ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರಿಗೆ ಬಿಎಲ್‌ಡಿಇ ಆರೋಗ್ಯ ವಿಮೆ: ಶಾಸಕ ಎಂ.ಬಿ. ಪಾಟೀಲ ಭರವಸೆ

Last Updated 28 ಮೇ 2022, 14:32 IST
ಅಕ್ಷರ ಗಾತ್ರ

ವಿಜಯಪುರ: ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ಬಿಎಲ್‍ಡಿಇ ಸಂಸ್ಥೆಯ ವತಿಯಿಂದ ವಿಮಾ ಸೌಲಭ್ಯ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಶಾಸಕ ಹಾಗೂ ಬಿಎಲ್‍ಡಿಇ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಭರವಸೆ ನೀಡಿದರು.

ನಗರದದಲ್ಲಿ ಶನಿವಾರ ನಡೆದ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಪತ್ರಕರ್ತರು ಸಹ ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ, ಒಳ್ಳೆಯವರು, ಕೆಟ್ಟವರು ಎಲ್ಲ ರಂಗದಲ್ಲಿಯೂ ಇದ್ದಾರೆ, ಅದರಕ್ಕೆ ಪತ್ರಿಕಾ ರಂಗ ಹೊರತಲ್ಲ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಪತ್ರಕರ್ತರ ಕ್ಷೇಮಾಭಿವೃದ್ಧಿ ಹಾಗೂ ಪ್ರತಿಭಾ ಪುರಸ್ಕಾರಕ್ಕಾಗಿ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದಲ್ಲಿ ₹ 5 ಲಕ್ಷ ಠೇವಣಿ ಇರಿಸಲಾಗುವುದು, ಅದರಿಂದ ಬರುವ ಬಡ್ಡಿಹಣದಲ್ಲಿ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಿ ಎಂದು ಸಲಹೆ ನೀಡಿದರು.

ಪತ್ರಕರ್ತರ ಪತ್ರಿಕಾ ಭವನವನ್ನು ಆಧುನೀಕರಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಹಾಗೂ ಪತ್ರಕರ್ತರಿಗೆ ನಿವೇಶನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸುವೆ ಎಂದರು.

ಕರ್ನಾಟಕ ರಾಜ್ಯಅಕ್ಕಮಹಾದೇವಿ ಮಹಿಳಾ ವಿ.ವಿ. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಓಂಕಾರ ಕಾಕಡೆ ಮಾತನಾಡಿ, ಒತ್ತಡದ ಬದುಕಿನಿಂದಾಗಿ ಪತ್ರಕರ್ತರು ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಗುರುತಿಸಿಕೊಂಡಿರುವ ಮಾಧ್ಯಮದ ಶಕ್ತಿ ಈಗ ಕುಂದಿದೆ ಎಂಬ ಆರೋಪ ಪ್ರಬಲವಾಗಿದೆ, ದುಡ್ಡು ಕೊಟ್ಟರೆ ಬರೆಯುತ್ತಾರೆ ಎಂಬ ಮಾತುಗಳಿಂದ ಮಾಧ್ಯಮಗಳ ವಿಶ್ವಾಸಾರ್ಹತೆ ಕುಗ್ಗುತ್ತಿದೆ, ಬೇರೊಬ್ಬರ ತಪ್ಪು ಎತ್ತಿ ತೋರಿಸುವ ನಾವು ಎಂದು ತಪ್ಪು ಮಾಡಬಾರದು ಎಂದು ಹೇಳಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ಒಬ್ಬ ಪತ್ರಕರ್ತ ವಿಶ್ವಾಸಹರ್ತೆ ಕಳೆದುಕೊಂಡರೆ ಆತ ಎಷ್ಟೆ ದೊಡ್ಡ ಸುದ್ದಿ ಬರೆದರೂ ಅದಕ್ಕೆ ಬೆಲೆ ಇರುವುದಿಲ್ಲ ಎಂದರು.

ಶಾಸಕ ಡಾ.ದೇವಾನಂದ ಚವ್ಹಾಣ, ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ ಜಿ.ಸಿ. ಇದ್ದರು.

ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಸಂಗಮೇಶ ಚೂರಿ, ಉಪಾಧ್ಯಕ್ಷರಾಗಿ ಇಂದುಶೇಖರ ಮಣೂರ, ಪ್ರಕಾಶ ಬೆಣ್ಣೂರ, ಫಿರೋಜ್ ರೋಜಿನದಾರ, ಪ್ರಧಾನ ಕಾರ್ಯದರ್ಶಿ ಮೋಹನ್ ಕುಲಕರ್ಣಿ, ಕಾರ್ಯದರ್ಶಿಗಳಾಗಿ ಅವಿನಾಶ ಬಿದರಿ, ಶಕೀಲ್ ಬಾಗಮಾರೆ, ಮಲ್ಲಿಕಾರ್ಜುನ ಕೆಂಭಾವಿ, ಕೋಶಾಧ್ಯಕ್ಷರಾಗಿ ರಾಹುಲ್ ಆಪ್ಟೆ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಿ.ಬಿ. ವಡವಡಗಿ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು ಅಧಿಕಾರ ಸ್ವೀಕರಿಸಿದರು.

****

ಪತ್ರಿಕಾ ರಂಗ ಉದ್ಯಮವಾಗಿ ಬದಲಾವಣೆಯಾಗಿರುವ ಕಾಲಘಟ್ಟದಲ್ಲಿ ಸುದ್ದಿ ಮಾಧ್ಯಮಗಳು ವಿಶ್ವಾಸಾರ್ಹತೆ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕಿದೆ

–ಎಂ.ಬಿ.ಪಾಟೀಲ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT