ಮಂಗಳವಾರ, ಸೆಪ್ಟೆಂಬರ್ 21, 2021
26 °C
ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕ ಮಂಡಳಿಗೆ ನ.8ರಂದು ಚುನಾವಣೆ

ಸಿದ್ಧೇಶ್ವರ ಸಹಕಾರಿ ಬ್ಯಾಂಕ್‌ ಚುನಾವಣೆ: ಅವಿರೋಧ ಆಯ್ಕೆಗೆ ಹೆಚ್ಚಿದ ಒಲವು

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

ವಿಜಯಪುರ: ‘ವಚನ ಪಿತಾಮಹಾ’ ಫ.ಗು.ಹಳಕಟ್ಟಿ ಅವರಿಂದ ಆರಂಭವಾದ ನಾಡಿನ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಗೆ ನವೆಂಬರ್‌ 8ರಂದು ಚುನಾವಣೆ ನಿಗದಿಯಾಗಿದ್ದು, ಚಟುವಟಿಕೆಗಳು ಗರಿಗೆದರಿವೆ.

ಚುನಾವಣಾಧಿಕಾರಿಯಾಗಿ ಸಹಕಾರಿ ಉಪ ನಿಬಂಧಕ ಪಿ.ಬಿ.ಕಾಳಗಿ ನೇಮಕವಾಗಿದ್ದು, ಅವರ ನೇತೃತ್ವದಲ್ಲಿ ಚುನಾವಣೆಗೆ ಅಗತ್ಯ ಸಿದ್ಧತೆ ಒಂದೆಡೆ ನಡೆದಿರುವ ಬೆನ್ನಲ್ಲೇ, ಈ ಬಾರಿ ಚುನಾವಣೆ ಬದಲು ಹಾಲಿ ನಿರ್ದೇಶಕನ್ನೇ ಅವಿರೋಧವಾಗಿ ಆಯ್ಕೆ ಮಾಡಲು ವ್ಯಾಪಾರಸ್ಥರು, ಗಣ್ಯರಿಂದ ಒಲವು ವ್ಯಕ್ತವಾಗಿದೆ.

ದಿನದಿಂದ ದಿನಕ್ಕೆ ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವುದರಿಂದ ಈ ಸಂದರ್ಭದಲ್ಲಿ ಬ್ಯಾಂಕಿನ ವಯೋವೃದ್ಧ ಮತ್ತು ಮಹಿಳಾ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುವ ಸಾಧ್ಯತೆ ಇರುವುದರಿಂದ  ಚುನಾವಣೆಗಿಂತ ಹಾಲಿ ನಿರ್ದೇಶಕರನ್ನೇ ಅವಿರೋಧ ಆಯ್ಕೆ ಮಾಡುವುದು ಒಳಿತು ಎಂಬ ಅಭಿಪ್ರಾಯ ಬಲವಾಗಿದೆ.

ಕೋವಿಡ್‌ ಆರ್ಥಿಕ ಸಂಕಷ್ಟದಲ್ಲಿ ಚುನಾವಣೆ ನಡೆದರೆ ಬ್ಯಾಂಕಿಗೆ ಸುಮಾರು ₹40 ಲಕ್ಷ ಹೊರೆಯಾಗಲಿದ್ದು, ಇದನ್ನು ತಪ್ಪಿಸಲು ಅವಿರೋಧ ಆಯ್ಕೆಯೇ ಸೂಕ್ತ ಎಂಬ ಅಭಿಪ್ರಾಯ ದಟ್ಟವಾಗಿದೆ.

19 ನಿರ್ದೇಶಕ ಸ್ಥಾನ

ಬ್ಯಾಂಕಿನ ನಿರ್ದೇಶಕ ಮಂಡಳಿಯ ಒಟ್ಟು 19 ಸ್ಥಾನಗಳ ಪೈಕಿ ಸಾಮಾನ್ಯ ವರ್ಗದ 13, ಮಹಿಳಾ–2, ಪರಿಶಿಷ್ಟ ಜಾತಿ–1, ಪರಿಶಿಷ್ಟ ಪಂಗಡ –1, ಪ್ರವರ್ಗ ಎ–1, ಪ್ರವರ್ಗ ಬಿ–1 ಸ್ಥಾನಕ್ಕೆ ಚುನಾವಣೆ ನಡೆಯಬೇಕಾಗಿದೆ ಎಂದು ವಿಜಯಪುರ ಜಿಲ್ಲಾ ಸಹಕಾರಿ ಬ್ಯಾಂಕುಗಳ ಉಪನಿರ್ಬಂಧಕ ಪಿ.ಬಿ.ಕಾಳಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಒಟ್ಟು 39 ಸಾವಿರ ‘ಅ’ ವರ್ಗದ ಸದಸ್ಯರಿದ್ದಾರೆ. ತಾತ್ಕಾಲಿಕ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಈ ಪ್ರಕಾರ 5794 ಅರ್ಹ ಮತದಾರರಿದ್ದಾರೆ. ಬ್ಯಾಂಕಿನ ಕಟಬಾಕಿದಾರರು ತಮ್ಮ ಸಾಲವನ್ನು ಮರುಪಾವತಿಸಿದರೆ ಮತದಾರರ ಪಟ್ಟಿ ಸೇರ್ಪಡೆಗೆ ಇನ್ನೂ ಅವಕಾಶವಿದೆ ಎಂದು ಹೇಳಿದರು.

ಒಂದೆರಡು ದಿನದಲ್ಲಿ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಕೊರೊನಾ ಇರುವುದರಿಂದ ಚುನಾವಣೆಗೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಹೊಸಬರ ಆಯ್ಕೆಗೆ ಲೆಕ್ಕಾಚಾರ

ಈ ಹಿಂದಿನ ಅವಧಿಯಲ್ಲಿ ಬ್ಯಾಂಕಿನ ನಿರ್ದೇಶಕರ ಮಂಡಳಿಯ 19 ಸ್ಥಾನಗಳ ಪೈಕಿ 14 ಸಾಮಾನ್ಯ ನಿರ್ದೇಶಕ ಸ್ಥಾನವಿತ್ತು. ಆದರೆ, ಇದೀಗ ಒಂದು ಸ್ಥಾನ ಕಡಿತವಾಗಿದೆ. ಜೊತೆಗೆ ಈ ಮೊದಲು ಎರಡು ಸ್ಥಾನಗಳಿದ್ದ ಪ್ರವರ್ಗ ‘ಎ’ ನಲ್ಲೂ ಒಂದು ಸ್ಥಾನ ಕಡಿತವಾಗಿದೆ.

ಇದೀಗ ಹೊಸದಾಗಿ ಎಸ್‌ಟಿಯಿಂದ ಒಬ್ಬರು ಮತ್ತು ಪ್ರವರ್ಗ ‘ಬಿ‘ದಿಂದ ಒಬ್ಬ ಹೊಸ ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿದೆ. ಹೀಗಾಗಿ ಸಾಮಾನ್ಯ ವರ್ಗ ಮತ್ತು ಪ್ರವರ್ಗ ‘ಎ‘ ನಲ್ಲಿ ಸದ್ಯ ಇರುವ ನಿರ್ದೇಶಕರಲ್ಲಿ ಯಾರನ್ನು ಕೈಬಿಡಬೇಕು ಹಾಗೂ ಪ್ರವರ್ಗ ‘ಬಿ‘ ಮತ್ತು ಎಸ್‌ಟಿ ಸ್ಥಾನಕ್ಕೆ ಹೊಸದಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ತುರಿಸಿನ ಲೆಕ್ಕಾಚಾರ ನಡೆದಿದೆ.

ಸದ್ಯ ಇರುವ ನಿರ್ದೇಶಕರನ್ನು ಒಳಗೊಂಡ ಪೆನಾಲ್‌ನಲ್ಲಿ ಹೊಂದಾಣಿಕೆ ಇರುವುದರಿಂದ ಇದನ್ನೇ ಉಳಿಸಿಕೊಂಡು ಹೋಗಬೇಕು ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಅದರಲ್ಲೂ ಹಣಕಾಸು ಸಂಸ್ಥೆಯಲ್ಲಿ ರಾಜಕೀಯಕ್ಕಿಂತ ಅವಿರೋಧ ಆಯ್ಕೆಯಾದರೆ ಸಂಸ್ಥೆ ಉಳಿದು, ಹೆಮ್ಮರವಾಗಿ ಬೆಳೆಯಲಿದೆ ಎಂಬುದು ಬಹುತೇಕ ಮತದಾರರ ಅಭಿಪ್ರಾಯವಾಗಿದೆ.

ಬ್ಯಾಂಕಿಗೆ ಆರ್ಥಿಕ ಶಕ್ತಿ ನೀಡಿದ ಶ್ರೀಹರ್ಷ 

ವಿಜಯಪುರ: ಶ್ರೀಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಹಾಲಿ ಅಧ್ಯಕ್ಷ ಶ್ರೀಹರ್ಷ ಪಾಟೀಲ ಆಳಿತಾವಧಿಯಲ್ಲಿ ಬ್ಯಾಂಕ್‌ ಅಗಾದ ಬೆಳವಣಿಗೆ ಸಾಧಿಸಿದೆ. ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಿಗೆ ಬಂದು ನಿಂತಿದೆ.

ಏಕ್ಸಿಸ್‌ ಬ್ಯಾಂಕಿನೊಂದಿಗೆ ಟೈಅಪ್‌ ಮಾಡಿಕೊಂಡು ಹೊಸದಾಗಿ ಎಟಿಎಂ ಸೌಲಭ್ಯ ಆರಂಭಿಸುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿದೆ. ಅಲ್ಲದೇ, ₹1 ಕೋಟಿ ಮೊತ್ತದ 22 ಸಾವಿರ ಚದರ ಅಡಿ ಬಿಡಿಎ ಜಾಗವನ್ನು ಖರೀದಿ ಮಾಡಿದೆ. 

ಕೋವಿಡ್‌ ಸಂಕಷ್ಟದಲ್ಲೂ ಬ್ಯಾಂಕಿನ ಸಿಬ್ಬಂದಿಗೆ ಶೇ 10.25 ತುಟ್ಟಿಭತ್ಯೆ, ರಜೆ ನಗದಿಕರಣ ಸೌಲಭ್ಯ ನೀಡಲಾಗಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. 

ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕನ್ನು ಮಲ್ಟಿ ಸ್ಟೇಟ್‌ ಶೆಡ್ಯೂಲ್‌ ಬ್ಯಾಂಕನ್ನಾಗಿ ರೂಪಿಸಬೇಕು ಎಂಬ ಮಹತ್ತರ ಗುರಿ ಇದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಎಲ್ಲರ ಸಹಕಾರ ಅಗತ್ಯ ಶ್ರೀಹರ್ಷ ಪಾಟೀಲ, ಅಧ್ಯಕ್ಷ, ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು