ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲತವಾಡ | ಬಿಳಿಜೋಳಕ್ಕೆ ಲದ್ದಿ ಹುಳು ಕಾಟ

Published 25 ನವೆಂಬರ್ 2023, 4:55 IST
Last Updated 25 ನವೆಂಬರ್ 2023, 4:55 IST
ಅಕ್ಷರ ಗಾತ್ರ

ನಾಲತವಾಡ: ಬರದಿಂದ ಕೆಂಗಟ್ಟ ರೈತ ಸಮುದಾಯ ಪ್ರಸಕ್ತ ವರ್ಷ ಸುರಿದ ಅಲ್ಪ ಮಳೆಗೇ ಬಿತ್ತನೆ ಕಾರ್ಯ ಮಾಡಿದ್ದು, ಇದೀಗ ಬೆಳೆಗಳಿಗೆ ವಿವಿದ ರೋಗ ಬಾಧೆ ಉಂಟಾಗಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕುಸುಬೆ ಬೆಳೆಗೆ ಕಪ್ಪು ಹೇನು (ಹಿಪ್ಸಿರು) ಕಾಟ, ಹೆಸರಿನ ಬೆಳೆಗೆ ಹಳದಿ ರೋಗ, ಕಟಾವಿನ ಹಂತದ ತೊಗರಿ ಬೆಳೆಗೆ ಬಿಲ್ಲೇ ಹುಳು ಬಾಧೆ, ಮೆಣಸಿನ ಕಾಯಿ ಬೆಳೆಗೆ ಮುಟಗಿ ರೋಗ ಹತ್ತುತ್ತಿದೆ. ಗೋವಿನ ಜೋಳಕ್ಕೆ ಹಾಗೂ ಬಿಳಿ ಜೋಳಕ್ಕೆ ಸೈನಿಕ ಹುಳು (ಲದ್ದಿ ಹುಳು), ಜಿಗಿ ರೋಗ ಕಾಣಿಸಿಕೊಂಡಿದೆ.

ಸಾಲ ಮಾಡಿ ಬೀಜ ಗೊಬ್ಬರ ಖರೀದಿಸಿದ್ದ ರೈತ ಈಗ ಸಾಲ ತೀರಿಸಲು ಆಗದೇ ಮಳೆ ಕೊರತೆಯಿಂದ ಬೆಳೆ ಕೈಗೆ ಬರುವುದಿಲ್ಲ ಎಂದು ಮುಂಗಾರು ಬೆಳೆಯನ್ನು ಹರಗಿದ್ದಾರೆ. ಹಿಂಗಾರಿ ಬೆಳೆಗೆ ಕೀಟ ಬಾಧೆ ಹೆಚ್ಚಿದೆ.

ನಾಲತವಾಡ ಸುತ್ತಮುತ್ತ ಗ್ರಾಮಗಳಲ್ಲಿಯ ನೂರಾರು ಎಕರೆ ಜಮೀನುಗಳಲ್ಲಿ ಅಲ್ಪ ಸ್ವಲ್ಪ ಬೆಳೆದ ಬಿಳಿಜೋಳಕ್ಕೆ ಸೈನಿಕ ಹುಳು ಹಾಗೂ ಸಕ್ಕರೆಯ ಜಿಗಿ ರೋಗ ಕಾಣಿಸಿಕೊಂಡಿದೆ. ಎಲೆಗಳನ್ನು ತೂತು ಮಾಡಿ ಬೆಳೆಯ ಸುಳಿಯಲ್ಲಿ ಸೇರಿ ಬೆಳೆ ನಾಶ ಮಾಡುತ್ತಿವೆ. ಹುಳುಗಳು ಮೊಟ್ಟೆಗಳನ್ನು ಇಟ್ಟು ಸಂತಾನ ಹೆಚ್ಚಾಗಿ, ಎಳೆಯ ಬೆಳೆ ತಿಂದು ನಾಶ ಮಾಡುತ್ತದೆ. ಇದು ಹೆಚ್ಚಾದಂತೆ ಎಲ್ಲ ಜಮೀನನ್ನು ನಾಶ ಮಾಡುವ ಸಾಧ್ಯತೆ ಇದೆ.

ಉತ್ತರ ಕರ್ನಾಟಕದ ಪ್ರಮುಖ ಆಹಾರದ ಬಿಳಿ ಜೋಳಕ್ಕೆ ಭಾರೀ ಬೇಡಿಕೆ ಇದ್ದು, ಪ್ರತಿ ಕ್ವಿಂಟಲ್‌ಗೆ ₹7 ಸಾವಿರ ದರ ಸಿಗುವ ನಿರೀಕ್ಷೆ ಇದೆ. ಜಾನುವಾರುಗಳಿಗೆ ಮೇವು ಸಿಗುವುದೆಂಬ ಆಸೆಯಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ.

ಕೃಷಿ ವಿಜ್ಣಾನಿ ಡಾ.ಮಹಾಂತೇಶ ಸಜ್ಜನ ಅವರು, ‘ಬೆಳೆ ರಕ್ಷಣೆಗೆ ಸೌರ ದೀಪ ಬಳಕೆ ಮಾಡಬೇಕು. ಬೇಸಿಗೆ ಸಂದರ್ಭದಲ್ಲಿ ಆಳವಾಗಿ ಉಳುಮೆ ಮಾಡಬೇಕು. ಹೊಲದ ಸುತ್ತಲು ಬದುವುಗಳ ಮೇಲೆ ಆಶ್ರಯ ಸಸ್ಯ ಮತ್ತು ಕಳೆ ಕಿತ್ತು ಹಾಕಬೇಕು. ಇನ್ನು ಬೀಜೋಪಚಾರದಲ್ಲಿ ಸಯಾಂಟ್ರನಿಲಿಪ್ರೋಲ್‌, ಎಎಸ್‌ಸಿ, ಥಯೋಮಿಥೋಕ್ಸಾಮ್‌, ಕೀಟನಾಶಕಗಳನ್ನು ಬೀಜೋಪಚಾರದಲ್ಲಿ ಬಳಕೆ ಮಾಡುವುದರಿಂದ ಕೀಟದಿಂದ ಬೆಳೆ ರಕ್ಷಣೆಯಾಗುತ್ತದೆ’ ಎಂದು ತಿಳಿಸಿದ್ದಾರೆ.

‘ರೋಗ ನಿಯಂತ್ರಣಕ್ಕೆ ಎಮಾಮೆಕ್ಟಿನ್‌ ಬೆಂಜೋಯೇಟ್‌ 5 ಎಸ್‌.ಜಿ. 10 ಗ್ರಾಂ ಔಷಧವನ್ನು 20 ಲೀಟರ್ ನೀರಿಗೆ ಬೆರೆಸಿ ಬೆಳೆಯ ಸುಳಿಯಲ್ಲಿ ಸಿಂಪಡಿಸಬೇಕು. ಕೀಟ ನಾಶಕ ಅಜಾಡಿರೆಕ್ಟಿನ್‌ 10,000 ಪಿಪಿಎಂ 2 ಮಿ.ಲೀ ಒಂದು ಲೀ. ನೀರಿಗೆ ಮಿಶ್ರಣ ಮಾಡಿ, ಸುಳಿಯಲ್ಲಿ ಸಿಂಪರಣೆ ಮಾಡುವುದರಿಂದಲೂ ಮೊಟ್ಟೆ ಮತ್ತು ಮರಿಹುಳು ನಾಶಪಡಿಸ ಬಹುದು’ ಎಂದು ಮುದ್ದೇಬಿಹಾಳ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಸುರೇಶ ಭಾವಿಕಟ್ಟಿ ಸಲಹೆ ನೀಡಿದ್ದಾರೆ.

ನಮ್ಮ ಹಿರಿಯರ ಕಾಲದಿಂದಲೂ ಬಿಳಿ ಜೋಳ ಕೃಷಿಯಲ್ಲಿ ತೊಡಗಿರುವೆ. ಯಾವುದೇ ಕ್ರಿಮಿನಾಶಕ ಔಷಧ ಸಿಂಪಡಿಸಿದ ನೆನಪಿಲ್ಲ. ಇದೀಗ ಶುದ್ಧ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಿ ವಿಷ ಉಣ್ಣುವ ಕಾಲ ಬಂದಿದೆ.
ಅಡಿವೆಪ್ಪ ಕೆಂಭಾವಿ, ರೈತ
ಸೈನಿಕ ಹುಳು ತೋರಿಸುತ್ತಿರುವ ರೈತ
ಸೈನಿಕ ಹುಳು ತೋರಿಸುತ್ತಿರುವ ರೈತ
ಸೈನಿಕ ಹುಳು ತೋರಿಸುತ್ತಿರುವ ರೈತ ಅಮರೇಶ ಹಟ್ಟಿ
ಸೈನಿಕ ಹುಳು ತೋರಿಸುತ್ತಿರುವ ರೈತ ಅಮರೇಶ ಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT