ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ, ಕಾರ್ಮಿಕರಿಂದ ಪ್ರತಿಭಟನೆ, ಹೆದ್ದಾರಿ ತಡೆ; ಬಂದ್‌ಗೆ ನೀರಸ ಪ್ರತಿಕ್ರಿಯೆ

ವಿಜಯಪುರ ಜಿಲ್ಲೆಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ
Last Updated 28 ಸೆಪ್ಟೆಂಬರ್ 2020, 12:19 IST
ಅಕ್ಷರ ಗಾತ್ರ

ವಿಜಯಪುರ: ಭೂಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ರೈತ, ಕಾರ್ಮಿಕ ಸಂಘಟನೆಗಳಿಂದ ಸೋಮವಾರ ಕರೆ ನೀಡಲಾಗಿದ್ದ ಬಂದ್‌ಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇವಲ ಪ್ರತಿಭಟನೆ, ಹೆದ್ದಾರಿ ತಡೆ, ಮನವಿ ಸಲ್ಲಿಕೆಗೆ ಸೀಮಿತವಾಯಿತು.

ಬಸ್, ಆಟೊ, ಟಂಟಂ ಸೇರಿದಂತೆ ಬಹುತೇಕ ವಾಹನಗಳ ಸಂಚಾರ ಇತ್ತಾದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಬೆಳಿಗ್ಗೆ 11ರ ವರೆಗೆ ಅಂಗಡಿ, ಮುಂಗಟ್ಟುಗಳು ಬೆರಳೆಣಿಕೆಯಷ್ಟು ಮಾತ್ರ ಬಾಗಿಲು ತೆರೆದು, ವ್ಯಾಪಾರ, ವಹಿವಾಟು ನಡೆಸಿದವು. ಆದರೆ, ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ಕ್ಷೀಣವಾಗಿತ್ತು. ಮಧ್ಯಾಹ್ನದ ಬಳಿಕ ವ್ಯಾಪಾರಸ್ಥರು ಎಂದಿನಂತೆ ಬಹುತೇಕ ಅಂಗಡಿ, ಮುಂಗಟ್ಟುಗಳ ಬಾಗಿಲು ತೆರೆದು ವ್ಯಾಪಾರ, ವಹಿವಾಟು ನಡೆಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿದ್ದರು.

ಪ್ರತಿಕೃತಿ ದಹನ:

ಬಂದ್ ಅಂಗವಾಗಿ ವಿಜಯಪುರ ನಗರದ ಸಿದ್ದೇಶ್ವರ ಗುಡಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ರೈತರು, ಕಾರ್ಮಿಕರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿಕೃತಿ ದಹಿಸಿ, ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ರೈತ, ಕೃಷಿ,ಕಾರ್ಮಿಕರ ಸಂಘಟನೆ ರಾಜ್ಯ ಉಪಾಧ್ಯಕ್ಷ ಬಿ.ಭಗವಾನ್ ರೆಡ್ಡಿ ಮಾತನಾಡಿ, ಕೋವಿಡ್‌ ಕೃಷಿ ರಂಗದ ಸಂಕಷ್ಟವನ್ನು ಉಲ್ಬಣಗೊಳಿಸಿದೆ. ಹಸಿವು, ನಿರುದ್ಯೋಗ, ಆರ್ಥಿಕ ದಿವಾಳಿ ತಾಂಡವಾಡುತ್ತಿದೆ. ಇಂತಹ ಸನ್ನಿವೇಶದ ದುರ್ಲಾಭವನ್ನು ಪಡೆದು ಕೇಂದ್ರ, ರಾಜ್ಯ ಸರ್ಕಾರಗಳು ರೈತ ವಿರೋಧಿ, ಕಾರ್ಪೊರೇಟ್ ಕಂಪನಿಗಳ ಪರವಾದ ಸುಗ್ರೀವಾಜ್ಞೆಗಳಿಗೆ ಅಂಗೀಕಾರ ಪಡೆಯಲು ಹವಣಿಸುತ್ತಿರುವುದು ಖಂಡನೀಯ ಎಂದರು.

ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಅಣ್ಣಾರಾಯ ಈಳಗೇರ, ಬೀಜೋದ್ದಿಮೆಯನ್ನು ಸಂರ್ಪೂರ್ಣವಾಗಿ ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸುವ ಉದ್ದೇಶದಿಂದ ಬೀಜ ಕಾಯ್ದೆ-2019 ಜಾರಿಗೆ ತಂದಿದೆ ಎಂದು ದೂರಿದರು.

ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶಕ್ತಿಕುಮಾರ ಉಕುಮನಾಳ, ಭೂ ಸುಧಾರಣಾ ಕಾಯ್ದೆಗೆ ತಿದ್ದುಪ‍ಡಿ ಮಾಡಿರುವುದನ್ನು ಆದಷ್ಟು ಬೇಗ ಹಿಂಪಡೆದು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ರಾಜ್ಯ ಸರ್ಕಾರ ಭೂ ಮಾಫಿಯಾ ಮತ್ತುಬಂಡವಾಳಶಾಹಿಗಳಿಗೆ ಅನುಕೂಲ ಮಾಡಿದೆ. ನಿಜವಾದ ಕೃಷಿಕರಿಗೆ ಈ ಕಾಯ್ದೆ ಮಾರಕವಾಗಿದೆ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮುಲ್ಲಾ ಮಾತನಾಡಿ,ಉಳುವವನೇ ಭೂಮಿಯ ಒಡೆಯ ಎಂಬ ನೀತಿಯನ್ನು ದೇವರಾಜ ಅರಸು ಸರ್ಕಾರ ಜಾರಿಗೆ ತಂದಿತ್ತು. ಆದರೆ, ಈಗ ದುಡ್ಡಿರುವವನೇ ಭೂಮಿ ಒಡೆಯ ಎಂಬುದು ಬಿಜೆಪಿ ರಾಜ್ಯ ಸರ್ಕಾರದ ನೀತಿಯಾಗಿದೆ ಎಂದು ಆರೋಪಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಸಿ.ಎ ಗಂಟೆಪ್ಪಗೋಳ, ಸುಮಿತ್ತಾ ಹೊಸಮನಿ, ಫಾದರ್ ಟಿಯೋಲ್, ಸಿದ್ದಲಿಂಗ ಬಾಗೇವಾಡಿ,ಬಾಳು ಜೇವೂರ, ಅಪ್ಪಾಸಾಬ ಯರನಾಳ, ಪ್ರಕಾಶ್ ಹಿಟ್ನಳ್ಳಿ, ಸದಾನಂದ ಮೋದಿ, ಪ್ರಭುಗೌಡ ಪಾಟೀಲ, ಶ್ರೀನಾಥ ಪೂಜಾರ, ಅಕ್ರಮ್ ಮಶ್ಯಾಳಕರ, ರಿಜ್ವಾನ್ ಮುಲ್ಲಾ ಸುನಿಲ ಸಿದ್ರಾಮಶೆಟ್ಟಿ, ಭರತಕುಮಾರ, ಮಲ್ಲಿಕಾರ್ಜುನ ಎಚ್‌. ಟಿ, ಮಾದೇವಿ ದರ್ಮಗೊಂಡ, ಕಾಸಿಬಾಯಿ ಜನಗೊಂಡ, ಸುರೇಖಾ ರಜಪೂತ, ಲಕ್ಷ್ಮಣ ಹಂದ್ರಾಳ, ಸದಾಶಿವ ಬರಟಗಿ, ಭಾರತಿ ದೇವಕತೆ, ಜಯಶ್ರೀ ಸುಧಾಕರ,ರಾಹುಲ ಕುಬಕಡ್ಡಿ, ಚಂದ್ರಗೌಡ ಪಾಟೀಲ,ಹಮೀದ್ ಮುಶ್ರೀಫ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅಖಿಲ ಭಾರತ ರೈತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ನಮ್ಮ ಚಾಲಕರ ಟ್ರೇಡ್ ಯೂನಿಯನ್, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್, ವಿಜಯಪುರ ಮರ್ಚೆಂಟ್ಸ್ ಅಸೋಸಿಯೇಷನ್, ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್‌ ಆರ್ಗನೈಸೇಶನ್,ಸಿಐಟಿಯು, ಹಮಾಲರ ಸಂಘ, ಜನವಾದಿ ಮಹಿಳಾ ಸಂಘಟನೆ, ಆಶಾ ಸಂಘಟನೆ, ಹಾಸ್ಟೇಲ್ ಕಾರ್ಯಕರ್ತೆಯರ ಸಂಘಟನೆ, ನಿವೇಶನ ರಹಿತರ ಹೋರಾಟ ಸಮಿತಿ ಹಾಗೂಕಾಂಗ್ರೆಸ್ ಮತ್ತು ಜೆಡಿಎಸ್ ಬಂದ್‌ಗೆ ಬೆಂಬಲ ನೀಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT