ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಕೋವಿಡ್‌ ಪರಿಣಾಮ; ರಕ್ತ ಸಂಗ್ರಹ ಕೊರತೆ

ರಕ್ತದಾನ ಮಾಡಿ ಜೀವ ಉಳಿಸಿ; ಡಾ.ಸುಮಾ ಮಮದಾಪುರ ಮನವಿ
Last Updated 4 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್ ಪರಿಣಾಮ ಜಿಲ್ಲೆಯಲ್ಲಿ ಮೂರು ತಿಂಗಳಿಂದ ರಕ್ತ ಸಂಗ್ರಹ ತೀವ್ರ ಪ್ರಮಾಣದಲ್ಲಿ ತಗ್ಗಿದ್ದು, ತುರ್ತು ಚಿಕಿತ್ಸೆಗೆ ಸಮಸ್ಯೆಯಾಗಿದೆ.

ಕೋವಿಡ್‌ನಿಂದಾಗಿ ಎಲ್ಲಿಯೂ ಜನರು ಗುಂಪುಗೂಡುವಂತಿಲ್ಲದ ಪರಿಣಾಮ ರಕ್ತದಾನ ಶಿಬಿರ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ನಿಗದಿಯಾಗಿದ್ದ ಶಿಬಿರಗಳು ರದ್ದುಗೊಂಡಿವೆ. ಜೊತೆಗೆ ದಾನಿಗಳೂ ರಕ್ತದಾನಕ್ಕೆ ಮುಂದೆ ಬರುತ್ತಿಲ್ಲ ಎಂದು ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಸುಮಾ ಮಮದಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊರೊನಾಕ್ಕೂ ಮೊದಲು ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರಕ್ಕೆ 250ರಿಂದ 300 ಯುನಿಟ್‌ ರಕ್ತ ಸಂಗ್ರಹವಾಗುತ್ತಿತ್ತು. ಸದ್ಯ 100 ಯುನಿಟ್‌ ಸಹ ಸಿಗುತ್ತಿಲ್ಲ ಎಂದು ಅವರು ಹೇಳಿದರು.

ಅಪಘಾತದಲ್ಲಿ ಗಾಯಗೊಂಡವರಿಗೆ, ಗರ್ಭಿಣಿಯರಿಗೆ, ತಲಸ್ಸೇಮಿಯಾ, ಹಿಮೋಫಿಲಿಯಾ, ಅಪೌಷ್ಠಿಕತೆಯಿಂದ ಬಳಲುವ ಮಕ್ಕಳು, ಕ್ಯಾನ್ಸರ್‌ ಪೀಡಿತರಿಗೆ ಕಾಲಕಾಲಕ್ಕೆ ರಕ್ತದ ಅವಶ್ಯಕತೆ ಇದೆ. ಆದರೆ, ಸದ್ಯ ರಕ್ತದ ಕೊರತೆಯಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಕೊರೊನಾಕ್ಕಿಂತ ಮೊದಲು ತಿಂಗಳಿಗೆ ಜಿಲ್ಲಾಸ್ಪತ್ರೆಯಿಂದ 20ಕ್ಕೂ ಅಧಿಕ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿತ್ತು. ಅಲ್ಲದೇ, ಖಾಸಗಿ ಬ್ಲಡ್‌ ಬ್ಯಾಂಕುಗಳು ಏರ್ಪಡಿಸುತ್ತಿದ್ದ ರಕ್ತದಾನ ಶಿಬಿರದಲ್ಲಿ ಸಂಗ್ರಹವಾದ ರಕ್ತದಲ್ಲಿ ಶೇ 25ರಷ್ಟನ್ನು ಸರ್ಕಾರಿ ಜಿಲ್ಲಾಸ್ಪತ್ರೆಗೆ ಕಡ್ಡಾಯವಾಗಿ ನೀಡುತ್ತಿದ್ದರು. ಆದರೆ, ಈಗ ಯಾವುದೇ ಶಿಬಿರಗಳು ನಡೆಯುತ್ತಿಲ್ಲ ಎಂದು ಹೇಳಿದರು.

ಜಿಲ್ಲಾಸ್ಪತ್ರೆ ರಕ್ತನಿಧಿಗೆ ಹೊಸದಾಗಿ ರಕ್ತ ಸಂಗ್ರಹಣೆ ಮತ್ತು ವಿತರಣೆ ವಾಹನವೊಂದು ಸೇರ್ಪಡೆಯಾಗಿದ್ದು, ಈ ವಾಹನವನ್ನು ಜಿಲ್ಲೆಯ ವಿವಿಧ ಪಟ್ಟಣ, ಹಳ್ಳಿಗಳಿಗೆ ಪ್ರತಿದಿನ ತೆರಳಿ ಕನಿಷ್ಠ 10 ಯುನಿಟ್‌ ರಕ್ತ ಸಂಗ್ರಹ ಮಾಡಿಕೊಂಡು ಬರುತ್ತಿದ್ದು, ಸದ್ಯ ಇದೊಂದೇ ಆಧಾರವಾಗಿದೆ ಎಂದು ತಿಳಿಸಿದರು.

ರಕ್ತದಾನಕ್ಕೂಕೋವಿಡ್‌ಗೂ ಯಾವುದೇ ಸಂಬಂಧವಿಲ್ಲ. ರಕ್ತದಾನ ಮಾಡುವುದರಿಂದ ಕೋವಿಡ್‌ ಬರುವುದಿಲ್ಲ. ಯುವಜನರು, ದಾನಿಗಳು ಅಂಜಿಕೆ ಇಲ್ಲದೇ ರಕ್ತದಾನ ಮಾಡಲು ಮುಂದೆಬರಬೇಕು. ಅಪಾಯದಲ್ಲಿರುವ ಜನರ ಜೀವ ರಕ್ಷಣೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ರಕ್ತ ಸಂಗ್ರಹಕ್ಕೆ ವಾಹನ
ವಿಜಯಪುರ: ಜಿಲ್ಲೆಯ ಯಾವುದೇ ಹಳ್ಳಿ, ಪಟ್ಟಣ, ನಗರಗಳಲ್ಲಿ ಐದಾರು ಜನ ರಕ್ತದಾನ ಮಾಡುವವರು ಇದ್ದರೆ ಜಿಲ್ಲಾಸ್ಪತ್ರೆ ದೂರವಾಣಿ ಸಂಖ್ಯೆ 0835 270108 ಅಥವಾ ಮೊಬೈಲ್‌ ಸಂಖ್ಯೆ 9448679583 ಸಂಪರ್ಕಿಸಿದರೆ ಜಿಲ್ಲಾಸ್ಪತ್ರೆಯ ವೈದ್ಯರು, ನರ್ಸ್‌, ಆರೋಗ್ಯ ಸಿಬ್ಬಂದಿ ಒಳಗೊಂಡ ವಾಹನವನ್ನು ಸ್ಥಳಕ್ಕೆ ಕಳುಹಿಸಲಾಗುವುದು. ಆಸಕ್ತರು ಸಂಪರ್ಕ ಮಾಡಬೇಕು ಎಂದು ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಸುಮಾ ಮಮದಾಪುರ ಮನವಿ ಮಾಡಿದರು.

ಜಿಲ್ಲಾಸ್ಪತ್ರೆ ರಕ್ತ ನಿಧಿಯಲ್ಲಿ ಮೂರು ಫಿಡ್ಜ್‌ಗಳಿದ್ದು, ಪ್ರತಿಯೊಂದರಲ್ಲಿ 360 ಯುನಿಟ್‌ ರಕ್ತ ಸಂಗ್ರಹ ಮಾಡುವ ಸಾಮಾರ್ಥ್ಯ ಇದೆ ಎಂದು ಹೇಳಿದರು.

ಬಡವರಿಗೆ ಉಚಿತ; ಉಳ್ಳವರಿಗೆ ಶುಲ್ಕ
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಿಪಿಎಲ್‌ ಕಾರ್ಡ್‌ದಾರರು, ಗರ್ಭಿಣಿಯರು, ನವಜಾತ ಶಿಶುಗಳಿಗೆ, ಎಚ್‌ಐವಿ ರೋಗಿಗಳಿಗೆ, ತಲಸೇಮಿಯಾ, ಹಿಮೋಫಿಲಿಯಾ ರೋಗಿಗಳಿಗೆ ಹಾಗೂ ಅಪೌಷ್ಠಿಕ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಉಚಿತವಾಗಿ ರಕ್ತ ನೀಡಲಾಗುವುದು ಡಾ.ಸುಮಾ ಮಮದಾಪುರ ಹೇಳಿದರು.

ಜಿಲ್ಲಾಸ್ಪತ್ರೆಗೆ ದಾಖಲಾಗುವಎಪಿಎಲ್‌ ಚೀಟಿದಾರರು ರಕ್ತ ಬೇಕಾದಲ್ಲಿ ಯುನಿಟ್‌ಗೆ ₹ 350 ಶುಲ್ಕ ಕಟ್ಟಬೇಕಾಗುತ್ತದೆ. ಖಾಸಗಿ ಆಸ್ಪತ್ರೆ ರೋಗಿಗಳಿಗೆ ಅಗತ್ಯವಿದ್ದರೆ ₹ 1450 ಶುಲ್ಕ ಭರಿಸಬೇಕಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಿಪಿಎಲ್‌ ಕಾರ್ಡ್‌ದಾರರು ₹725 ಶುಲ್ಕ ತೆರಬೇಕಾಗುತ್ತದೆ ಎಂದು ಹೇಳಿದರು.

*
ಜಿಲ್ಲೆಯಲ್ಲಿ ಪ್ರತಿ ತಿಂಗಳು ಸುಮಾರು 500 ಯುನಿಟ್‌ ರಕ್ತದ ಬೇಡಿಕೆ ಇದೆ. ಆದರೆ, ಸದ್ಯ 100 ಯುನಿಟ್ ಸಹ ಸಂಗ್ರಹವಾಗುತ್ತಿಲ್ಲ‌.
-ಡಾ.ಶರಣಪ್ಪ ಕಟ್ಟಿ, ಜಿಲ್ಲಾ ಶಸ್ತ್ರ ಚಿಕಿತ್ಸಕ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT