ಶುಕ್ರವಾರ, ಮಾರ್ಚ್ 31, 2023
31 °C
ನೀರಿನ ಕೊರತೆ ನೀಗಿಸಿದ ಗ್ರಾಮ ಪಂಚಾಯ್ತಿ ಕಾರ್ಯಕ್ಕೆ ಮೆಚ್ಚುಗೆ

ವಿಜಯಪುರ: ಗೊಳಸಂಗಿ ಪಾಳು ಬಾವಿಗಳಿಗೆ ಕಾಯಕಲ್ಪ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಪಾಳುಬಿದ್ದಿದ್ದ ಶತಮಾನದಷ್ಟು ಹಳೆಯ ಬಾವಿಗಳಿಗೆ ಕಾರ್ಯಕಲ್ಪ ನೀಡುವ ಮೂಲಕ ಗೊಳಸಂಗಿ ಗ್ರಾಮ ಪಂಚಾಯ್ತಿ ಜಿಲ್ಲೆಗೆ ಮಾದರಿಯಾಗಿದೆ. 

ಸುಮಾರು ಮೂರು ಸಾವಿರ ಮನೆಗಳನ್ನು ಒಳಗೊಂಡಿರುವ ಗೊಳಸಂಗಿ ಗ್ರಾಮಕ್ಕೆ ಮೊದಲಿನಿಂದಲೂ ಕುಡಿಯುವ ನೀರಿನ ಅಭಾವ ಹೇಳತೀರದು. ಇದನ್ನು ಅರಿತ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಹಾವರಗಿ ಅವರ ನೇತೃತ್ವದಲ್ಲಿ ಅಧ್ಯಕ್ಷೆ ಸುನೀತಾ ಶೇಖರ ಪವಾರ್‌, ಉಪಾಧ್ಯಕ್ಷ ರಾಜು ಹತ್ತರಕಿಹಾಳ ಮತ್ತು ಇನ್ನುಳಿದ ಸದಸ್ಯರು ಬಾವಿಗಳ ಪುನರುಜ್ಜೀವಗೊಳಿಸಲು ವಿಶೇಷ ಆದ್ಯತೆ ನೀಡಿದ ಪರಿಣಾಮ ಇಂದು ಬಾವಿಗಳು ನೀರು ತುಂಬಿಕೊಂಡು ನಳನಳಿಸುತ್ತಿವೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಬಸಪ್ಪ ಹಾವರಗಿ, ಗೊಳಸಂಗಿ ಗ್ರಾಮದಲ್ಲಿರುವ ಶತಮಾನದಷ್ಟು ಹಳೆಯ ಐದು ಬಾವಿಗಳು ತ್ಯಾಜ್ಯದಿಂದ ತುಂಬಿಕೊಂಡು ಪಾಳು ಬಿದ್ದಿದ್ದವು. ಇವುಗಳಿಗೆ ಕಾಯಕಲ್ಪ ನೀಡಬೇಕು ಎಂದು ಪಂಚಾಯ್ತಿ ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರು ತೀರ್ಮಾನಿಸಿದರು. 15ನೇ ಹಣಕಾಸು ಯೋಜನೆಯಡಿ ಎಲ್ಲ ಬಾವಿಗಳನ್ನು ಪುನರುಜ್ಜೀವಗೊಳಿಸಲಾಗಿದೆ ಎಂದರು.

ಗ್ರಾಮದ ಬನಶಂಕರಿ ದೇವಸ್ಥಾನದ ಬಳಿ ಇರುವ ಸುಮಾರು 200 ವರ್ಷದಷ್ಟು ಹಳೆಯ ಬಾವಿ, ಉಪಾಧ್ಯಕ್ಷರ ಮನೆ ಸಮೀಪ ಇರುವ ಬಾವಿ, ಬಸ್‌ ನಿಲ್ದಾಣದ ಬಳಿ ಇರುವ ಬಾವಿ, ಪಂಚಾಯ್ತಿ ಪಕ್ಕದಲ್ಲಿರುವ ಬಾವಿಯನ್ನು ಸ್ವಚ್ಛಗೊಳಿಸಿ, ದುರಸ್ತಿಗೊಳಿಸಲಾಗಿದೆ. ಯಾರೂ ಪ್ರವೇಶಿಸದಂತೆ ಹಾಗೂ ತ್ಯಾಜ್ಯವನ್ನು ಎಸೆಯದಂತೆ ಸುತ್ತಲೂ ಗ್ರಿಲ್‌, ಜಾಲರಿ ಅಳವಡಿಸಲಾಗಿದೆ ಎಂದರು.

ನರೇಗಾ ಯಶಸ್ವಿ ಅನುಷ್ಠಾನ:

ನರೇಗಾ ಯೋಜನೆಯಡಿ ಗ್ರಾಮದ ಹಳ್ಳದ ಹೂಳೆತ್ತಲಾಗಿದೆ. ಚೆಕ್‌ ಡ್ಯಾಂ ನಿರ್ಮಿಸಲಾಗದೆ. ಇಂಗುಗುಂಡಿ, ರೈತರ ಜಮೀನಿನಲ್ಲಿ ಕೃಷಿ ಹೊಂಡ, ಬದು ನಿರ್ಮಾಣ, ದನದ ಶೆಡ್‌ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಪಿಡಿಓ ಮಲ್ಲಿಕಾರ್ಜುನ ಹಾವರಗಿ ತಿಳಿಸಿದರು.

ಬಚ್ಚಲು ಗುಂಡಿ:

ಗ್ರಾಮದಲ್ಲಿ 50ಕ್ಕೂ ಹೆಚ್ಚು ಬಚ್ಚಲು ಗುಂಡಿಗಳನ್ನು ನಿರ್ಮಿಸಲಾಗಿದೆ. ಪರಿಣಾಮ ಮನೆ ನೀರು ರಸ್ತೆ ಮೇಲೆ ಹರಿಯುವುದು ನಿಂತಿದ್ದು, ಗ್ರಾಮದ ವಾತಾವರಣ ಸ್ವಚ್ಛವಾಗಿದೆ ಎಂದರು.

ಬ್ಯಾಸ್ಕೆಟ್‌ ಬಾಲ್‌ ಮೈದಾನ:

ನರೇಗಾ ಯೋಜನೆಯಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಸಜ್ಜಿತ ಬ್ಯಾಸ್ಕೆಟ್‌ ಬಾಲ್‌ ಮೈದಾನವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚು ಗಿಡಗಳನ್ನು ನೆಟ್ಟು ಹಸಿರೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗೋವಿಂದ ರೆಡ್ಡಿ ಅವರು ಇತ್ತೀಚೆಗೆ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ, ಎನ್‌ಆರ್‌ಇಜಿ ಅಡಿ ನಡೆದಿರುವ ಕಾರ್ಯಗಳನ್ನು ಹಾಗೂ ಹಳೆಯ ಬಾವಿಗಳಿಗೆ ಕಾಯಕಲ್ಪ ನೀಡಿರುವುದನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

***

ಬಾವಿಗಳಿಗೆ ಕಾಯಕಲ್ಪ ನೀಡಿದ ಬಳಿಕ ನೀರು ಶುದ್ಧವಾಗಿದ್ದು, ಕುಡಿಯಲು ಯೋಗ್ಯವಾಗಿದೆ. ಗ್ರಾಮದ ಜನರು ಸದ್ಯ ಸ್ನಾನಕ್ಕೆ, ಬಟ್ಟೆ ತೊಳೆಯಲು ಈ ನೀರನ್ನು ಬಳಸುತ್ತಿದ್ದಾರೆ

–ಮಲ್ಲಿಕಾರ್ಜುನ ಹಾವರಗಿ, ಪಿಡಿಓ, ಗೊಳಸಂಗಿ

***

ದೊಡ್ಡ ಗ್ರಾಮವಾದ ಗೊಳಸಂಗಿಗೆ ಕೃಷ್ಣಾ ನದಿಯಿಂದ ಪ್ರತಿದಿನ ಕುಡಿಯುವ ನೀರು ಪೂರೈಕೆಯಾದರೂ ಸಾಲುತ್ತಿಲ್ಲ. ಹೀಗಾಗಿ ಬಾವಿಗಳನ್ನು ಪುನರುಜ್ಜೀವಗೊಳಿಸಿದ ಬಳಿಕ ನೀರಿನ ಸಮಸ್ಯೆ ನೀಗಿದೆ

–ಸುನೀತಾ ಶೇಖರ ಪವಾರ

ಅಧ್ಯಕ್ಷೆ, ಗ್ರಾ.ಪಂ.ಗೊಳಸಂಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು