ಶುಕ್ರವಾರ, ಆಗಸ್ಟ್ 12, 2022
23 °C
ಗುಜರಾತಿ ವ್ಯಾಪಾರಿಗಳಿಂದ ವಿಜಯಪುರದ ರೈತರು, ವ್ಯಾಪಾರಸ್ಥರಿಗೆ ವಂಚನೆ

₹ 2.2 ಕೋಟಿ ಮೌಲ್ಯದ ಒಣದ್ರಾಕ್ಷಿ ವಶ; ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯ ರೈತರು ಮತ್ತು ವ್ಯಾಪಾರಸ್ಥರಿಂದ ಖರೀದಿಸಿದ ಒಣ ದ್ರಾಕ್ಷಿಗೆ ಹಣ ನೀಡದೇ ಮೋಸ ಮಾಡಿದ ಗುಜರಾತ್‌ ರಾಜ್ಯದ ಅಹಮದಬಾದ್‌ನ ಎಂಟು ಜನ ವ್ಯಾಪಾರಿಗಳ ಪೈಕಿ ಒಬ್ಬನನ್ನು ಬಂಧಿಸಿ, ₹ 2.2 ಕೋಟಿ ಮೌಲ್ಯದ 117 ಟನ್‌ ಒಣ ದ್ರಾಕ್ಷಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌, ಬಂಧಿತ ಆರೋಪಿ ಕೃನಾಲ್‌ ಕುಮಾರ್‌ ಅಲಿಯಾಸ್‌ ಸಚಿನ್‌ ಪಟೇಲ್‌ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಪೊಲೀಸ್‌ ವಶಕ್ಕೆ ಪಡೆಯಲಾಗಿದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದ ಆರೋಪಿಗಳಾದ ಕಮಲ್‌ಕುಮಾರ್‌, ಸುನೀಲ್‌, ಜಯೇಶ್‌, ಭರತ್‌ ಜೇಟಾಬಾಯಿ ಪಟೇಲ್‌, ನೀಲ್‌ ಪ‍ಟೇಲ್‌, ರೋಣಕ್‌ಕುಮಾರ್‌ ಪಟೇಲ್‌, ಪಿಂಕೇಶ್‌ ಪಟೇಲ್‌ ಅವರ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಆರೋಪಿಗಳು ವಿಜಯಪುರದ ಆಲಿಯಾಬಾದ್‌ ಕೈಗಾರಿಕಾ ಪ್ರದೇಶದಲ್ಲಿ ಶ್ರೀ ಮಹಾಲಕ್ಷ್ಮಿ ಟ್ರೇಡರ್ಸ್‌ ಎಂಬ ಹೆಸರಿನ ಗೋಡೌನ್‌ ಬಾಡಿಗೆ ಹಿಡಿದುಕೊಂಡು ಒಣ ದ್ರಾಕ್ಷಿ ಬಾಕ್ಸ್‌ಗಳನ್ನು ಖರೀದಿ ಮಾಡಿ, ವ್ಯಾಪಾರಸ್ಥರಿಗೆ ಆರ್‌ಟಿಜಿಎಸ್‌ ಮುಖಾಂತರ ಅಲ್ಪಸ್ವಲ್ಪು ಹಣವನ್ನು ಅವರವರ ಖಾತೆಗೆ  ಜಮಾ ಮಾಡುತ್ತಾ ಬಂದಿದ್ದಾರೆ ಎಂದರು.

ಆರೋಪಿಗಳು ವಿಜಯಪುರದ ವ್ಯಾಪಾರಿ ಅಬ್ದುಲ್‌ ಖಾದರ್‌ ತಹಶೀಲ್ದಾರ್‌ ಅವರಿಗೆ ಸಂಬಂಧಿಸಿದ ₹ 18,19,451 ಮೊತ್ತದ 9 ಟನ್‌ 440 ಕೆ.ಜಿ.ಒಣ ದ್ರಾಕ್ಷಿ ತುಂಬಿದ 636 ಬಾಕ್ಸ್‌ಗಳನ್ನು ಖರೀದಿಸಿದ್ದರು. ಆರ್‌ಟಿಜಿಎಸ್‌ ಮೂಲಕ ಹಣ ಸಂದಾಯ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಒಂದು ತಿಂಗಳಾದರೂ ಹಣ ಸಂದಾಯವಾಗದೇ ಇದ್ದಾಗ ವಿಚಾರಿಸಲು ಗೋಡೌನ್‌ಗೆ ಹೋಗಿದ್ದಾಗ ಆರೋಪಿಗಳು ಅಲ್ಲಿ ಇರದೇ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ ಮೇಲೆ ಮೋಸದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಿದರು.

ಆರೋಪಿಗಳು ಇದೇ ರೀತಿ ವಿಜಯಪುರದ ವ್ಯಾಪಾರಿ ಸಂತೋಷಕುಮಾರ್‌ ಗುಂಜಟಗಿ ಅವರಿಗೆ ಸೇರಿದ ₹ 20,69,049 ಮೌಲ್ಯದ 10 ಟನ್‌ 423 ಕೆ.ಜಿ. ಒಣ ದ್ರಾಕ್ಷಿ ತುಂಬಿದ 695 ಬಾಕ್ಸ್‌ಗಳನ್ನು ಖರೀದಿಸಿ ಹಣ ನೀಡದೇ ವಂಚಿಸಿದ್ದಾರೆ ಎಂದರು.

ವಿಜಯಪುರದ ಇನ್ನೊಬ್ಬ ವ್ಯಾಪಾರಿ ಜಾಕೀರ್‌ ಬಾಗವಾನ ಅವರಿಗೆ ಸೇರಿದ ₹ 21,59,598 ಮೌಲ್ಯದ 11 ಟನ್‌ 54 ಕೆ.ಜಿ ಒಣ ದ್ರಾಕ್ಷಿ ತುಂಬಿದ 746 ಬಾಕ್ಸ್‌ಗಳನ್ನು ತೆಗೆದುಕೊಂಡು ಹಣ ನೀಡದೇ ಮೋಸ ಮಾಡಿದ್ದರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಒಬ್ಬ ಆರೋಪಿಯನ್ನು ಪತ್ತೆ ಹಚ್ಚಿ, ಗುಜರಾತ್‌ನ ಅಹದಾಬಾದ್‌ ಕೋಲ್ಡ್‌ ಸ್ಟೋರೇಜ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಒಣದ್ರಾಕ್ಷಿಯನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಎಲ್ಲ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಗೆ ಬಹುಮಾನ ನೀಡಿ ಗೌರವಿಸಿದರು.

‌ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ ಅರಸಿದ್ಧಿ, ವಿಜಯಪುರ ಡಿವೈಎಸ್‌ಪಿ ಲಕ್ಷ್ಮಿ ನಾರಾಯಣ, ಗೋಳಗುಮ್ಮಟ ಸಿಪಿಐ ರಮೇಶ ಅವಜಿ ಮತ್ತು ಸಿಬ್ಬಂದಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು