ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಟಿಕೆಟ್ ಹೆಗಡೆಗೆ ಕೊಡುವುದು ಬೇಡ: ಚಲವಾದಿ ನಾರಾಯಣಸ್ವಾಮಿ ಒತ್ತಾಯ

Published 16 ಮಾರ್ಚ್ 2024, 12:41 IST
Last Updated 16 ಮಾರ್ಚ್ 2024, 12:41 IST
ಅಕ್ಷರ ಗಾತ್ರ

ವಿಜಯಪುರ: ಸಂವಿಧಾನ ತಿದ್ದುಪಡಿ ಹೇಳಿಕೆ ನೀಡಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆಗೆ ಯಾವುದೇ ಕಾರಣಕ್ಕೂ ಬಿಜೆಪಿ ಟಿಕೆಟ್ ಕೊಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಅವರು ಪಕ್ಷದ ವರಿಷ್ಠರಿಗೆ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುತ್ತಿರುವ ಹೆಗಡೆ ಅವರ ನಡೆಯನ್ನು ಪಕ್ಷ ಸಮರ್ಥಿಸಿಕೊಳ್ಳಲು ಆಗುವುದಿಲ್ಲ. ಅವರ ಹೇಳಿಕೆ ಖಂಡನೀಯ ಎಂದರು.

ಅನಂತಕುಮಾರ ಹೆಗಡೆ  ಈ ಹಿಂದೆಯೂ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿ ಅವರು ಹೆಗಡೆಯವರನ್ನು ಕರೆಯಿಸಿ ಕ್ಷಮೆ ಕೇಳಿಸಿದ್ದರು. ಸಚಿವ ಸ್ಥಾನದಿಂದಲೂ ತೆಗೆದುಹಾಕಿದ್ದರು. ಅದಾದ ಬಳಿಕ ಅವರು ಸಾರ್ವಜನಿಕವಾಗಿ ಎಲ್ಲಿಯೂ ಕಾಣಸಿಕೊಂಡಿರಲಿಲ್ಲ. ಇದೀಗ ಚುನಾವಣೆ ಹತ್ತಿರ ಬಂದಾಗ ಬಂದಿದ್ದಾರೆ. ಬಹುಶಃ ಅವರ ತಲೆ ಕೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೇ ಸಂವಿಧಾನ ತಿದ್ದುಪಡಿ ಅನಿವಾರ್ಯ ಎಂದಿದ್ದರು. ಅದು ನಿಜ ಸಹ. ಕೆಲವು ತಿದ್ದುಪಡಿ ಮಾಡಲು ಅಭ್ಯಂತರವಿಲ್ಲ. ಆದರೆ, ಯಾರೇ ಆಗಲಿ ಸಂವಿಧಾನ ಬದಲಾವಣೆ ಹೇಳಿಕೆ ನೀಡಿದರೆ ಸಹಿಸಲ್ಲ. ಯಾರೇ ಆಗಲಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದರೆ ನಾನು ವಿರೋಧಿಸುತ್ತೇನೆ ಎಂದರು.

ಬಿಜೆಪಿ ಸಂವಿಧಾನ ಬದ್ಧವಾಗಿ ಆಡಳಿತ ನಡೆಸುತ್ತಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಬಾರದೆಂಬುದು ಡಾ.ಬಿ.ಆರ್‌. ಅಂಬೇಡ್ಕರ್ ಅವರ ಆಶಯವಾಗಿತ್ತು. ಆದರೂ ಸಂವಿಧಾನಕ್ಕೆ ವಿರೋಧಿವಾಗಿ ನೀಡಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಅದನ್ನು ರದ್ದುಗೊಳಿಸಿ ಸಂವಿಧಾನದ ಆಶಯ ಈಡೇರಿಸಿತು. ಹೀಗಾಗಿ ಸಂವಿಧಾನ ಬದ್ಧವಾಗಿ ಬಿಜೆಪಿ ಆಡಳಿತ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯವೂ ಅದೇ ಆಗಿದೆ. ಅಸ್ಪೃಶ್ಯತೆ ನಿವಾರಣೆಯಾಗಬೇಕು, ಸಮಾನತೆ ತರಬೇಕೆಂಬುದು ಮೋದಿ ಆಶಯ ಎಂದು ಸಮರ್ಥಿಸಿಕೊಂಡರು.

‘ಸಂವಿಧಾನ ತಿದ್ದುಪಡಿ ಮಾಡಲು 400ಕ್ಕೂ ಅಧಿಕ ಸ್ಥಾನ ಬೇಕು’ ಎಂದು ಹೆಗಡೆ ಹೇಳುತ್ತಾರೆ. ಸದ್ಯ ಇರುವ ಸ್ಥಾನಗಳೇ ತಿದ್ದುಪಡಿ ಮಾಡಲು ಸಾಕು. ಸಂವಿಧಾನ ಈಗಾಗಲೇ ಸಾಕಷ್ಟು ಬಾರಿ ತಿದ್ದುಪಡಿಯಾಗಿದೆ. ಕಾಂಗ್ರೆಸ್ 95ಕ್ಕೂ ಅಧಿಕ ಬಾರಿ ಸಂವಿಧಾನ ತಿದ್ದುಪಡಿ ಮಾಡಿದೆ. ಆಗೆಲ್ಲ ಕಾಂಗ್ರೆಸ್‌ನವರು ಏಕೆ ಸುಮ್ಮನಿದ್ದರು? ಎಂದು ಪ್ರಶ್ನಿಸಿದರು.

ಖರ್ಗೆ ಬಾಗಿಲು ಕಾಯಲು ಇರಿಸಿಕೊಳ್ಳಲಾಗಿದೆ

ಸಂವಿಧಾನ ವಿರೋಧಿ, ದಲಿತ ವಿರೋಧಿ ಆಡಳಿತ ನೀಡಿದ ಪರಿಣಾಮವೇ ಇಂದು ಕಾಂಗ್ರೆಸ್‌ನ ಅಂಗಡಿ ಬಾಗಿಲು ಮುಚ್ಚಿದೆ. ಇನ್ನಷ್ಟು ಮುಚ್ಚಲಿದೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಾಗಿಲು ಕಾಯಲು ಇರಿಸಿಕೊಂಡಿದ್ದಾರೆ ಎಂದು ನಾರಾಯಣಸ್ವಾಮಿ ಟೀಕಿಸಿದರು.

ಸಂವಿಧಾನದ ಬಗ್ಗೆ-ದಲಿತರ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಅಂಬೇಡ್ಕರ್ ಅವರಿಗೆ ಎಷ್ಟು ತೊಂದರೆ ಕೊಟ್ಟರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಂಬೇಡ್ಕರ್‌ ತೀರಿಕೊಂಡಾಗ ಅವರ ಅಂತ್ಯಸಂಸ್ಕಾರಕ್ಕೆ ಸ್ಥಳಾವಕಾಶವೇ ಕೊಡಲಿಲ್ಲ, ಚುನಾವಣೆಯಲ್ಲೂ ಸೋಲಿಸಿದರು. ಆದರೂ, ಕಾಂಗ್ರೆಸ್‌ನಲ್ಲಿರುವ ದಲಿತ ನಾಯಕರು ಸ್ವಾಭಿಮಾನ ಬದಿಗೊತ್ತಿ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಚಿವ ಸಂತೋಷ ಲಾಡ್‌ ಅವರು ಸಂವಿಧಾನ ಕೊಟ್ಟಿದ್ದು ನೆಹರು, ಇಂದಿರಾಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ ಎಂದು ಹೇಳುತ್ತಾರೆ. ಆಗ ಕಾಂಗ್ರೆಸ್‌ನವರು ಏಕೆ ಮಾತನಾಡಲಿಲ್ಲ? ಸಂವಿಧಾನ ಕೊಟ್ಟಿದ್ದು ಯಾರು ಗೊತ್ತಿಲ್ಲವಾ? ಎಂದು ಪ್ರಶ್ನಿಸಿದರು.

ದಲಿತರಿಗೆ ಮೀಸಲಿಟ್ಟ ₹ 25 ಸಾವಿರ ಕೋಟಿ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳಿಗೆ ಬಳಸಿದರೂ ಕಾಂಗ್ರೆಸ್‌ನಲ್ಲಿರುವ ದಲಿತ ನಾಯಕರು ಹಾಗೂ ದಲಿತ ಸಂಘಟನೆಗಳು ತುಟಿ ಬಿಚ್ಚುತ್ತಿಲ್ಲ. ಅದೇ, ಬಿಜೆಪಿ ಸರ್ಕಾರವೇನಾದರೂ ಮಾಡಿದ್ದರೇ ಏನಾಗುತ್ತಿತ್ತು? ಎಂದರು.

ಕಾಂಗ್ರೆಸ್‌ನಲ್ಲಿ ನಿರ್ಣಯ ತೆಗೆದುಕೊಳ್ಳುವ ಸ್ಥಾನದಲ್ಲಿ ದಲಿತ ನಾಯಕರಿಲ್ಲ ಎಂದು ಸಚಿವ ಎಚ್.ಸಿ. ಮಹಾದೇವಪ್ಪ ಹೇಳುತ್ತಾರೆ. ಇದೀಗ ಅವರಿಗೆ ಅರಿವಿಗೆ ಬಂದಂತಿದೆ. ಈ ಹಿಂದೆ ದಲಿತ ಮುಖ್ಯಮಂತ್ರಿ ಮಾಡಲು ಸಾಕಷ್ಟು ಅವಕಾಶಗಳಿದ್ದರೂ ಕಾಂಗ್ರೆಸ್ ಮಾಡಲೇ ಇಲ್ಲ. ಆದರೂ ಅವಮಾನ ಸಹಿಸಿಕೊಂಡು ಇದ್ದಾರೆ. ನಿಜಕ್ಕೂ ಸ್ವಾಭಿಮಾನ ಇದ್ದರೆ, ಬಾಬಾಸಾಹೇಬರ ರಕ್ತ ಹಂಚಿಕೊಂಡಿದ್ದರೆ ರಾಜೀನಾಮೆ ಕೊಟ್ಟು ಹೊರಬನ್ನಿ ಎಂದು ಸವಾಲು ಹಾಕಿದರು.

ಶೇ 60ರಷ್ಟು ಕಮಿಷನ್

ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳಿನ ಸರದಾರ. ಸುಳ್ಳು ಹೇಳುವುದರಲ್ಲಿ ಅವರಷ್ಟು ನಿಸ್ಸೀಮರು ಯಾರೂ ಇಲ್ಲ. ಇವರ ಅವಧಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಶೇ 60ರಷ್ಟು ಕಮಿಷನ್ ಆರೋಪ ಕೇಳಿ ಬರುತ್ತಿದೆ. ಜನ ಕಾಂಗ್ರೆಸ್ ವಿರುದ್ಧ ಆಕ್ರೋಶಗೊಂಡಿದ್ದು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಮಾತ್ರ ಕಾಂಗ್ರೆಸ್‌ಗೆ ಸಿಕ್ಕಿತ್ತು. ಈ ಬಾರಿ ಅದೂ ಸಿಗಲ್ಲ ಎಂದರು.

ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗೋಪಾಲ್ ಘಟಕಾಂಬಳೆ, ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ, ವಿಧಾನ ಪರಿಷತ್ತಿನ ಮಾಜಿ ಸದಸ್ಯರ ಅರುಣ ಶಹಾಪುರ, ಮುಖಂಡರಾದ ಚಿದಾನಂದ ಚಲುವಾದಿ, ಬಿ.ಆರ್. ಎಂಟಮಾನ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT