ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಯುಟಿಯುಸಿ ಬೆಂಗಳೂರು ಚಲೋ 22ಕ್ಕೆ

ರೈತ ವಿರೋಧಿ ಕೃಷಿ ಕಾಯ್ದೆ, ಕಾರ್ಮಿಕ-ವಿರೋಧಿ 4 ಲೇಬರ್ ಕೋಡ್‍ಗಳನ್ನು ಹಿಂಪಡೆಯಲು ಆಗ್ರಹ
Last Updated 19 ಜನವರಿ 2021, 11:51 IST
ಅಕ್ಷರ ಗಾತ್ರ

ವಿಜಯಪುರ: ಕೇಂದ್ರ ಬಿಜೆಪಿ ಸರ್ಕಾರದ ರೈತ-ವಿರೋಧಿ ಕೃಷಿ ಕಾಯ್ದೆಗಳನ್ನು ಹಾಗೂ ಕಾರ್ಮಿಕ-ವಿರೋಧಿ 4 ಲೇಬರ್ ಕೋಡ್‍ಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಜ.22 ರಂದು ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಂಡಿರುವುದಾಗಿಎಐಯುಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ.ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆಯುವ ಈ ಪ್ರತಿಭಟನಾ ಧರಣಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಂಘಟಿತ-ಅಸಂಘಟಿತ, ಗುತ್ತಿಗೆ ಕಾರ್ಮಿಕರು, ಸ್ಕೀಮ್ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ರಾಜ್ಯ ಸರ್ಕಾರವು ತಂದಿರುವ ಎ.ಪಿ.ಎಂ.ಸಿ. ತಿದ್ದುಪಡಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳು ಅಗತ್ಯ ವಸ್ತುಗಳನ್ನು ಕಾಳಸಂತೆಯಲ್ಲಿ ದಾಸ್ತಾನು ಮಾಡುವುದಕ್ಕೆ ಅವಕಾಶ ನೀಡುತ್ತದೆ. ಇದು ಹಣ್ಣು, ತರಕಾರಿ, ದವಸ ಧಾನ್ಯಗಳು ಇತ್ಯಾದಿ ಅಗತ್ಯ ವಸ್ತುಗಳ ಬೆಲೆಯನ್ನು ಹೆಚ್ಚಿಸುವುದಲ್ಲದೆ, ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ಸಹ ತೊಂದರೆಯಾಗುತ್ತದೆ. ಆಹಾರ ಕೊರತೆಯುಂಟಾಗುತ್ತದೆ ಎಂದು ದೂರಿದರು.

ಈ ಕಾಯ್ದೆಗಳ ಪರಿಣಾಮವಾಗಿ ರೈತರು ಸಂಪೂರ್ಣವಾಗಿ ತಮ್ಮ ಸ್ವಾತಂತ್ರ್ಯ ಕಳೆದುಕೊಂಡು ಕಂಪನಿಗಳ ಹಂಗಿನಲ್ಲಿ ಗುಲಾಮರಂತೆ ಬದುಕಬೇಕಾಗುತ್ತದೆ. ವಿದ್ಯುತ್ ಮಸೂದೆ 2020 ವಿದ್ಯುತ್ ಕ್ಷೇತ್ರದ ಸಂಪೂರ್ಣ ಖಾಸಗೀಕರಣದ ನೀಲಿನಕ್ಷೆಯಾಗಿದೆ. ಇದರೊಂದಿಗೆ ರೈತರಿಗೆ ಮತ್ತು ಸಾಮಾನ್ಯ ಜನರಿಗೆ ವಿದ್ಯುತ್ ಹೆಚ್ಚು ದುಬಾರಿಯಾಗುವುದು ನಿಶ್ಚಿತ ಎಂದು ಆತಂಕ ವ್ಯಕ್ತಪಡಿಸಿದರು.

ಸದ್ಯ ಇರುವ 44 ಕಾರ್ಮಿಕ ಕಾಯ್ದೆಗಳು ತಿದ್ದುಪಡಿಗೊಂಡು 4 ಲೇಬರ್ ಕೋಡ್‍ಗಳು ಕಾಯ್ದೆಗಳಾಗಲಿವೆ. ಇದರಿಂದಮಾಲೀಕರಿಗೆ ತಮಗೆ ಬೇಕಾದಾಗ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡು, ಬೇಡವಾದಾಗ ಅವರನ್ನು ಮನಬಂದಂತೆ ತೆಗೆದುಹಾಕುವ ಬಲವನ್ನು ನೀಡುತ್ತದೆ. ಈಗ ಪರಿಚಯಿಸುತ್ತಿರುವ ಸೀಮಿತ ಅವಧಿಯ ಉದ್ಯೋಗ ನೀತಿಯಿಂದಾಗಿ, ಕಾಯಂ ಉದ್ಯೋಗಗಳು ಮಾಯವಾಗಲಿವೆ. ಜೊತೆಗೆ ಕಾರ್ಮಿಕರ ಪ್ರತಿಭಟನೆ ಮತ್ತು ಮುಷ್ಕರದ ಹಕ್ಕನ್ನು ಕಸಿದುಕೊಳ್ಳಲಿವೆ ಎಂದು ಹೇಳಿದರು.

14 ದಿನಗಳ ಮುಷ್ಕರದ ನೋಟಿಸ್‌ ಬದಲಿಗೆ ಈಗ 60 ದಿನ ಮುಂಚೆ ಕೊಡಬೇಕಲ್ಲದೆ. ಸಂಧಾನ ಸಭೆ ಮುಗಿದ ಮೇಲೂ 60 ದಿನ ಕಾಯಬೇಕಾಗುತ್ತದೆ. ಕೆಲಸದ ಗರಿಷ್ಠ ಅವಧಿಯನ್ನು 9 ರಿಂದ 12 ಗಂಟೆಗೆ ಹೆಚ್ಚಿಸಲಾಗಿದೆ. ಮಿಂಚಿನ ಮುಷ್ಕರಗಳು ಕಾನೂನು ಬಾಹಿರವಾಗುತ್ತದೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಸುನಿಲ ಸಿದ್ರಾಮಶೆಟ್ಟಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಮಹಾದೇವಿ ಧರ್ಮಶೆಟ್ಟಿ ಇದ್ದರು.

ಜ.26ರಂದು ದೆಹಲಿಯಲ್ಲಿ ನಡೆಯುವ ರೈತ-ಕಾರ್ಮಿಕರ ಪರ್ಯಾಯ ಪರೇಡ್‍ನಲ್ಲಿ ಕೂಡ ಎಐಯುಟಿಯುಸಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಮಲ್ಲಿಕಾರ್ಜುನ ಎಚ್.ಟಿ.
ಜಿಲ್ಲಾ ಘಟಕದ ಅಧ್ಯಕ್ಷ, ಐಯುಟಿಯುಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT