ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಮಹಿಳೆಯರಿಗೆ ಡ್ರೋನ್ ತರಬೇತಿ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ
Published 14 ಮಾರ್ಚ್ 2024, 6:00 IST
Last Updated 14 ಮಾರ್ಚ್ 2024, 6:00 IST
ಅಕ್ಷರ ಗಾತ್ರ

ವಿಜಯಪುರ: ‘ಕೃಷಿ ಚಟುವಟಿಕೆಯಲ್ಲಿ ಡ್ರೋನ್ ಬಳಕೆಗೆ‌ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಆರಂಭಿಕ ಹಂತವಾಗಿ ದೇಶದ 30 ಸಾವಿರ ರೈತ ಮಹಿಳೆಯರಿಗೆ ಕೃಷಿ ಕಾರ್ಯದಲ್ಲಿ ಬಳಕೆಗೆ ಅನುಕೂಲವಾಗುವಂತೆ ಡ್ರೋನ್ ತರಬೇತಿ ನೀಡಲಾಗುವುದು’ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಇಲ್ಲಿನ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಐಸಿಆರ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ರೈತರ ವಸತಿ ನಿಲಯವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಇಸ್ರೇಲ್, ಜರ್ಮನಿಯಂತೆ ತಾಂತ್ರಿಕತೆ ಬಳಸಿಕೊಂಡು ಕೃಷಿ ಸುಧಾರಣೆ ಮಾಡಬೇಕಾಗಿದೆ‌‌. ನ್ಯಾನೊ ಟೆಕ್ನಾಲಜಿ ಕೃಷಿಯಲ್ಲಿ ಬಳಸಿಕೊಳ್ಳಬೇಕಾಗಿದೆ. ಕೃಷಿ ಯಂತ್ರೋಪಕರಣಗಳು ರೈತರಿಗೆ ಸುಲಭವಾಗಿ ಲಭಿಸುವಂತೆ ಮಾಡಲು ಕೃಷಿ ಯಂತ್ರೋಪಕರಣ ಬ್ಯಾಂಕ್ ಸ್ಥಾಪಿಸಲು ಆದ್ಯತೆ ನೀಡಲಾಗಿದೆ. ನ್ಯಾನೊ ಯೂರಿಯಾ ಬಳಕೆಗೆ ನಮ್ಮ ಸರ್ಕಾರ ಮುಂದಾಗಿದೆ’ ಎಂದರು.

‘ಆಹಾರ ಸಂಸ್ಕರಣೆಗೆ, ಮೌಲ್ಯವರ್ಧನೆ, ಆಹಾರ ಉತ್ಪನ್ನಗಳ ರಫ್ತಿಗೆ ಆದ್ಯತೆ‌ ನೀಡುವ ಉದ್ದೇಶದಿಂದ ₹ 33 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ’ ಎಂದರು.

‘ಕೃಷಿ ಮಹಾವಿದ್ಯಾಲಯಕ್ಕೆ ಅಗತ್ಯ ಇರುವ ಸೌಲಭ್ಯಗಳನ್ನು ಒದಗಿಸಿ, ಮಾದರಿ ಕ್ಯಾಂಪಸ್ ಮಾಡಲು ಆದ್ಯತೆ ನೀಡಲಾಗುವುದು. ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗುವುದು’ ಎಂದರು.

ಜಿಲ್ಲೆಗೆ ಎಷ್ಟು ಶೀತಲೀಕರಣ ಘಟಕ ಬೇಕಿದೆ ಎಂದು ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ‘ಕೃಷಿ ಕಾರ್ಮಿಕರ ಸಮಸ್ಯೆ ಇಂದು ಹೆಚ್ಚಾಗಿದೆ. ಹೀಗಾಗಿ ಕೃಷಿ ಕ್ಷೇತ್ರ ಬಳಲಿದೆ. ಈ ನಿಟ್ಟಿನಲ್ಲಿ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಗೆ ಆದ್ಯತೆ ನೀಡಬೇಕಿದೆ’ ಎಂದರು.

ಶಾಸಕ ವಿಠಲ ಕಟಕಧೋಂಡ, ‘ಕೃಷಿ ಪ್ರಧಾನ ಜಿಲ್ಲೆಯಾದ ವಿಜಯಪುರ ದಕ್ಷಿಣದ ಪಂಜಾಬ್ ಆಗಬೇಕಿತ್ತು. ಆದರೆ ಸಾಧ್ಯವಾಗಿಲ್ಲ. ಕೃಷ್ಣಾ ನದಿ‌ ನೀರು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ’ ಎಂದರು.

‘ಎಲ್ಲ ಕಡೆ ಮೂರು ಕಾಲ ಇದ್ದರೆ.‌ ನಮ್ಮಲ್ಲಿ ನಾಲ್ಕು ಕಾಲಗಳಿವೆ. ಬೇಸಿಗೆ, ಮಳೆಗಾಲ, ಚಳಿಗಾಲದ ಜೊತೆ ಬರಗಾಲವೂ ಕಾಯಂ ಇದೆ. ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆಗೆ ಕೃಷಿ ವಿಶ್ವವಿದ್ಯಾಲಯ ಆರಂಭಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ದರ ಕುಸಿತದಿಂದ ತೊಂದರೆಗೆ ಒಳಗಾಗಿದ್ದು ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಮುಂದಾಗಬೇಕು
ರಮೇಶ ಜಿಗಜಿಣಗಿ, ಸಂಸದ

ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಡಾ.ಪಿ.ಎಲ್.ಪಾಟೀಲ, ‘ಕೃಷಿ ತರಬೇತಿಗೆ ಆಗಮಿಸುವ ರೈತರಿಗೆ ಉಳಿದುಕೊಳ್ಳಲು ವಸತಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೀಡಿದ ₹80 ಲಕ್ಷ ಅನುದಾನದಲ್ಲಿ ವಸತಿ ನಿಲಯ ನಿರ್ಮಾಣವಾಗಿದೆ’ ಎಂದರು.

‘ಕೃಷಿ ವಿಜ್ಞಾನ ಕೇಂದ್ರವು ರೈತರ ಪಾಲಿಗೆ ದೇಗುಲವಾಗಿದೆ. ಪ್ರತಿ ಸೋಮವಾರ ರೈತರು ಇಲ್ಲಿಗೆ ಭೇಟಿ ನೀಡಿ, ಜ್ಞಾನಾರ್ಜನೆ ಪಡೆದುಕೊಳ್ಳಬೇಕು’ ಎಂದರು.

ಐಸಿಆರ್ ನಿರ್ದೇಶಕ ಡಾ.ವೆಂಕಟ ಸುಬ್ರಮಣಿಯನ್, ಧಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಜಯಕುಮಾರ, ಶ್ರೀನಿವಾಸ ಕೋಟ್ಯಾನ್‌, ಡಾ.ಎಸ್‌.ಎಸ್‌.ಅಂಗಡಿ, ಕೃಷಿ ಮಹಾವಿದ್ಯಾಲಯದ ಡಾ.ಭೀಮಪ್ಪ ಎ., ಡಾ.ಆರ್‌.ಬಿ.ಬೆಳ್ಲಿ, ಡಾ.ಅಶೋಕ ಎಸ್‌.ಸಜ್ಜನ, ಡಾ.ಎಸ್‌.ಎಂ.ವಸ್ತ್ರದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT