ಶನಿವಾರ, ಅಕ್ಟೋಬರ್ 1, 2022
25 °C

ತ್ರಿವರ್ಣದಲ್ಲಿ ಕಂಗೊಳಿಸುತ್ತಿದೆ ಗೋಳಗುಮ್ಮಟ: ಪ್ರವಾಸಿಗರಿಗೆ ಇಲ್ಲ ನೋಡುವ ಭಾಗ್ಯ!

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದೇಶದ ಐತಿಹಾಸಿಕ ಸ್ಮಾರಕಗಳನ್ನು ತ್ರಿವರ್ಣಗಳಲ್ಲಿ ಆಲಂಕರಿಸಿ, ಪ್ರವಾಸಿಗರಿಗೆ ಉಚಿತ ವೀಕ್ಷಣೆಗೆ ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿದೆ. ಅಂತೆಯೇ, ವಿಜಯಪುರದ ‘ಪಿಸುಗುಡುವ ಗೋಪುರ’ ಎಂದೇ ಪ್ರಖ್ಯಾತಿ ಪಡೆದಿರುವ ಐತಿಹಾಸಿಕ ಗೋಳಗುಮ್ಮಟವನ್ನು ತ್ರಿವರ್ಣದಲ್ಲೇನೋ ಆಲಂಕರಿಸಲಾಗಿದೆ. ಆದರೆ, ಪ್ರವಾಸಿಗರ, ಸಾರ್ವಜನಿಕರ ವೀಕ್ಷಣೆಗೆ ಮಾತ್ರ ಅವಕಾಶ ಕಲ್ಪಿಸಿಲ್ಲ!

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಿದ್ಯುತ್‌ ದೀಪಗಳಿಂದ ಆಲಂಕೃತವಾಗಿರುವ ಗೋಳಗುಮ್ಮಟದ ಬಾಗಿಲನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಿಬ್ಬಂದಿ ಬಂದ್‌ ಮಾಡಿರುವುದರಿಂದ ಪ್ರವಾಸಿಗರು, ಸಾರ್ವಜನಿಕರು ಹೊರಗಡೆಯಿಂದಲೇ ಕಣ್ತುಂಬಿಕೊಂಡು ತೆರಳುವಂತಾಗಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಗೋಳಗುಮ್ಮಟಕ್ಕೆ ತ್ರಿವರ್ಣ ಆಲಂಕಾರ ಮಾಡಿಯೂ ಪ್ರಯೋಜನವಿಲ್ಲದೇ ‘ಸ್ಮಶಾನ ಶೃಂಗಾರ’ ಎಂಬಂತಾಗಿದೆ. 

ಹಂಪಿ, ಬಾದಾಮಿ ಸ್ಮಾರಕಗಳನ್ನು ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್‌ 5ರಿಂದಲೇ ತ್ರಿವರ್ಣಗಳಿಂದ ಆಲಂಕಾರ ಮಾಡಿ ಪ್ರವಾಸಿಗರ ವೀಕ್ಷಣೆಗೆ ಉಚಿತ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ವಿಜಯಪುರದ ಯಾವೊಂದು ಸ್ಮಾರಕವನ್ನೂ ಇದುವರೆಗೆ ತ್ರಿವರ್ಣ ಆಲಂಕಾರ ಮಾಡದೇ ಹಾಗೆಯೇ ಬಿಟ್ಟು, ಇದೀಗ ಶನಿವಾರದಿಂದ ಸೋಮವಾರದ ವರೆಗೆ(ಆಗಸ್ಟ್‌ 13ರಿಂದ 15) ತ್ರಿವರ್ಣ ಆಲಂಕಾರ ಮಾಡಲಾಗಿದೆ. ಆದರೂ ವೀಕ್ಷಣೆಗೆ ಅವಕಾಶ ನೀಡದಿರುವುದು ಪ್ರವಾಸಿಗರಲ್ಲಿ ನಿರಾಶೆ ಮೂಡಿಸಿದೆ.

ಗೋಳಗುಮ್ಮಟವನ್ನು ತ್ರಿವರ್ಣಗಳಿಂದ ಆಲಂಕಾರ ಮಾಡುವ ಮತ್ತು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸುವ ವಿಷಯದ ಬಗ್ಗೆ ಭಾರತೀಯ ಸರ್ವೇಕ್ಷಣಾ ಇಲಾಖೆ ಮಾಧ್ಯಮಗಳಿಗೆ ಮಾಹಿತಿ ನೀಡದೇ, ಕದ್ದುಮುಚ್ಚಿ ನಡೆದುಕೊಳ್ಳುತ್ತಿರುವುದು ಸೋಜಿಗ ಎನಿಸಿದೆ.

ಪ್ರವಾಸಿಗಳ ಆಕರ್ಷಣೆಗಾಗಿ ಗೋಳಗುಮ್ಮಟವನ್ನು ಪ್ರತಿನಿತ್ಯ ವಿದ್ಯುತ್‌ ದೀಪಗಳಿಂದ ಆಲಂಕರಿಸಿ, ರಾತ್ರಿ ವೇಳೆ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕು ಎಂಬ ಹಲವು ವರ್ಷಗಳ ಬೇಡಿಕೆಯೂ ನನೆಗುದಿಗೆ ಬಿದ್ದಿದೆ.

ಅವಕಾಶ ಇಲ್ಲ: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ) ಉಪನಿರ್ದೇಶಕ ಪ್ರಮೋದ್‌, ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್‌ 5ರಿಂದ ಸಾರ್ವಜನಿಕರ ವೀಕ್ಷಣೆಗೆ ಉಚಿತ ಪ್ರವೇಶ ನೀಡಲಾಗುತ್ತಿದೆ. ಆಗಸ್ಟ್‌ 13ರಿಂದ 15ರ ವರೆಗೆ ತ್ರಿವರ್ಣ ಆಲಂಕಾರ ಮಾತ್ರ ಮಾಡಲು ಎಎಸ್‌ಐ ನಿರ್ದೇಶನ ಬಂದಿದೆ. ಕಾರಣ ಯಾರಿಗೂ ವೀಕ್ಷಣೆಗಾಗಿ ಒಳಗೆ ಬಿಡುತ್ತಿಲ್ಲ ಎಂದರು.

ಗೋಳಗುಮ್ಮಟ ಆವರಣವು ಸೂಕ್ಷ್ಮ ಪ್ರದೇಶವಾಗಿದೆ. ರಾತ್ರಿ ವೇಳೆ ವೀಕ್ಷಣೆಗೆ ಬಿಟ್ಟರೆ ಜನರಿಗೆ ಭದ್ರತೆ ಒದಗಿಸುವುದು ಕಷ್ಟ. ನಮ್ಮಲ್ಲಿ ಅಷ್ಟೊಂದು ಸಿಬ್ಬಂದಿಯೂ ಇಲ್ಲ. ಹೀಗಾಗಿ ಅವಕಾಶ ಕಲ್ಪಿಸಿಲ್ಲ. ಈ ಸಂಬಂಧ ಇಲಾಖೆಯ ಮೇಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

***

ಗೋಳಗುಮ್ಮಟಕ್ಕೆ ಬೆಳಕಿನ ವ್ಯವಸ್ಥೆ ಮಾಡಿರುವುದೇ ಸಾರ್ವಜನಿಕರ ವೀಕ್ಷಣೆಗಾಗಿ. ಆದರೆ, ಎಎಸ್‌ಐ ವೀಕ್ಷಣೆಗೆ ಅವಕಾಶ ನೀಡದಿರುವುದು ಸರಿಯಲ್ಲ. ಅಗತ್ಯ ರಕ್ಷಣಾ ವ್ಯವಸ್ಥೆ ಕಲ್ಪಿಸಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು.
–ವಿಜಯ ಮಹಾಂತೇಶ್‌, ಜಿಲ್ಲಾಧಿಕಾರಿ, ವಿಜಯಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು