ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಸಿಇಒ ಕಾರ್ಯಾಲಯ; ಪುಟ್ಟ ಗ್ರಂಥಾಲಯ

ರಾಹುಲ್‌ ಶಿಂಧೆ ಅವರ ಆಸಕ್ತಿ; ಓದುಗರ ಕೈಗೆ ನೂರಾರು ಗ್ರಂಥಗಳು
Published 13 ಸೆಪ್ಟೆಂಬರ್ 2023, 5:12 IST
Last Updated 13 ಸೆಪ್ಟೆಂಬರ್ 2023, 5:12 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ ಅವರು ತಮ್ಮ ಕಚೇರಿಯಲ್ಲಿ ಸಾರ್ವಜನಿಕರು ಮತ್ತು ತಮ್ಮ ಕಚೇರಿಯ ಸಿಬ್ಬಂದಿಯ ಅನುಕೂಲಕ್ಕಾಗಿ ಗ್ರಂಥಾಲಯವನ್ನು (ಮಿನಿ ಲೈಬ್ರರಿ) ಆರಂಭಿಸಿದ್ದಾರೆ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ತಮ್ಮ ಕಾರ್ಯಗಳಿಗಾಗಿ ಪ್ರತಿನಿತ್ಯ ನೂರಾರು ಸಾರ್ವಜನಿಕರು, ಅಧಿಕಾರಿಗಳು ಜಿಲ್ಲಾ ಪಂಚಾಯ್ತಿ ಸಿಇಒ ಭೇಟಿಗೆ ಕಚೇರಿಗೆ ಬರುತ್ತಾರೆ. ಈ ಸಂದರ್ಭದಲ್ಲಿ ಕಾಯುವ ಪ್ರಸಂಗ ಎದುರಾಗುವುದು ಸಹಜ. ಈ ವೇಳೆಯನ್ನು ಸಮಯದ ಸದುಪಯೋಗ ಆಗಲಿ ಎಂಬ ಕಾರಣಕ್ಕೆ ಪುಸ್ತಕ ಓದಲು ಅನುವಾಗುವಂತೆ ಪುಟ್ಟ ಗ್ರಂಥಾಲಯವನ್ನು ಮಾಡಿದ್ದಾರೆ.

ಈ ಮೊದಲು ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಕೂರಲು ಇದ್ದ ಸಿಇಒ ಕಚೇರಿ ಮುಂಭಾಗದ ಕೊಠಡಿಯನ್ನೇ ಗ್ರಂಥಾಲಯವನ್ನಾಗಿ ಪರಿವರ್ತಿಸಲಾಗಿದೆ. ಕನ್ನಡದ ಶ್ರೇಷ್ಠ ಲೇಖಕರು, ಸಾಹಿತಿಗಳ ಕೃತಿಗಳು, ದಿನಪತ್ರಿಕೆಗಳು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಕಟಣೆಗಳನ್ನು ಗ್ರಂಥಾಲಯದಲ್ಲಿ ಇರಿಸಲಾಗಿದೆ. ಜೊತೆಗೆ ಜನ ಕೂರಲು ಕುರ್ಚಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು, ಸಿಬ್ಬಂದಿ ವಿವಿಧ ಕ್ರೀಡಾಕೂಟಗಳಲ್ಲಿ ಜಯಿಸಿ ತಂದ ಟ್ರೋಫಿಗಳು ಹಾಗೂ ಜಿಲ್ಲಾ ಪಂಚಾಯ್ತಿಗೆ ಲಭಿಸಿರುವ ಪ್ರಶಸ್ತಿ, ಪುರಸ್ಕಾರಗಳನ್ನು ಇಲ್ಲಿ ಇಡಲಾಗಿದೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರು ಈ ಗ್ರಂಥಾಲಯವನ್ನು ಇತ್ತೀಚೆಗೆ ಸಾರ್ವಜನಿಕ ಬಳಕೆಗೆ ಲೋಕಾರ್ಪಣೆ ಮಾಡಿ, ಸಿಇಒ ಅವರ ಮಾದರಿ ಕಾರ್ಯವನ್ನು ಶ್ಲಾಘಿಸಿದ್ದಾರೆ.

‘ಕಚೇರಿಗೆ ಬಂದವರು ಕಾಲಹರಣ ಮಾಡದೇ ಸಮಯದ ಸದುಪಯೋಗ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ಮಿನಿ ಗ್ರಂಥಾಲಯ ಮಾಡಲಾಗಿದೆ. ಸಾರ್ವಜನಿಕರು, ಸಿಬ್ಬಂದಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಮೌಲಿಕವಾದ ಇನ್ನಷ್ಟು ಗ್ರಂಥಗಳನ್ನು ಈ ಗ್ರಂಥಾಲಯದಲ್ಲಿ ಸೇರಿಸಲಾಗುವುದು’ ಎಂದು ರಾಹುಲ್‌ ಶಿಂಧೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರಿ ಕೆಲಸಕ್ಕಾಗಿ ಸಿಇಒ ಕಚೇರಿಗೆ ಬರುವವರು ಹೂಗುಚ್ಛ, ಹಾರವನ್ನು ತರುವ ಬದಲು ಇನ್ನು ಮುಂದೆ ತಮಗಿಷ್ಟವಾದ ಪುಸ್ತಕಗಳನ್ನು ನೀಡಿದರೆ, ಗ್ರಂಥಾಲಯದಲ್ಲಿ ಓದುಗರಿಗೆ ಒದಗಿಸಲಾಗುವುದು’ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯ್ತಿ ಸಿಇಒ ತಮ್ಮ ಕಚೇರಿಯಲ್ಲಿ ಗ್ರಂಥಾಲಯ ಆರಂಭಿಸಿದ್ದು ಶ್ಲಾಘನೀಯ. ಇದೇ ರೀತಿ ಪ್ರಮುಖ ಸರ್ಕಾರಿ ಕಚೇರಿಗಳಲ್ಲೂ ಗ್ರಂಥಾಲಯಗಳಾದರೆ ಜನರಿಗೆ ಅನುಕೂಲ

-ಮಂಜುನಾಥ ಕಟ್ಟಿಮನಿ ಲೇಖಕ ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT