ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾದ ನಿಯಮ: ಬೇಡಿಕೆ ಕಳೆದುಕೊಂಡ ಆರ್.ಟಿ.ಇ

ಶಿಕ್ಷಣ ಹಕ್ಕು ಕಾಯ್ದೆ; ಮಕ್ಕಳಿಗೆ, ಖಾಸಗಿ ಶಾಲೆಗಳಿಗೆ ವರದಾನ; ಸರ್ಕಾರಿ ಶಾಲೆಗಳಿಗೆ ಶಾಪ
Last Updated 20 ಮಾರ್ಚ್ 2022, 10:22 IST
ಅಕ್ಷರ ಗಾತ್ರ

ವಿಜಯಪುರ: ಶಿಕ್ಷಣ ಹಕ್ಕು ಕಾಯ್ದೆ(ಆರ್.ಟಿ.ಇ) ಅಡಿಯಲ್ಲಿ ಖಾಸಗಿ ಶಾಲೆಯಲ್ಲಿ ಉಚಿತ ಪ್ರವೇಶ ಪಡೆಯಲು ಒಂದು ಕಾಲಕ್ಕೆ ಅಪಾರ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿದ್ದವು. ಸ್ಪರ್ಧೆ ಏರ್ಪಡುತ್ತಿತ್ತು. ಆದರೆ, ಬದಲಾದ ನಿಯಮದಿಂದಾಗಿ ಈಗ ಈ ಸೀಟುಗಳಿಗೆ ಯಾರೂ ಕೇಳುವವರಿಲ್ಲ. 2018 ರಿಂದ ಬೇಡಿಕೆ ಕುಸಿಯುತ್ತಿದ್ದು, ಈಗ ಇದರ ಅಡಿಯಲ್ಲಿ ಬೆರಳಕೆಯಷ್ಟು ಮಕ್ಕಳು ಓದುತ್ತಿದ್ದಾರೆ. ಇನ್ನೆರಡು ವರ್ಷದಲ್ಲಿ ಇದು ಶೂನ್ಯಕ್ಕೆ ಬರಲಿದೆ.

ಬೇಡಿಕೆ ಕುಸಿಯಲು ಕಾರಣವೇನೆಂದರೆ, ಒಂದು ಕಿ. ಮೀ. ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿದ್ದಲ್ಲಿ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಪ್ರವೇಶ ಬಯಸುವಂತಿಲ್ಲ. ಮಕ್ಕಳಿಗೆ ತಮಗೆ ಇಷ್ಟದ ಖಾಸಗಿ ಶಾಲೆಯಲ್ಲಿ ಆರ್. ಟಿ. ಇ. ಪ್ರವೇಶ ಇಲ್ಲದರಿಂದ ಪಾಲಕರು ಅತ್ತ ಸುಳಿಯುತ್ತಿಲ್ಲ.

ಇನ್ನೂ ಆರ್.ಟಿ.ಇ ವ್ಯಾಪ್ತಿಯಲ್ಲಿರುವ ಅನುದಾನಿತ ಶಾಲೆಗಳ ಪ್ರವೇಶ ಶುಲ್ಕವು ಅತಿ ಕಡಿಮೆ ಇರುವುದರಿಂದ ಈ ಕೋಟಾದಡಿ ಪ್ರವೇಶ ಪಡೆಯಲು ಬಯಸುತ್ತಿಲ್ಲ. ಅತಿ ದುಬಾರಿಯಾಗಿರುವ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸುವ ಹಂಬಲ ಇರುವ ಪೋಷಕರು ಅನುದಾನಿತ ಶಾಲೆಯ ಆರ್.ಟಿ.ಇ ಪ್ರವೇಶದಲ್ಲಿ ಅರ್ಜಿ ಹಾಕುತ್ತಿಲ್ಲ. ಹೀಗಾಗಿ ಆರ್. ಟಿ.ಇ ತನ್ನ ಮೌಲ್ಯ ಕಳೆದುಕೊಂಡಿದೆ ಎನ್ನುತ್ತಾರೆ ಆಲಮೇಲದ ಸಿದ್ಧರಾಮ ಸಲಾದಹಳ್ಳಿ.

ಸರ್ಕಾರಿ ಹಣ ದುರ್ಬಳಕೆ ಆಗುತ್ತಿರುವುದನ್ನು ಮತ್ತು ಖಾಸಗಿ ಶಾಲೆಗಳಿಗೆ ಅನುಕೂಲ ಮಾಡಿಕೊಡುವ ಈ ಕಾಯ್ದೆಗೆ 2018ರಲ್ಲಿ ಹೊಸ ನಿಯಮ ತಂದು ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

2009–10ನೇ ಸಾಲಿನಿಂದ 1ರಿಂದ 8ನೇ ತರಗತಿ ವರೆಗೆ ಸರ್ಕಾರವು ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಆರ್.ಟಿ.ಇ ಅಡಿಯಲ್ಲಿ ದಾಖಲಾತಿಗೆ ಅವಕಾಶ ನೀಡಿ ಆದೇಶ ಹೊರಡಿಸಿತ್ತು.

ಈಗಿರುವ ನಿಯಮದ ಪ್ರಕಾರ ಹತ್ತಿರದ ಸರ್ಕಾರಿ, ಅನುದಾನಿತ ಖಾಸಗಿ ಶಾಲೆಯಲ್ಲಿ ಮಾತ್ರ ಆರ್.ಟಿ.ಇ ಅಡಿಯಲ್ಲಿ ಸೀಟು ಪಡೆಯಲು ಅರ್ಜಿ ಸಲ್ಲಿಸಬೇಕು. ಆದರೆ, ಸರ್ಕಾರಿ ಶಾಲೆ ಹಾಗೂ ಅನುದಾನಿತ ಶಾಲೆಯಲ್ಲಿ ಸರಳವಾಗಿ ಪ್ರವೇಶ ಪಡೆಯಬಹುದು. ಅಲ್ಲದೇ, ಶುಲ್ಕವು ಹೆಚ್ಚಾಗಿ ಇರುವುದಿಲ್ಲ.

ಆಗ ಬಡವರೂ ಸಹ ಪ್ರತಿಷ್ಠಿತ ಶಾಲೆಗಳಲ್ಲಿ ದಾಖಲಾತಿ ಪಡೆದು ಉಚಿತ ವ್ಯಾಸಂಗ ಮಾಡುತ್ತಿದ್ದರು. ಹೀಗಾಗಿ ಸಹಜವಾಗಿಯೇ ಆರ್.ಟಿ.ಇ ಸೀಟುಗಳಿಗೆ ಹೆಚ್ಚಿನ ಬೇಡಿಕೆ ಇತ್ತು.

ಆರಂಭದಲ್ಲಿ ಇದನ್ನು ವಿರೋಧಿಸಿದ ಅನುದಾನರಹಿತ ಖಾಸಗಿ ಶಾಲೆಗಳು ನಂತರದಲ್ಲಿ ಇದರಿಂದ ಲಾಭ ಪಡೆಯುವ ದಾರಿ ಹುಡುಕಿದವು. ಇದರಿಂದ ಅಪಾರ ಪ್ರಮಾಣದ ಸರ್ಕಾರದ ಹಣ ಖಾಸಗಿ ಶಾಲೆಗಳ ಪಾಲಾಗತೊಡಗಿತು. ಇಷ್ಟೇ ಮೊತ್ತವನ್ನು ಸರ್ಕಾರಿ ಶಾಲೆಗಳಿಗೆ ನೀಡಿದರೆ ಸರ್ಕಾರಿ ಶಾಲೆಗಳನ್ನೇ ಬಲಿಷ್ಠ ಮಾಡಬಹುದು ಎಂಬ ಕೂಗು ಸಾರ್ವಜನಿಕವಾಗಿ ಪ್ರಬಲವಾದಾಗ ಸರ್ಕಾರವು ಚಿಂತನೆ ನಡೆಸಿತು.

ವಿಜಯಪುರ ಜಿಲ್ಲೆಯಲ್ಲಿ ಕಾಯ್ದೆ ಜಾರಿಯಿಂದ ಇಲ್ಲಿಯವರೆಗೆ 17,536 ವಿದ್ಯಾರ್ಥಿಗಳು ವಿವಿಧ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದು, ವಿದ್ಯಾಭ್ಯಾಸ ಮಾಡಿದ್ದಾರೆ. ಆರ್‌.ಟಿ.ಇ ಅಡಿ ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವನ್ನು ಸರ್ಕಾರ ಭರಿಸುತ್ತಿತ್ತು. ಗರಿಷ್ಠ ₹ 60 ಸಾವಿರದ ವರೆಗೂ ವಾರ್ಷಿಕ ಒಬ್ಬ ವಿದ್ಯಾರ್ಥಿಯ ಪರವಾಗಿ ಖಾಸಗಿ ಶಾಲೆಗೆ ಸಂದಾಯವಾಗುತ್ತಿತ್ತು. ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ₹ 8 ಸಾವಿರ ಪಾವತಿಸುತ್ತಿತ್ತು. ಇದರಿಂದ ಖಾಸಗಿ ಶಾಲೆಗಳ ಶೇ 25ರಷ್ಟು ಸೀಟುಗಳು ಆರ್‌.ಟಿ.ಇ ಅಡಿ ಭರ್ತಿಯಾಗಿ, ಖಾಸಗಿ ಶಾಲೆಗಳು ಸಮೃದ್ಧವಾಗಿ, ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೇ ಮುಚ್ಚುವ ಸ್ಥಿತಿ ತಲುಪಿದವು.

2019 ರ ಶೈಕ್ಷಣಿಕ ವರ್ಷದಿಂದ ಸರ್ಕಾರ, ಸರ್ಕಾರಿ ಶಾಲೆಗಳು ಇದ್ದಲ್ಲಿ ಖಾಸಗಿ ಶಾಲೆಗಳಲ್ಲಿ ಆರ್.ಟಿ.ಇ ಅಡಿಯಲ್ಲಿ ದಾಖಲಾತಿಗೆ ಅವಕಾಶ ನೀಡದೇ, ನಿರ್ಬಂಧ ಹೇರಲಾಗಿದೆ. ಹೀಗಾಗಿ ಸಹಜವಾಗಿಯೇ ಆರ್.ಟಿ.ಇ ಸೀಟುಗಳಿಗೆ ಬೇಡಿಕೆ ಇದ್ದರೂ ಲಭ್ಯವಿಲ್ಲ.

ಇದರೊಂದಿಗೆ ಸರ್ಕಾರಿ ಹಾಗೂ ಅನುದಾನತಿ ಶಾಲೆಗಳಲ್ಲಿ ಮಾತ್ರ ಆರ್.ಟಿ.ಇ ಸೀಟುಗಳ ಹಂಚಿಕೆಗೆ ಕ್ರಮ ಕೈಗೊಳ್ಳಲಾಯಿತು. ಈ ಶಾಲೆಗಳಲ್ಲಿ ಶುಲ್ಕ ವಿನಾಯಿತು ಹಾಗೂ ಅತಿ ಕಡಿಮೆ ಶುಲ್ಕ ಇರುವುದರಿಂದ ಸಹಜವಾಗಿಯೇ ಪಾಲಕರು ಆರ್.ಟಿ.ಇ ಸೀಟುಗಳತ್ತ ಮುಖ ಮಾಡದೇ ಇರುವುದು ಕಾರಣ.

ಅನುದಾನ ರಹಿತ ಶಾಲೆಗಳಲ್ಲಿ ಆರ್.ಟಿ.ಇ ಸೀಟು ಲಭ್ಯವಿರದೇ ಇರುವುದರಿಂದ ನಗರ ಪ್ರದೇಶದ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ಪಡೆಯಬೇಕೆಂಬ ಬಡ ವಿದ್ಯಾರ್ಥಿಗಳ ಕನಸು ಕಮರಿದಂತಾಗಿದೆ.

ಸದ್ಯ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಪ್ರವೇಶ ಪಡೆದಿರುವ ಮಕ್ಕಳು ತಮ್ಮ ಎಂಟನೆಯ ವರ್ಗದ ಓದು ಮುಗಿಸುವವರೆಗೂ ಮುಂದುವರೆಯುತ್ತಿದ್ದಾರೆ.

***

ಆರ್.ಟಿ.ಇ ಮಾಹಿತಿ ಗೊತ್ತು ಮಾಡದ ಬಿಇಒ

ಸಿಂದಗಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳಲ್ಲಿ ಪ್ರತಿಯೊಂದು ವಿಭಾಗಕ್ಕೂ ಒಬ್ಬ ಬಿಆರ್‌ಪಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿದರೆ, ಆರ್.ಟಿ.ಇ ವಿಭಾಗಕ್ಕೆ ಹಲವಾರು ವರ್ಷಗಳಿಂದ ಬಿಇಒಗಳೇ ನೋಡಲ್ ಅಧಿಕಾರಿ ನೇಮಕ ಮಾಡದೇ ತಮ್ಮ ಕೈಯಲ್ಲಿಯೇ ಇಟ್ಟುಕೊಂಡಿದ್ದಾರೆ. ಹೀಗಾಗಲು ಇದು ದುಡ್ಡಿನ ವ್ಯವಹಾರ ಒಳಗೊಂಡಿದ್ದರಿಂದ ಬೇರೆಯವರಿಗೆ ಮಾಹಿತಿ ಕೂಡ ಗೊತ್ತಾಗಬಾರದು ಎಂಬುದು ಅದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಶಿಕ್ಷಣ ಇಲಾಖೆ ಸಿಬ್ಬಂದಿ.

ಚಾಚೂ ತಪ್ಪದೇ ಅನುಷ್ಠಾನಕ್ಕೆ ಬಂದರೆ ಈ ಯೋಜನೆ ಅತ್ಯಂತ ಉಪಯುಕ್ತವಾದುದು. ಆದರೆ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯನ್ನು ತುಂಬಾ ದುರುಪಯೋಗ ಪಡಿಸಿಕೊಂಡಿವೆ. ಅನಾವಶ್ಯಕ ಖರ್ಚು-ವೆಚ್ಚ ತೋರಿಸಿ ಸರ್ಕಾರದಿಂದ ಅನುದಾನ ಎತ್ತಿ ಹಾಕುವುದು ಸಾಮಾನ್ಯವಾಗಿತ್ತು ಎಂದು ಹೆಸರು ಹೇಳಲಿಚ್ಚಿಸದ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಈ ಯೋಜನೆಯ ಬಗ್ಗೆ ಮಾಹಿತಿ ಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಹರಸಾಹಸ ನಡೆಸಬೇಕಾಯಿತು. ಆರ್.ಟಿ.ಇ ವಿಭಾಗ ಈವರೆಗೂ ಬಿಇಒ ಕಡೆಗೆ ಉಳಿದುಕೊಂಡು ಬಂದಿದೆ.

ಈ ಹಿಂದಿನ ಹಳೆಯ ಅನುದಾನ ರಹಿತ ಶಾಲೆಗಳಲ್ಲಿ ಮುಂದುವರೆದಿರುವ ಈ ಯೋಜನೆಯಿಂದ ಶಾಲೆಗಳಿಗೆ ಆರ್.ಟಿ.ಇ ಹಣ ಬಿಲ್ ಪಾಸ್‌ ಮಾಡಲು ಸಂಬಂಧಿಸಿದ ಬಿಇಒ ಹೆಬ್ಬಟ್ಟು ಒತ್ತಬೇಕಾಗುತ್ತದೆ. ಆದರೆ, ಅವರು ಹೆಬ್ಬೆಟ್ಟು ಒತ್ತುವುದು ಅಷ್ಟು ಸರಳ ಕೆಲಸವಲ್ಲ ಎನ್ನುತ್ತಾರೆ ಅನುದಾನರಹಿತ ಶಾಲೆಯ ಮುಖ್ಯಸ್ಥರೊಬ್ಬರು.

****

ಖಾಸಗಿ ಶಾಲೆಗಳಲ್ಲಿ ಹಂಚಿಕೆಯಾದ ಸೀಟುಗಳಿಗೆ ಸರ್ಕಾರ ಶುಲ್ಕ ಪಾವತಿಗೆ ಹಣ ಒದಗಿಸಲು ಹಿಂಜರಿದು ಆರ್.ಟಿ.ಇ ಸೀಟುಗಳನ್ನೇ ಸ್ಥಗಿತಗೊಳಿಸಿ ಬಡವರಿಗೆ ಉತ್ತಮ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದೆ. ಕೂಡಲೇ ಖಾಸಗಿ ಶಾಲೆಗಳಿಗೂ ಆರ್.ಟಿ.ಇ ಅಡಿಯಲ್ಲಿ ದಾಖಲಾತಿಗೆ ಅವಕಾಶ ನೀಡಬೇಕು
–ಶಂಕರ ಹಾವಿನಾಳ, ರಾಜ್ಯ ಉಪಾಧ್ಯಕ್ಷ, ರೂಪ್ಸ, ಬೆಂಗಳೂರು

****

ಸರ್ಕಾರ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಆರ್.ಟಿ.ಇ ಸೀಟು ಹಂಚಿಕೆ ಕಡಿತಗೊಳಿಸಿರುವುದರಿಂದ ನಮ್ಮಂತಹ ಬಡವರಿಗೆ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಕೂಡಲೇ ಆರ್.ಟಿ.ಇ ಸೀಟು ಹಂಚಿಕೆಯನ್ನು ಎಲ್ಲ ಬಗೆಯ ಶಾಲೆಗಳಿಗೂ ಒದಗಿಸಿ
–ದಿಲೀಪ ಬನಸೋಡೆ, ಕೂಲಿ ಕಾರ್ಮಿಕ, ಹಾವಿನಾಳ

****

ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ಆರ್.ಟಿ.ಇ ಅಡಿಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಸರ್ಕಾರದ ಸೌಲಭ್ಯ ನೀಡುವುದರ ಜೊತೆಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ

–ರಮೇಶ ಅರಸನಾಳ, ಮುಖ್ಯ ಶಿಕ್ಷಕ,
–ಗುರುಕೃಪಾ ಹಿರಿಯ ಪ್ರಾಥಮಿಕ ಶಾಲೆ, ಬಸವನಬಾಗೇವಾಡಿ

****

ಅನುದಾನರಹಿತ ಶಾಲೆಗಳಿಗೆ ಆರ್.ಟಿ.ಇ ಸೀಟು ರದ್ದುಗೊಳಿಸಿದ್ದರಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಅಲ್ಲದೇ, ಗ್ರಾಮೀಣ ಪ್ರದೇಶದ ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ
–ಬಸವರಾಜ ಪೂಜಾರಿ,ಅಧ್ಯಕ್ಷ,
ಜಿಲ್ಲಾ ಅನುದಾನರಹಿತ ಶಾಲೆಗಳ ಒಕ್ಕೂಟ, ವಿಜಯಪುರ

****

ಆರ್.ಟಿ.ಇ ಯೋಜನೆ ಅನುದಾನರಹಿತ ಗ್ರಾಮೀಣ ಹಾಗೂ ಪಟ್ಟಣದ ಸಣ್ಣ ಶಿಕ್ಷಣ ಸಂಸ್ಥೆಗಳಿಗೆ ತುಂಬಾ ಉಪಯುಕ್ತವಾಗಿತ್ತು
–ಗುರುರಾಜ ದೇಶಪಾಂಡೆ
ಮುಖ್ಯ ಶಿಕ್ಷಕ, ಸಾಯಿಬಾಬಾ ಪ್ರಾಥಮಿಕ ಶಾಲೆ, ಶಾಂತವೀರ ನಗರ, ಸಿಂದಗಿ.

****

ನಮ್ಮ ಶಾಲೆಯಲ್ಲಿ ಈಗ 4 ಮತ್ತು 5ನೇ ತರಗತಿಗೆ ಮಾತ್ರ ಆರ್ ಟಿ ಇ ಅಡಿಯಲ್ಲಿ 12 ವಿದ್ಯಾರ್ಥಿಗಳಿದ್ದಾರೆ. ಮುಂದಿನ ವರ್ಷದಲ್ಲಿ ಈ ಸಂಖ್ಯೆಯೂ ಕಡಿಮೆಯಾಗಲಿದೆ. ಬಡ ಮಕ್ಕಳಿಗೆ ಇದರಿಂದ ತುಂಬಾ ಅನುಕೂಲವಿತ್ತು.
-ಸತೀಶ್ ಚೆಂಗಟ್ಟಿ ಆಡಳಿತಾಧಿಕಾರಿ ಐ.ಕೆ.ರಾಯಲ್, ಆಲಮೇಲ

****

ತಮಗೆ ಇಷ್ಟವಾದ ಶಾಲೆಯಲ್ಲಿ ಪ್ರವೇಶ ಪಡೆಯಲು ಅನುಕೂಲವಾಗುವಂತೆ ಮೊದಲಿನ ನಿಯಮ ಜಾರಿಗೆ ತರಬೇಕು.
-ಅಶೋಕ ಕೊಳಾರಿ, ಪಟ್ಟಣ ಪಂಚಾಯಿತಿ ಸದಸ್ಯ, ಆಲಮೇಲ

****

ಆರ್ ಟಿ ಇ ಅಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗೆ ಕೆಲವು ವರ್ಷಗಳವರೆಗೆ ಮಾತ್ರ ಸರ್ಕಾರದಿಂದ ಅನುದಾನ ಬರುತ್ತಿದೆ. ಆ ಮೇಲೆ ಅನುದಾನ ಸ್ಥಗಿತಗೊಳ್ಳುತ್ತದೆ. ಇದರಿಂದ ಆರ್ ಟಿ ಇ ವ್ಯವಸ್ಥೆ ತನ್ನ ಮಹತ್ವ ಕಳೆದುಕೊಂಡಿದೆ
–ವಸಂತ ರಾಠೋಡ,ಕ್ಷೇತ್ರ ಶಿಕ್ಷಣಾಧಿಕಾರಿ, ಇಂಡಿ

****

ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ರಮೇಶ ಎಸ್.ಕತ್ತಿ, ಶಾಂತೂ ಹಿರೇಮಠ, ಅಲ್ಲಮಪ್ರಭು ಕರ್ಜಗಿ, ಪ್ರಕಾಶ ಮಸಬಿನಾಳ, ಎ.ಸಿ.ಪಾಟೀಲ, ಶರಣಬಸಪ್ಪ ಗಡೇದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT