ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ‘ಒನ್‌ ನೇಷನ್‌ ಒನ್‌ ಕಾರ್ಡ್‌’ ಯೋಜನೆ ಹೆಸರಲ್ಲಿ ಮೋಸ; ಇಬ್ಬರ ಬಂಧನ

Published 9 ಆಗಸ್ಟ್ 2023, 13:56 IST
Last Updated 9 ಆಗಸ್ಟ್ 2023, 13:56 IST
ಅಕ್ಷರ ಗಾತ್ರ

ವಿಜಯಪುರ: ಕೇಂದ್ರ ಸರ್ಕಾರದ ಪಡಿತರ ಯೋಜನೆ ‘ಒನ್‌ ನೇಷನ್‌ ಒನ್‌ ಕಾರ್ಡ್‌’ ಯೋಜನೆಯಡಿ ಗುತ್ತಿಗೆ ಆಧಾರಿತ ನೌಕರಿಗೆ ನೇಮಕ ಮಾಡಿಕೊಳ್ಳುವುದಾಗಿ ನಂಬಿಸಿ ಆರು ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳಿಂದ ಆನ್‌ಲೈನ್‌ ಮೂಲಕ ₹ 95 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹಿಸಿ, ಮೋಸ ಮಾಡಿದ ಆರೋಪದ ಮೇರೆಗೆ ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದ ನಿವಾಸಿಗಳಾದ ಎಸ್‌.ಸುಧೀರ್‌ ಬಾಬು ಅಲಿಯಾಸ್‌ ಸುಧೀರ್‌ ರೆಡ್ಡಿ ಮತ್ತು ಶಶಾಂಕ್‌ ಎಸ್‌.ಎನ್‌. ಎಂಬುವವರನ್ನು ವಿಜಯಪುರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

‘ಒನ್‌ ನೇಷನ್‌ ಒನ್‌ ಕಾರ್ಡ್‌’ ಯೋಜನೆಯನ್ನು ಕರ್ನಾಟಕ ರಾಜ್ಯಕ್ಕೆ ಅನ್ವಯಿಸುವಂತೆ ಗುತ್ತಿಗೆ ಪಡೆದಿದ್ದು, ಈ ಯೋಜನೆಯಡಿ ಯುವಕ, ಯುವತಿಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಆರೋಪಿಗಳು ಉದ್ಯೋಗಾಕಾಂಕ್ಷಿಗಳನ್ನು ನಂಬಿಸಿ, ಹಣ ವಸೂಲಿ ಮಾಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಒನ್‌ ನೇಷನ್‌ ಒನ್‌ ಕಾರ್ಡ್‌’ ಯೋಜನೆಗೆ ಸಂಬಂಧಿಸಿದಂತೆ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಪಡಿತರದಾರರ ಹೆಸರು ನೋಂದಣಿ ಮಾಡುವುದು ಮತ್ತು ನೋಂದಣಿ ಮಾಡಿದವರಿಗೆ ಕಾರ್ಡ್‌ ಮುದ್ರಿಸಿ ಕೊಡುವ ಕೆಲಸ ಇರುತ್ತದೆ. ಈ ಯೋಜನೆ ಅನುಷ್ಠಾನಕ್ಕೆ ಬೇಕಾದ ಕಂಪ್ಯೂಟರ್‌, ಬಯೋಮೆಟ್ರಿಕ್‌ ಹಾಗೂ ಪ್ರಿಂಟರ್‌ಗಳನ್ನು ನಾವೇ ಪೂರೈಸುತ್ತೇವೆ ಎಂದು ಉದ್ಯೋಗಾಕಾಂಕ್ಷಿಗಳನ್ನು ನಂಬಿಸಿದ್ದರು ಎಂದು ವಿವರಿಸಿದರು.

ಯೋಜನೆ ಅನುಷ್ಠಾನ ಸಂಬಂಧ ಪ್ರತಿ ತಾಲ್ಲೂಕಿಗೆ ಒಬ್ಬ ಸಂಯೋಜಕರು ಬೇಕಾಗುತ್ತದೆ. ಅವರು ಭದ್ರತಾ ಠೇವಣಿ ರೂಪದಲ್ಲಿ ₹ 10 ಸಾವಿರ ನೀಡಬೇಕು ಎಂದು ಹಣ ವಸೂಲಿ ಮಾಡಿದ್ದಾರೆ. ಜೊತೆಗೆ ಕಾರ್ಡ್‌ ನೋಂದಣಿ ಮಾಡಲು 25 ಹಾಗೂ ಕಾರ್ಡ್‌ ಪ್ರಿಂಟ್‌ ಮಾಡಲು ಏಳು ಸೇರಿದಂತೆ ಒಟ್ಟು 32 ಜನರು ಬೇಕಾಗುತ್ತದೆ ಎಂದು ನಂಬಿಸಿ ಅವರಿಂದ ತಲಾ ₹ 1299 ವಸೂಲಿ ಮಾಡಿದ್ದಾರೆ ಎಂದು ತಿಳಿಸಿದರು.

ಉದ್ಯೋಗಾಕಾಂಕ್ಷಿಗಳಿಂದ ಆರೋಪಿಗಳು ಬೇರೆ ಬೇರೆ ವ್ಯಕ್ತಿಗಳ ಬ್ಯಾಂಕ್‌ ಖಾತೆಗೆ ಫೋನ್‌ ಪೇ, ಗೂಗಲ್‌ ಪೇ ಹಾಗೂ ಆರ್‌ಟಿಜಿಎಸ್‌, ಎನ್‌ಇಎಫ್‌ಟಿಗಳ ಮೂಲಕ ಒಟ್ಟು ₹ 95,75,548 ಅನ್ನು ಆನ್‌ಲೈನ್‌ ಮೂಲಕ ಹಾಕಿಸಿಕೊಂಡು ಮೋಸ ಮಾಡಿದ್ದಾರೆ ಎಂದರು. 

ವಿಜಯಪುರ ಜಿಲ್ಲೆ ತಿಕೋಟಾ ತಾಲ್ಲೂಕಿನ ತೊರವಿ ಗ್ರಾಮದ ಶಶಿಕಲಾ ತಳಸದಾರ ಅವರು ನಡೆಸುತ್ತಿರುವ ‘ಸ್ಪೂರ್ತಿ’ ವುಮೆನ್ಸ್‌ ರೂರಲ್‌ ಡೆವಲಪ್‌ಮೆಂಟ್‌ ಸರ್ವೀಸ್‌ ಅಸೋಸಿಯೇನ್‌ ಸಂಸ್ಥೆ (ಎನ್‌ಜಿಒ) ಮೂಲಕ ಯುವಕ, ಯುವತಿಯರನ್ನು ಸಂಪರ್ಕಿಸಿ ಕೆಲಸ ಕೊಡಿಸುವುದಾಗಿ ಮೋಸ ಎಸಗಲಾಗಿದ್ದು, ದೂರನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT