ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

KPSC ಅಧ್ಯಕ್ಷರನ್ನು ಕೂಡಲೇ ಬದಲಿಸಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹ

Published 2 ಸೆಪ್ಟೆಂಬರ್ 2024, 13:27 IST
Last Updated 2 ಸೆಪ್ಟೆಂಬರ್ 2024, 13:27 IST
ಅಕ್ಷರ ಗಾತ್ರ

ವಿಜಯಪುರ: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರನ್ನು ಕೂಡಲೇ ಬದಲಿಸಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೆಎಎಸ್ ಪರೀಕ್ಷಾರ್ಥಿಗಳ ಹಾಗೂ ನಮ್ಮ ನಿರಂತರ ಪ್ರಯತ್ನ ಹಾಗೂ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಮರುಪರೀಕ್ಷೆ ಮಾಡಲು ಕೈಗೊಂಡಿರುವ ವಿವೇಚನಾಯುತ ನಿರ್ಧಾರವನ್ನು ಸ್ವಾಗತಿಸುವುದಾಗಿ ‘ಎಕ್ಸ್‌’ನಲ್ಲಿ ತಿಳಿರುವ ಅವರು, ಕೆಪಿಎಸ್‌ ಸಿ ಪರೀಕ್ಷಾ ನಿಯಂತ್ರಕರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಡಬೇಕು ಎಂದು ಆಗ್ರಹಿಸಿದ್ದಾರೆ.

ಆಯೋಗದಲ್ಲಿರುವ ಭ್ರಷ್ಟರು, ದಲ್ಲಾಳಿಗಳ ಮೇಲೆ ಹಾಗೂ ಪರೀಕ್ಷಾರ್ಥಿಗಳ ಹಿತಾಸಕ್ತಿಯ ವಿರುದ್ಧ ನಿರ್ಧಾರವನ್ನು ಕೈಗೊಳ್ಳುವವರ ವಿರುದ್ಧ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಅಂತಹವರನ್ನು ಆ ಸ್ಥಾನದಿಂದ ಎತ್ತಂಗಡಿ ಮಾಡಿ ಅಥವಾ ಶಿಸ್ತು ಕ್ರಮ ಜರುಗಿಸಬೇಕು. ಪರೀಕ್ಷೆಗಳು ಸಂಪೂರ್ಣವಾಗಿ ಪಾರದರ್ಶಕವಾಗಿರುವಂತೆ ಮಾಡಬೇಕು  ಎಂದು ಒತ್ತಾಯಿಸಿದ್ದಾರೆ.

ಕೆಎಎಸ್‌.ಪರೀಕ್ಷಾ ಕ್ರಮದಲ್ಲಿ ಪ್ರಮುಖ ಸುಧಾರಣೆಗಳನ್ನು ಕರ್ನಾಟಕ ಲೋಕಸೇವಾ ಆಯೋಗ ಜಾರಿಗೆ ತರುವಂತೆ ಸಲಹೆ ನೀಡಿರುವ ಅವರು, ಪರೀಕ್ಷಾರ್ಥಿಗಳು ವಾಸಿಸುವ ಊರು ಅಥವಾ ಗರಿಷ್ಟ 50 ಕಿ.ಮೀ. ದೂರವಿರುವ ಪರೀಕ್ಷಾ ಕೇಂದ್ರದಲ್ಲೇ ಅವರಿಗೆ ಪರೀಕ್ಷೆ ಬರೆಯುವ ಅವಕಾಶ ನೀಡಬೇಕು. ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಭಾನುವಾರವೇ ಪರೀಕ್ಷೆ ಆಗಬೇಕು ಮತ್ತು ಯಾವುದೇ ಇತರೆ ಪರೀಕ್ಷೆ ಇದ್ದ ದಿನ ದಿನಾಂಕ ನಿಗದಿ ಮಾಡಬಾರದು ಎಂದು ಹೇಳಿದ್ದಾರೆ.

ಲೋಕಸೇವಾ ಆಯೋಗದಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ ಐಎಎಸ್‌ ಅಧಿಕಾರಿ ಕೆ.ಎಸ್.ಲತಾ ಕುಮಾರಿ ಅವರನ್ನು ಆಯೋಗದ ಕಾರ್ಯದರ್ಶಿಯಾಗಿ ನೇಮಕ ಮಾಡಬೇಕು ಎಂದು ತಿಳಿಸಿದ್ದಾರೆ.

ಆಯೋಗವು ಆಯೋಜಿಸಿದ್ದ ಎಲ್ಲಾ ಪರೀಕ್ಷೆಗಳ ಫಲಿತಾಂಶವನ್ನು ಕೂಡಲೇ ಬಿಡುಗಡೆ ಮಾಡಬೇಕು. ಆಯೋಗವು ನಡೆಸುವ ಪರೀಕ್ಷೆಗಳ ಫಲಿತಾಂಶವನ್ನು ಪರೀಕ್ಷೆ ನಡೆದ 100 ದಿನಗಳಲ್ಲಿ ಬಿಡುಗಡೆ ಮಾಡಬೇಕು. ಪ್ರಶ್ನೆ ಪತ್ರಿಕೆಯ ಗುಣಮಟ್ಟವನ್ನು ಧೃಡೀಕರಿಸಲು ಆಯೋಗದ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚನೆ ಆಗಬೇಕು. ಆಯೋಗದಲ್ಲೇ ಪ್ರಶ್ನೆಗಳು ತರ್ಜುಮೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಪರೀಕ್ಷೆಯ ಕ್ಯಾಲೆಂಡರ್ ಅನ್ನು ಮುಂಚಿತವಾಗಿಯೇ ಆಯೋಗ ಪ್ರಕಟಿಸಬೇಕು. ಇದರಿಂದ ಪರೀಕ್ಷಾರ್ಥಿಗಳಿಗೆ ಎಷ್ಟು ಸಮಯ ಇದೆ ಮತ್ತು ಅವರ ಅಧ್ಯಯನಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT