ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉನ್ನತ ಶಿಕ್ಷಣ ಮಹಿಳಾ ಪ್ರಗತಿಗೆ ಪ್ರೇರಕ ಶಕ್ತಿ:ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ 15ನೇ ಘಟಿಕೋತ್ಸವ :
Published 11 ಮಾರ್ಚ್ 2024, 16:18 IST
Last Updated 11 ಮಾರ್ಚ್ 2024, 16:18 IST
ಅಕ್ಷರ ಗಾತ್ರ

ವಿಜಯಪುರ: ‘ಉನ್ನತ ಶಿಕ್ಷಣವು ಮಹಿಳಾ ಪ್ರಗತಿಗೆ ಪ್ರೇರಕ ಶಕ್ತಿ. ಮಹಿಳಾ ಶಿಕ್ಷಣವು ರಾಷ್ಟ್ರವನ್ನು ಹೆಚ್ಚು ಶಕ್ತಿಯುತ ಮತ್ತು ಶ್ರೇಷ್ಠವನ್ನಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ’ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಹೇಳಿದರು.

ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಬಹಳ ಮುಖ್ಯ. ಮಹಿಳೆಯರು ದೇಶದ ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ಪಾಲ್ಗೊಂಡಾಗ ಮಾತ್ರ ಯಾವುದೇ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದರು.

‘ನೀವು ಸಮಾಜದ ಪ್ರಗತಿಯ ಬಗ್ಗೆ ನಿಖರವಾಗಿ ತಿಳಿದುಕೊಳ್ಳಬೇಕಾದರೆ, ಆ ಸಮಾಜದ ಮಹಿಳೆಯರ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಿ’ ಎಂದು ಅಂಬೇಡ್ಕರ್ ಹೇಳಿದ್ದರು ಎಂಬುದನ್ನು ಎಲ್ಲರೂ ನೆನಪಿಡಬೇಕು ಎಂದರು.

‘ಇಂದಿನ ಮಹಿಳೆಯರು ಕೌಟುಂಬಿಕ ಮತ್ತು ಸಾಮಾಜಿಕ ಜವಾಬ್ದಾರಿಗಳ ಜೊತೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಕೌಶಲವನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ’ ಎಂದು ಹೇಳಿದರು.

‘ಲಿಂಗ ಸಮಾನತೆಯ ತತ್ವವನ್ನು ಭಾರತೀಯ ಸಂವಿಧಾನದ ಪೀಠಿಕೆ, ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು ಮತ್ತು ನಿರ್ದೇಶನ ತತ್ವಗಳಲ್ಲಿ ಪ್ರತಿಪಾದಿಸಲಾಗಿದೆ. ಸಂವಿಧಾನವು ಮಹಿಳೆಯರಿಗೆ ಸಮಾನ ಸ್ಥಾನಮಾನವನ್ನು ನೀಡುವುದು ಮಾತ್ರವಲ್ಲದೆ ಮಹಿಳೆಯರ ಸಬಲೀಕರಣಕ್ಕಾಗಿ ಹಕ್ಕುಗಳನ್ನು ನೀಡಿದೆ’ ಎಂದರು.

‘ಮಹಿಳೆಯರ ಹಕ್ಕುಗಳು ರಕ್ಷಿಸಲು 1990ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವನ್ನು ಸ್ಥಾಪಿಸಲಾಯಿತು. ಭಾರತೀಯ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಮೂಲಕ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ  ಒದಗಿಸಲಾಗಿದೆ’ ಎಂದು ಹೇಳಿದರು.

‘ಧನ ಗಳಿಸಲು ಲಕ್ಷ್ಮಿ ಪೂಜೆ ಮಾಡುತ್ತೇವೆ, ವಿದ್ಯೆಗಾಗಿ ಸರಸ್ವತಿ ಹಾಗೂ ಶಕ್ತಿಗಾಗಿ ದುರ್ಗಾ ಮಾತೆಯನ್ನು ಪೂಜಿಸುತ್ತೇವೆ. ಇದರ ಅರ್ಥ ಪ್ರಾಚೀನ ಕಾಲದಿಂದಲೂ ಮಹಿಳೆಯನ್ನು ಪೂಜಿಸುತ್ತಾ ಬಂದಿದ್ದೇವೆ. ಮಹಿಳೆ ಮನಸ್ಸು ಮಾಡಿದರೆ ಸಾಧನೆಗಳ ಉತ್ತುಂಗಕ್ಕೆ ತಲುಪಬಹುದು ಎಂದರು.

‘ಮಹಿಳಾ ವಿಶ್ವವಿದ್ಯಾಲಯವು ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತೋಷದ ವಿಷಯವಾಗಿದೆ’ ಎಂದು ಹೇಳಿದರು.

‘ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಮಾತನಾಡಿ, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಲು ಮಹಿಳಾ ವಿಶ್ವವಿದ್ಯಾಲಯವು ಮಹಿಳೆಯರಿಗೆ ಉತ್ಕೃಷ್ಟವಾದ ಶಿಕ್ಷಣ ನೀಡುತ್ತಿದೆ’ ಎಂದು ಹೇಳಿದರು.

‘ಪುರುಷ ಪ್ರಧಾನವಾದ ಈ ಸಮಾಜದಲ್ಲಿ ಮಹಿಳೆ ಇನ್ನಷ್ಟು ಸಬಲೀಕರಣ ಹೊಂದಲು ಶಿಕ್ಷಣವೊಂದೆ ಮಾರ್ಗವಾಗಿದೆ’ ಎಂದರು.

‘ಉನ್ನತ ಶಿಕ್ಷಣದಲ್ಲಿ ಶೇ 48ಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಈ ಪ್ರಮಾಣ ಇನ್ನಷ್ಟು ಹೆಚ್ಚಿಸಲು ಹಲವಾರು ವಿಷಯಗಳ ಕುರಿತು ಅಧ್ಯಯನ ನಡೆಸಿ ಕ್ರಮ ವಹಿಸಲಾಗುತ್ತಿದೆ’ ಎಂದು ಹೇಳಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಸಕ ವಿಠಲ ಕಟಕಧೋಂಡ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಎಚ್.ಎಂ.ಚಂದ್ರಶೇಖರ, ಪ್ರೊ.ಓಂಕಾರ ಕಾಕಡೆ  ಇದ್ದರು.

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದಲ್ಲಿ ಲಕ್ಷ್ಮಿ ಬಾಗಲಕೋಟಿ ಅವರಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು  ಎರಡು ಚಿನ್ನದ ಪದಕ  ನೀಡಿದರು–ಪ್ರಜಾವಾಣಿ ಚಿತ್ರ
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದಲ್ಲಿ ಲಕ್ಷ್ಮಿ ಬಾಗಲಕೋಟಿ ಅವರಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು  ಎರಡು ಚಿನ್ನದ ಪದಕ  ನೀಡಿದರು–ಪ್ರಜಾವಾಣಿ ಚಿತ್ರ
‘ಆಹಾರ ಸಂಸ್ಕರಣೆ ಮತ್ತು ಪೋಷಕಾಂಶ’ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಬೆಳಗಾವಿಯ ಅನುಷಾ ತಕ್ಕನ್ನವರ ಅವರ ಸಂಭ್ರಮ
‘ಆಹಾರ ಸಂಸ್ಕರಣೆ ಮತ್ತು ಪೋಷಕಾಂಶ’ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಬೆಳಗಾವಿಯ ಅನುಷಾ ತಕ್ಕನ್ನವರ ಅವರ ಸಂಭ್ರಮ

‘ಮಹಿಳಾ ಸಬಲೀಕರಣದ ಮೈಲಿಗಲ್ಲು ಉನ್ನತ ಶಿಕ್ಷಣ’

ವಿಜಯಪುರ: ‘ಉನ್ನತ ಶಿಕ್ಷಣವು ಮಹಿಳಾ ಸಬಲೀಕರಣದ ಮೈಲಿಗಲ್ಲಾಗಿದೆ. ಬದಲಾಗುತ್ತಿರುವ ಮತ್ತು ಸವಾಲಿನ ವಾತಾವರಣಕ್ಕೆ ಪ್ರತಿಕ್ರಿಯಿಸಲು ಉನ್ನತ ಶಿಕ್ಷಣ ಸಹಾಯ ಮಾಡುತ್ತದೆ. ಇದು ಅವರಲ್ಲಿ ಬಲವಾದ ಆತ್ಮವಿಶ್ವಾಸ ಮೂಡಿಸುತ್ತದೆ’ ಎಂದು ಹರಿಯಾಣದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುಷ್ಮಾ ಯಾದವ್ ಹೇಳಿದರು. ಆನ್‍ಲೈನ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದ ಅವರು ‘ಉನ್ನತ ಶಿಕ್ಷಣವು ಬದಲಾವಣೆಗಳನ್ನು ಪ್ರಾರಂಭಿಸುವ ಪ್ರಭಾವಿಸುವ ಮತ್ತು ಪ್ರೇರೇಪಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಮಹಿಳೆಯರಿಗೆ ಸಹಾಯ ಮಾಡುತ್ತದೆ’ ಎಂದರು. ‘ಉನ್ನತ ಶಿಕ್ಷಣವು ಮಹಿಳೆಯರಲ್ಲಿ ಅರಿವಿನ ಅಭಿವೃದ್ಧಿ ಪರಿಣಾಮಕಾರಿ ಜ್ಞಾನವಲಯದ ಅಭಿವೃದ್ಧಿ ಮನೋಜನ್ಯ ವಲಯದ ಅಭಿವೃದ್ಧಿ ಆರ್ಥಿಕ ಸ್ಥಿರತೆ ಕುಟುಂಬ ಕಲ್ಯಾಣ ಸಾಮಾಜಿಕ ಗೌರವ ಮತ್ತು ರಾಷ್ಟ್ರೀಯ ಅಭಿವೃದ್ಧಿ ಮಾನಸಿಕ ಯೋಗಕ್ಷೇಮ ತರ್ಕಬದ್ಧ ಚಿಂತನೆ ವಿಶಾಲ ಮನಸ್ಥಿತಿಯನ್ನು ಅಭಿವೃದ್ಧಿಪಡಿಸುತ್ತದೆ’ ಎಂದರು. ‘ಇಂದಿನ ಮಹಿಳೆ ಶಿಕ್ಷಣ ಸಾಫ್ಟ್‌ವೇರ್ ಸಿನಿಮಾ ಉದ್ಯಮ ಏರೋನಾಟಿಕ್ಸ್ ರಾಜಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸೇನೆ ವೈದ್ಯಕೀಯ ಬಾಹ್ಯಾಕಾಶ ಮತ್ತು ಕೃಷಿಯಂತಹ ವಿವಿಧ ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು. ‘ಒಬ್ಬ ಪುರುಷ ವಿದ್ಯಾವಂತನಾದರೆ ಅವನು ಮಾತ್ರ ವಿದ್ಯಾವಂತನಾಗುತ್ತಾನೆ. ಮಹಿಳೆ ವಿದ್ಯಾವಂತೆಯಾದರೆ ಇಡೀ ಕುಟುಂಬವೇ ಶಿಕ್ಷಿತವಾಗುತ್ತದೆ ಎಂಬ ಮಾತಿದೆ. ಉನ್ನತ ಶಿಕ್ಷಣವು ಮಹಿಳೆಯರನ್ನು ಸಬಲೀಕರಣಗೊಳಿಸುವುದು ಮಾತ್ರವಲ್ಲದೆ ಯಾವುದೇ ಪರಿಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸಲು ಆಕೆಯನ್ನು ಸಿದ್ಧಪಡಿಸುತ್ತದೆ’ ಎಂದರು. ‘ಉನ್ನತ ಶಿಕ್ಷಣವು ಮಹಿಳೆಯರನ್ನು ಉದ್ಯೋಗ ಮಾರುಕಟ್ಟೆಗೆ ಹೋಗುವಂತೆ ಮಾಡುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ಹಿಂಜರಿಕೆಯಿಲ್ಲದೆ ಮತ್ತು ಸಮಾನವಾಗಿ ಭಾಗವಹಿಸಲು ಉನ್ನತ ಶಿಕ್ಷಣವು ಮಹಿಳೆಯರನ್ನು ಸಿದ್ಧಪಡಿಸುತ್ತದೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT