗೆದ್ದ ಖಾಸಗಿ ವಾಹನ ಮಾಲೀಕರು, ಚಾಲಕರು ಸಾರಿಗೆ ಸಂಸ್ಥೆ ಸಿಬ್ಬಂದಿ ಜೊತೆ ಜಟಾಪಟಿಗಿಳಿದು, ವಾಗ್ವಾದ ನಡೆಸಿ, ಆಕ್ರೋಶ ಹೊರಹಾಕಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಅವರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಆದರೆ, ಖಾಸಗಿ ವಾಹನಗಳವರು ಸಮಾಧಾನರಾಗಲಿಲ್ಲ. ಬದಲಿಗೆ ಅವರಿಗೂ ತರಾಟೆಗೆ ತೆಗೆದುಕೊಂಡರು.

‘ಕಷ್ಟದಲ್ಲಿ ಒಂದು ರೀತಿ, ಕಷ್ಟ ನಿವಾರಣೆ ಆದ ಮೇಲೆ ಮತ್ತೊಂದು ರೀತಿಯ ನಿಯಮ ಜಾರಿಗೆ ತರುತ್ತೀರಾ. ಇಷ್ಟು ದಿನ ಬಸ್‌ಗಳು ಇರಲಿಲ್ಲ. ನೀವೇ ನಮ್ಮ ಬಳಿ ಬಂದು ಬಸ್‌ ನಿಲ್ದಾಣದಿಂದ ವಾಹನ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದೀರಿ. ಈಗ ಬಸ್‌ಗಳ ಸಂಚಾರ ಹೆಚ್ಚಾಗುತ್ತಿದ್ದಂತೆ ನಮಗೆ ನಿಲ್ದಾಣದೊಳಗೆ ಬಿಡುತ್ತಿಲ್ಲ. ಇದನ್ನು ಯಾರಾದರೂ ಒಪ್ಪುತ್ತಾರಾ. ಈ ರೀತಿ ಮಾಡಿದರೆ ಮುಂದೆ ಇದೇ ರೀತಿಯ ಸಮಸ್ಯೆ ತಲೆದೋರಿದಾಗ ನಿಮ್ಮ ನೆರವಿಗೆ ಯಾರೂ ಬರುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಇಷ್ಟು ದಿನ ಸಹಕಾರ ಕೊಟ್ಟು ಸಾರ್ವಜನಿಕರಿಗೆ ನೆರವಾಗಿದ್ದೀರಿ. ಈಗ ಬಸ್‌ಗಳ ಸಂಚಾರ ಹೆಚ್ಚಾಗಿದೆ. ವಾಹನ ದಟ್ಟಣೆ ಉಂಟಾದರೆ ಸಮಸ್ಯೆಯಾಗುತ್ತದೆ. ಪರಿಸ್ಥಿತಿ ಅರ್ಥ ಮಾಡಿಕೊಂಡು ಸಹಕರಿಸಬೇಕು’ ಎಂದು ಜಿ. ಶೀನಯ್ಯ ಹೇಳಿದರು. ಬಳಿಕ ಪಟ್ಟು ಹಿಡಿದು ಎಲ್ಲ ರೀತಿಯ ಖಾಸಗಿ ವಾಹನಗಳನ್ನು ನಿಲ್ದಾಣದಿಂದ ಹೊರ ಕಳುಹಿಸಿದರು.

ಸೋಮವಾರ ಹೆಚ್ಚಿನ ಸಂಖ್ಯೆಯ ಬಸ್ಸುಗಳು ನಿಲ್ದಾಣದಲ್ಲಿ ಕಾಣಿಸಿದವು. ಆದರೆ, ಪ್ರಯಾಣಿಕರು ಹೆಚ್ಚಾಗಿ ಇರಲಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು