ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ‘ಎ’ ಮೀಸಲಾತಿ ಮುಂದುವರಿಕೆಗೆ ಗಾಣಿಗರ ಆಗ್ರಹ

Last Updated 21 ಮಾರ್ಚ್ 2023, 15:36 IST
ಅಕ್ಷರ ಗಾತ್ರ

ವಿಜಯಪುರ: ಹಿಂದೂ ಗಾಣಿಗ ಸಮಾಜ ಸೇರಿ 18 ಉಪಜಾತಿಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ 2 ‘ಎ’ ದಿಂದ ಕೈಬಿಟ್ಟು 3 ‘ಬಿ’ಗೆ ಸೇರಿಸಲು ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿ ವಿರೋಧಿಸಿ, ಯಥಾ ಸ್ಥಿತಿ ಮುಂದುವರಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಗಾಣಿಗ ಸಮಾಜದಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಅಖಿಲ ಭಾರತ ಗಾಣಿಗ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಗಾಣಿಗ ಸಮಾಜಕ್ಕೆ ಮೀಸಲಾತಿ‌ ಅಗತ್ಯತೆ ಮನಗಂಡು ಎಲ್.ಜಿ.ಹಾವನೂರ ಮತ್ತು ಚಿನ್ನಪ್ಪರೆಡ್ಡಿ ಆಯೋಗಗಳು ಗಾಣಿಗ ಸಮುದಾಯಕ್ಕೆ ಪ್ರವರ್ಗ 2 ‘ಎ’ ಮೀಸಲಾತಿ ಕಲ್ಪಿಸಬೇಕೆಂದು ಶಿಫಾರಸು ಮಾಡಿ ವರದಿ ಸಲ್ಲಿಸಿದ ಹಿನ್ನೆಲೆ ಸಮಾಜಕ್ಕೆ 2 ‘ಎ’ ಮೀಸಲಾತಿ ಸಿಕ್ಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಗಾಣಿಗ ಎಲ್ಲಾ ಒಳಪಂಗಡಗಳು ಸೇರಿ ಸುಮಾರು 50-60 ಲಕ್ಷ ಜನಸಂಖ್ಯೆ ಇದ್ದು, ಇನ್ನೂ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯಿಂದ ವಂಚಿತವಾಗಿದೆ. ಇಲ್ಲಿಯವರೆಗೂ ಕೇವಲ ಮೂರ್ನಾಲ್ಕು ಜನ ಮಾತ್ರ ಶಾಸಕರಿದ್ದು, ಸಚಿವ ಸ್ಥಾನ ಸಹ ಸಿಕ್ಕಿಲ್ಲ. ಇತ್ತೀಚೆಗೆ ಕೆಲವು ನಾಯಕರಿಗೆ ಅಲ್ಪ ಅವಧಿಗೆ ಮಾತ್ರ ಸಚಿವ ಸ್ಥಾನ ಲಭಿಸಿದೆ. ಸಮಾಜ ರಾಜಕೀಯವಾಗಿಯೂ ಅತ್ಯಂತ ಹಿಂದುಳಿದಿದೆ. ರಾಜ್ಯದಲ್ಲಿ ಹುಡುಕಿದರೆ ಗಾಣಿಗ ಸಮಾಜದ ಬೆರಳೆಣಿಕೆಯಷ್ಟು ಜನ ಮಾತ್ರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದು, ಶೈಕ್ಷಣಿಕವಾಗಿ ಹಿಂದುಳಿದಿದೆ. ಅಲ್ಲದೇ, ಸಾಮಾಜಿಕವಾಗಿಯೂ ಇನ್ನೂ ಗ್ರಾಮೀಣ ಭಾಗದಲ್ಲಿ ಸಮಾಜದವರು ತುಳಿತಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.

ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಸಮಾಜವನ್ನು ಆಧ್ಯಯನ ಮಾಡದೇ ಗಾಣಿಗ ಸಮಾಜ ಸೇರಿ ಇತರೆ 18 ಉಪಜಾತಿಗಳನ್ನು 2 ‘ಎ’ ಪ್ರವರ್ಗದಿಂದ ಕೈಬಿಟ್ಟು 3 ‘ಬಿ’ಗೆ ಸೇರಿಸಲು ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ಖಂಡನೀಯ ಎಂದರು.

ಮುಖ್ಯಮಂತ್ರಿ ಬೊಮ್ಮಾಯಿ ಅವರ ಸರ್ಕಾರದ ಕೊನೆಯ ಸಚಿವ ಸಂಪುಟದಲ್ಲಿ ಹಿಂದುಳಿದ ಆಯೋಗದ ಈ ವರದಿಯನ್ನು ತಿರಸ್ಕರಿಸಬೇಕು. ಒಂದು ವೇಳೆ ವರದಿಯನ್ನು ಪುರಸ್ಕರಿಸಿ ಗಾಣಿಗ ಸಮಾಜದ 2 ‘ಎ’ ಮೀಸಲಾತಿ ಕೈಬಿಟ್ಟರೆ ಸಮಾಜ ಉಗ್ರ ಹೋರಾಟಕ್ಕೆ ಮುಂದಾಗಲಿದೆ. ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೊಲ್ಹಾರದ ಕಲ್ಲಿನಾಥ ಸ್ವಾಮೀಜಿ, ಸಮಾಜದ ಜಿಲ್ಲಾಧ್ಯಕ್ಷ ಬಿ.ಬಿ.ಪಾಸೋಡಿ, ಜಲ್ಲಾ‌ ಗೌರವಾಧ್ಯಕ್ಷ ಬಿ.ಎಂ. ಪಾಟೀಲ್ ಕತ್ನಳ್ಳಿ, ಕಾರ್ಯಾಧ್ಯಕ್ಷ ಅಶೋಕ ತರಡಿ, ಮುಖಂಡರಾದ ಎಸ್.ಜಿ.ಲೋಣಿ, ಶರಣಪ್ಪ ಶ್ಯಾಪೇಟಿ, ಶ್ರೀಕಾಂತ ಶಿರಡೋಣ, ಎಸ್.ಎಸ್.ಅರಕೇರಿ, ಬಾಬು ಸಜ್ಜನ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT