ಶನಿವಾರ, ಮೇ 21, 2022
25 °C

ಜೆಡಿಎಸ್ 'ಜನತಾ ಜಲಧಾರೆ'ಗೆ ಚಾಲನೆ; ಬಿಜೆಪಿ, ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಜಾತ್ಯತೀತ ಜನತಾ ದಳದಿಂದ ಹಮ್ಮಿಕೊಂಡಿರುವ 'ಜನತಾ ಜಲಧಾರೆ' ಕಾರ್ಯಕ್ರಮಕ್ಕೆ ಆಲಮಟ್ಟಿಯ ಕೃಷ್ಣಾ ನದಿ ತೀರದಲ್ಲಿ ‌ ಗಂಗಾಪೂಜೆ ನೆರವೇರಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಹಾಗೂ ಪಕ್ಷದ ಮುಖಂಡರು ಚಾಲನೆ ನೀಡಿದರು.

'ಜನತಾ ಜಲಧಾರೆ' ಸಮಾವೇಶದ ಅಂಗವಾಗಿ ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ ಸೇರಿದಂತೆ ಜಾನಪದ ವಾದ್ಯ ಮೇಳಗಳೊಂದಿಗೆ ಇಲ್ಲಿನ ಆಲಮಟ್ಟಿ ಆಣೆಕಟ್ಟೆ ವೃತ್ತದಿಂದ ಕೃಷ್ಣಾ ನದಿ ತಟದ ಚಂದ್ರಮ್ಮಾ ದೇವಿ ದೇವಸ್ಥಾನದ ವರೆಗೆ ಭವ್ಯ ಮೆರವಣಿಗೆ ನಡೆಯಿತು.

ಕೃಷ್ಣಾ ನದಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬೃಹತ್ ಕಳಸದಲ್ಲಿ ಕೃಷ್ಣೆಯ ನೀರನ್ನು ಸಂಗ್ರಹಿಸಲಾಯಿತು.
'ಜನತಾ ಜಲಧಾರೆ' ಸಮಾವೇಶದಲ್ಲಿ ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಮುಖಂಡರು, ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ನೀರಿನ ಸದ್ಬಳಕೆಯಲ್ಲಿ ವಿಫಲ: ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿಪರ ಚಿಂತನೆ ನಡೆಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದರು.

ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಭ್ರಷ್ಟಾಚಾರದ ಹೆಬ್ಬುಲಿ, ಇನ್ನೂ ಬಿಜೆಪಿಗೆ ಕೇವಲ ಅಧಿಕಾರದ ಲಾಲಸೆ, ಬಿಜೆಪಿ ಕಾರ್ಯಕಾರಣಿ ಹೆಸರಿನಲ್ಲಿ ಜನಪರ ಯಾವುದೇ ಚಿಂತನೆ ಮಾಡದೇ ಕೇವಲ ಅಧಿಕಾರಕ್ಕೆ ಹೇಗೆ ಬರಬೇಕು, ಚುನಾವಣೆ ಹೇಗೆ ಗೆಲ್ಲಬೇಕು ಎಂಬುದಷ್ಟೇ ಚಿಂತಿಸುತ್ತಿದೆ ಎಂದರು.

ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ನಡೆಸಿ, ನೀರಾವರಿಗೆ ಆದ್ಯತೆ ನೀಡಲಿಲ್ಲ. ಶಿಕ್ಷಣ, ಆರೋಗ್ಯ, ಮಹಿಳಾ ಸ್ವಾವಲಂಬಿ, ಬೆಲೆ ಇಳಿಕೆ, ಜನಸಾಮಾನ್ಯರ ಬದುಕು ಮೇಲ್ದರ್ಜೇಗೇರಿಸುವುದು ಜೆಡಿಎಸ್ ಕಾರ್ಯ ಎಂದರು.

ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ ನೀರಾವರಿ ಸೇರಿ ಪ್ರತಿಯೊಂದರಲ್ಲಿಯೂ ಅಭಿವೃದ್ಧಿ ಹೊಂದಿವೆ. ಇದಕ್ಕೆ ಕಾರಣ ಪ್ರಾದೇಶಿಕ ಪಕ್ಷಗಳ ಆಡಳಿತ. ಜೆಡಿಎಸ್ 'ಜನತಾ ಜಲಧಾರೆ' ಕಾರ್ಯಕ್ರಮದನ್ವಯ ರಾಜ್ಯದಲ್ಲಿ ಎಲ್ಲಾ ನದಿ ನೀರನ್ನು ಉಪಯೋಗಿಸಿಕೊಂಡು ನೀರಾವರಿ ಕಲ್ಪಿಸುವ ಸಂಕಲ್ಪ ಮಾಡಲಾಗಿದೆ. ಜೆಡಿಎಸ್‌ಗೆ ಸಂಪೂರ್ಣ ಬಹುಮತ ಬಂದರೆ ಇಡೀ ರಾಜ್ಯವನ್ನು ನೀರಾವರಿಗೊಳಪಡಿಸಲಾಗುವುದು ಎಂದರು.

ರಾಜ್ಯದಲ್ಲಿ ಕೃಷ್ಣಾ, ಮಹಾದಾಯಿ ಸೇರಿದಂತೆ ನಾನಾ ನದಿಗಳು ಹರಿಯುತ್ತಿದ್ದರೂ ನೀರಿನ ಸದ್ಬಳಕೆ ಮಾಡಿಕೊಳ್ಳಲು ಆಗದಿರುವುದು ರಾಷ್ಟ್ರೀಯ ಪಕ್ಷಗಳ ಧೋರಣೆ ಕಾರಣ ಎಂದು ಆರೋಪಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಂಡಿದ್ದು, ಈಗ ರಾಷ್ಟ್ರೀಕರಣ ಮಾಡಲು ಹೊರಟಿದ್ದು ಯಾಕೆ? ಎಂದು ಪ್ರಶ್ನಿಸಿದರು.

ಮಧ್ಯ ಕರ್ನಾಟಕದ ಭದ್ರಾ ಯೋಜನೆ, ಈ ಭಾಗದ ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ನಾನಾ ನೀರಾವರಿ ಯೋಜನೆಗಳಿಗೆ ಬಜೆಟ್‌ನಲ್ಲಿ ಕಡಿಮೆ ಹಣ ಇಡಲಾಗಿದೆ. ಜತೆಗೆ ಕಾನೂನು ಚೌಕಟ್ಟಿನಲ್ಲಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೇಂದ್ರದ ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ನಮ್ಮ ರಾಜ್ಯವನ್ನು ಲಘುವಾಗಿ ಪರಿಗಣಿಸಿವೆ. 1996ರಲ್ಲಿ ಜೆಡಿಎಸ್‌ಗೆ 16 ಸದಸ್ಯರನ್ನು ಲೋಕಸಭೆಗೆ ಕಳುಹಿಸಲಾಗಿತ್ತು. ಆಗ ದೇವೆಗೌಡರು ಪ್ರಧಾನಿಯಾದಾಗ ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರಥಮ ಬಾರಿಗೆ ಆದ್ಯತೆ ನೀಡಿದರು. ₹ 17 ಸಾವಿರ ಕೋಟಿ ನೀಡಿದ್ದಾರೆ. 32 ವರ್ಷ ಕಾಂಗ್ರೆಸ್ ಆಡಳಿತ ನಡೆಸಿದರೂ 10 ಪರ್ಸೆಂಟ್ ನೀರನ್ನೂ ಉಪಯೋಗ ಮಾಡಿರಲಿಲ್ಲ, ಅಭಿವೃದ್ಧಿ ಆಗಿರಲಿಲ್ಲ ಎಂದು ದೂರಿದರು.

ಈ ಭಾಗದ ನೀರಾವರಿ ಯೋಜನೆಗೆ ದೇವೇಗೌಡರ ಕೊಡುಗೆ ವರ್ಣನೆ ಮಾಡಲು ಆಗದೇ ಇರುವಂತಹದು. ಎಸ್.ಆರ್.ಪಾಟೀಲ ಟ್ರ್ಯಾಕ್ಟರ್ ರ‍್ಯಾಲಿ ಮಾಡುತ್ತಿದ್ದಾರೆ. ಐದು ವರ್ಷ ಕಾಂಗ್ರೆಸ್ ಸರ್ಕಾರ ಇದ್ದಾಗ ನೀರಾವರಿ ಮಾಡದೇ ಈಗ ಯಾತ್ರೆ ಆರಂಭಿಸಿದ್ದಾರೆ ಎಂದು ಕುಟುಕಿದರು.

ಕರ್ನಾಟಕಕ್ಕೆ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ದ್ರೋಹ ಎಸಗಿವೆ. ಕಾಂಗ್ರೆಸ್, ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ‌ಇದ್ದಂತೆ. ಕೇಂದ್ರಕ್ಕೆ ದೇಶದಲ್ಲೇ ಅತಿ ಹೆಚ್ಚು ತೆರಿಗೆ ನೀಡಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ, ರಾಜ್ಯಕ್ಕೆ ಅನುದಾನ ನೀಡುವಲ್ಲಿ ಕೇಂದ್ರ ತಾರತಮ್ಯ ಎಸಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂತೋಷ್ ಪಾಟೀಲ ಆತ್ಮಹತ್ಯೆ ವಿಚಾರದಲ್ಲಿ ಕಾಂಗ್ರೆಸ್ ಒಣ ರಾಜಕಾರಣ
ಸಂತೋಷ್ ಪಾಟೀಲ ಆತ್ಮಹತ್ಯೆಯಲ್ಲಿ ಕಾಂಗ್ರೆಸ್ ಒಣ ರಾಜಕೀಯ ಮಾಡುತ್ತಿದೆ. ಈಶ್ವರಪ್ಪನವರನ್ನು ಬಂಧಿಸಲು ಹೋರಾಟ ನಡೆಸಲು ಹೊರಟಿದ್ದು ಹಾಸ್ಯಾಸ್ಪದ ಎಂದು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಕುರುಬ ಸಮಾಜದ ಪೊಲೀಸ್ ಅಧಿಕಾರಿ ಕಲ್ಲಪ್ಪ ಹಂಡಿಭಾಗ ಆತ್ಮಹತ್ಯೆ ಮಾಡಿಕೊಂಡಾಗ ಸಿದ್ದರಾಮಯ್ಯ ರಾಜೀನಾಮೆ ನೀಡಿದರಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಕಳೆದ ಕೆಲ ತಿಂಗಳ ಹಿಂದೆ ಮತೀಯ ಗಲಾಟೆ ನಡೆದಾಗ, ಧರ್ಮಗಳ ನಡುವೆ ಗಲಾಟೆ ನಡೆದಾಗ ಕಾಂಗ್ರೆಸ್‌ನವರು ಸುಮ್ಮನಿದ್ದದ್ದು ಏಕೆ? ಎಂದು ಕೇಳಿದರು.

ಶಾಸಕ ದೇವಾನಂದ ಚವ್ಹಾಣ, ಜೆಡಿಎಸ್ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಮಾವಿನಮರದ, ವಿಜಯಪುರ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಮುಖಂಡ ಬಿ.ಡಿ.ಪಾಟೀಲ, ಸುನೀತಾ ಚವ್ಹಾಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು