ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆನೆ ಪಥ’ದಲ್ಲಿ ಸಾಗಿದ ಸೈಕಲ್‌ ಜಾಥಾ

ವಿಜಯಪುರದ ಹನ್ನೊಂದು ಹವ್ಯಾಸಿ ಸೈಕ್ಲಿಸ್ಟ್‌ಗಳು ಭಾಗಿ
Last Updated 10 ಅಕ್ಟೋಬರ್ 2020, 19:45 IST
ಅಕ್ಷರ ಗಾತ್ರ

ವಿಜಯಪುರ: ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ವನ್ಯಜೀವಿ ಸಪ್ತಾಹದ ಅಂಗವಾಗಿ ಬೆಳಗಾವಿ ಜಿಲ್ಲೆಯ ಹೆಮ್ಮಡಗದಿಂದ ಚಿಕ್ಕಮಗಳೂರು ಜಿಲ್ಲೆಯ ಮುತ್ತೋಡಿ ವರೆಗೆ ಆಯೋಜಿಸಿದ್ದ ಸೈಕಲ್‌ ಜಾಥಾದಲ್ಲಿ ವಿಜಯಪುರ ಜಿಲ್ಲೆಯ 11 ಹವ್ಯಾಸಿ ಸೈಕ್ಲಿಸ್ಟ್‌ಗಳು ಭಾಗವಹಿಸಿ, ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

‘ಆನೆಪಥ ಸಂರಕ್ಷಿಸಿ’ ಹಾಗೂ ‘ಭವಿಷ್ಯಕ್ಕಾಗಿ ರಣಹದ್ದುಗಳು’ ಎಂಬ ವಿಷಯವಾಗಿಅಕ್ಟೋಬರ್‌ 2ರಿಂದ ಒಂದು ವಾರಗಳ ಕಾಲ ನಡೆದ ಸೈಕಲ್ ಜಾಥಾದಲ್ಲಿ ವಿಜಯಪುರ ಸೈಕ್ಲಿಂಗ್‌ ಗ್ರೂಪ್‌ನ ಮಹಾಂತೇಶ ಬಿರಾದಾರ, ಶಿವನಗೌಡ ಪಾಟೀಲ, ಶ್ರೀಕಾಂತ ಮಂತ್ರಿ, ಸೋಮಶೇಖರ ಸ್ವಾಮಿ, ಸೋಮು ಹಿರೇಕುರುಬರ, ಡಾ.ರಾಜು ಯಲಗೊಂಡ, ಸಂದೀಪ ಮಡಗೊಂಡ, ನಂದೀಶ ಹುಂಡೇಕರ, ಬಸವರಾಜ ದೇವರ, ಅಮಿತ್‌ ಬಿರಾದಾರ ಮತ್ತು ವಿಜಯ್‌ ಪಾಲ್ಗೊಂಡಿದ್ದರು.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಹವ್ಯಾಸಿ ಸೈಕ್ಲಿಸ್ಟ್‌ ಮಹಾಂತೇಶ ಬಿರಾದಾರ, ಅರಣ್ಯ ಇಲಾಖೆ ಪ್ರಥಮ ಬಾರಿಗೆ ಆಯೋಜಿಸಿದ್ದ ಸೈಕಲ್‌ ಜಾಥಾವು ಪಶ್ಚಿಮಘಟ್ಟದ ದಟ್ಟ ಅರಣ್ಯ ಪ್ರದೇಶದಲ್ಲಿ ಒಂದು ವಾರ ಸಾಗಿತು. ಅರಣ್ಯ ರಕ್ಷಣೆ, ಆನೆ, ರಣಹದ್ದುಗಳ ಸಂರಕ್ಷಣೆ ಹಾಗೂ ವಾಹನಗಳ ಬದಲು ಸೈಕಲ್‌ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವುದು ಜಾಥಾದ ಉದ್ದೇಶವಾಗಿತ್ತು ಎಂದರು.

ವಿಜಯಪುರದ 11, ಬೆಳಗಾವಿಯ 6, ಬಾಗಲಕೋಟೆಯ 5, ಹುಬ್ಬಳ್ಳಿಯ 10, ಬೆಂಗಳೂರು ಮತ್ತು ಬಳ್ಳಾರಿಯ ತಲಾ ಇಬ್ಬರು ಸೇರಿದಂತೆರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 40 ಹವ್ಯಾಸಿ ಸೈಕ್ಲಿಸ್ಟ್‌ಗಳು ಭಾಗವಹಿಸಿದ್ದೆವು ಎಂದು ತಿಳಿಸಿದರು.

ಜಾಥಾಕ್ಕೆ ಶಾಸಕಿ ಅಂಜಲಿ ನಿಂಬಾಳಕರ, ಬೆಳಗಾವಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಸಿಸಿಎಫ್‌) ಬಿ.ವಿ.ಪಾಟೀಲ, ಡಿಸಿಎಫ್‌ ಅಮರನಾಥ ಅವರು ಹಸಿರು ನಿಶಾನೆ ತೋರಿದರು.

ಹೆಮ್ಮಡಗದಿಂದ ಆರಂಭವಾದ ಸೈಕಲ್‌ ಜಾಥಾವು ಖಾನಾಪುರ, ನಂದಗಡ, ದಾಂಡೇಲಿ, ಯಲ್ಲಾಪುರ,ಶಿರಸಿ, ಸಿದ್ಧಾಪುರ, ಜೋಗ್‌ಫಾಲ್ಸ್‌, ಸಾಗರ, ಆನಂದಪುರ, ಶಿವಮೊಗ್ಗ, ಸಕ್ರೇಬೈಲ್‌, ಮಂಡಗದ್ದೆ, ಎನ್‌.ಆರ್‌.ಪುರ, ಬಾಳೆಹೊನ್ನೂರು ಮೂಲಕವಾಗಿ ಸಾಗಿ ಅಂತಿಮವಾಗಿ ಮುತ್ತೋಡಿಯನ್ನು ತಲುಪಿತು ಎಂದು ತಿಳಿಸಿದರು.

40 ಜನ ಹವ್ಯಾಸಿ ಸೈಕ್ಲಿಸ್ಟ್‌ಗಳಲ್ಲಿ ಅಂತಿಮವಾಗಿ ಗುರಿ ತಲುಪಿದವರು 25 ಮಂದಿ ಮಾತ್ರ. ಇದರಲ್ಲಿ ವಿಜಯಪುರದ ಐದು ಜನ ಇದ್ದೆವು ಎಂಬುದು ಹೆಮ್ಮೆ ಎಂದರು.

ಪ್ರತಿ ದಿನ ಸುಮಾರು 100 ಕಿ.ಮೀ.ನಂತೆ ಕ್ರಮಿಸುವ ಮೂಲಕ ಹೆಮ್ಮಡಗದಿಂದ ಮತ್ತೋಡಿ ವರೆಗೆ ಐದು ದಿನಗಳ ಕಾಲ 450 ಕಿ.ಮೀ ಕ್ರಮಿಸಿದೆವು ಎಂದು ಹೇಳಿದರು.

ಬೆಳಗಾವಿ ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಸಂಗಮೇಶ ಪಡನಾಡು ಮಾತನಾಡಿ, ಸೈಕಲ್‌ ಜಾಥಾ ಅವಿಸ್ಮರಣೀಯವಾಗಿತ್ತು. ನಮ್ಮಲ್ಲಿ ಪರಿಸರ ಪ್ರಜ್ಞೆ ಮೂಡಿತು. ಜೊತೆಗೆ ಆನೆ ಪಥ ಎಂದರೆ ಏನು? ಆನೆ ಪಥಕ್ಕೆ ಎದುರಾಗಿರುವ ಅಡೆತಡೆಗಳೇನು? ರಣಹದ್ದುಗಳ ಸಂತತಿ ನಶಿಸಲು ಕಾರಣವೇನು? ಇದರಿಂದ ಪರಿಸರದ ಮೇಲೆ ಯಾವ ಪರಿಣಾಮ ಉಂಟಾಗಿದೆ ಎಂಬುದರ ಕುರಿತು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT