ಬುಧವಾರ, ಜನವರಿ 26, 2022
25 °C
ಕೃಷಿ ಕಾಯ್ದೆಗಳ ವಾಪಸಾತಿ ಅಂಗೀಕಾರ, ಸಾವಿಗೀಡಾದ ರೈತರ ಕುಟುಂಬಗಳಿಗೆ ಸೂಕ್ತ ಪರಹಾರಕ್ಕೆ ಆಗ್ರಹ

ವಿಜಯಪುರ: ರೈತ, ಕಾರ್ಮಿಕ ಸಂಘಟನೆಗಳಿಂದ ಹೆದ್ದಾರಿ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸಂಸತ್ತಿನಲ್ಲಿ ಕೃಷಿ ಕಾಯ್ದೆಗಳ ವಾಪಸಾತಿ ಅಂಗೀಕಾರ ಆಗಬೇಕು, ಹೋರಾಟದ ವೇಳೆ ಸಾವಿಗೀಡಾದ ರೈತರ ಕುಟುಂಬಗಳಿಗೆ ಸೂಕ್ತ ಪರಹಾರ ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆಯ  ಮೇರೆಗೆ ಜಿಲ್ಲೆಯ ವಿವಿಧ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳ ಮುಖಂಡರು ಗುರುವಾರ ರಾಷ್ಟ್ರೀಯ ಹೆದ್ದಾರಿ 13ರ ಟೋಲ್ ನಾಕಾ ಬಳಿ ಹೆದ್ದಾರಿ ತಡೆ ನಡೆಸಿದರು.

ಆಡು, ಆಕಳುಗಳೊಂದಿಗೆ ಸುಮಾರು ಒಂದು ಗಂಟೆ ಹೆದ್ದಾರಿ ತಡೆ ನಡೆಸಿದ ಪರಿಣಾಮ  ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂದಿತು. ಆ ಸಂದರ್ಭದಲ್ಲಿ ಹೋರಾಟಗಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಬಂಡವಾಳಶಾಹಿಗಳ ಸೇವೆ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ, ಅಂಬಾನಿ ಅದಾನಿಗಳ ಬೂಟು ನೆಕ್ಕುವ ಸರ್ಕಾರಕ್ಕೆ ಧಿಕ್ಕಾರ. ವಿದ್ಯುತ್ ಖಾಸಗೀಕರಣಕ್ಕೆ ಧಿಕ್ಕಾರ, ವಿದ್ಯುತ್ ತಿದ್ದುಪಡಿ ಕಾಯ್ದೆ ಒಪ್ಪೋದಿಲ್ಲ, ಸುಳ್ಳು ಭರವಸೆಗಳನ್ನು ಒಪ್ಪುವುದಿಲ್ಲ ಎಂಬ ಘೋಷಣೆಗಳನ್ನು ಕೂಗಿದರು.

ರೈತರ  ಹೋರಾಟಕ್ಕೆ ನವೆಂಬರ್ 26ಕ್ಕೆ ಒಂದು ವರ್ಷ ಪೂರೈಸಿದೆ. ಮೂರು ಕೃಷಿ ಕಾಯ್ದೆಗಳು ವಾಪಸ್ ಪಡೆಯುದಾಗಿ ಪ್ರಧಾನಿ ಮೋದಿ ಮೌಖಿಕವಾಗಿ ಹೇಳಿರುವುದು ಸ್ವಾಗತಾರ್ಹ. ಆದರೆ, ಕಾಯ್ದೆ ವಾಪಸ್ ಪಡೆದಿರುವುದು ಖಾತ್ರಿಯಾಗಲು ಜೊತೆಗೆ ಸಂವಿಧಾನ ಬದ್ದವಾಗಿ ಆಗಬೇಕಾದರೇ ಅದು ಸಂಸತ್ತಿನಲ್ಲಿ ಅಂಗೀಕಾರವಾಗಬೇಕು ಎಂದು ಆಗ್ರಹಿಸಿದರು.

ಒಂದು ವರ್ಷದ ಹೋರಾಟದಲ್ಲಿ ಹುತಾತ್ಮರಾದ ಎಲ್ಲ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸಬೇಕು, ಹೋರಾಟದಲ್ಲಿ ಮಡಿದ ರೈತರಿಗೆ ಸರ್ಕಾರ ಹುತಾತ್ಮ ರೈತರೆಂದು ಘೋಷಿಸಬೇಕು ಮತ್ತು ಹುತಾತ್ಮ ರೈತರ ಸ್ಮಾರಕ ನಿರ್ಮಿಸಲು ಸರ್ಕಾರ ಸ್ಥಳಾವಕಾಶ ನೀಡಬೇಕು, ಕನಿಷ್ಠ ಬೆಂಬಲ ಬೆಲೆ  ಘೋಷಿಸಬೇಕು, ವಿದ್ಯುತ್ ಕಾಯ್ದೆ  ವಾಪಸ್ ಪಡೆಯಬೇಕು, ಹೋರಾಟ ನಿರತ ರೈತರ ಮೇಲೆ ಹಾಕಿರುವ ಮೊಕದ್ದಮೆ ತೆಗೆಯಬೇಕು, ರೈತರ ಮೇಲೆ ದಾಳಿ ಮಾಡಿ ರೈತರ ಕೊಲೆಗೆ ಕಾರಣರಾದವರಿಗೆ ಶಿಕ್ಷಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಭೀಮಶಿ ಕಲಾದಗಿ, ಶಕ್ತಿಕುಮಾರ ಉಕುಮನಾಳ, ಅಣ್ಣಾರಾಯ ಈಳಗೇರ, ಸಿ.ಎ ಗಂಟೆಪ್ಪಗೋಳ, ಅಕ್ರಂ ಮಾಶ್ಯಾಳಕರ, ಶ್ರೀನಾಥ ಪೂಜಾರ, ಇರ್ಪಾನ್ ಶೇಖ್‌, ಸುರೇಖಾ ರಜಪೂತ, ಸಿದ್ದಲಿಂಗ ಬಾಗೇವಾಡಿ, ಮಲ್ಲಿಕಾರ್ಜುನ್ ಎಚ್ ಟಿ, ಲಕ್ಷ್ಮಣ ಹಂದ್ರಾಳ, ಆರ್.ಕೆ.ಎಸ್ ನ ಭಿ. ಭಗವಾನ್ ರೆಡ್ಡಿ, ಬಾಳು ಜೇವೂರ ಮಹಾದೇವ ಲಿಗಾಡೆ, ತಿಪರಾಯ ಹತ್ತರಕಿ, ಶ್ರೀಶೈಲ ನಿಮಂಗ್ರೆ,  ರಾಮಣ್ಣ ಶಿರಾಗೋಳ, ದಾನಮ್ಮ ಮಠ, ಶರಣುಗೌಡ ಹೊನಗಲ್ಲಿ, ಮಲ್ಲು ಗಂಗೂರಿ, ತುಕಾರಾಮ ಪೂಜಾರಿ, ಜನವಾದಿ ಮಹಿಳಾ ಸಂಘಟನೆಯ ಸುರೇಖಾ ರಜಪೂತ, ರಾಜ್ಮಾ ನಧಾಪ್, ಸುಮಿತ್ರಾ ಗೋನಸಗಿ, ಸಿಐಟಿಯುನ ಲಕ್ಷ್ಮಣ ಹಂದ್ರಾಳ ಸುನಂದ ನಾಯಕ, ಭಾರತಿ ವಾಲಿ, ಮಲಿಕ್ ಸಾಬ್‌ ಟಕ್ಕಳಕಿ, ಸುವರ್ಣ ರಮೇಶ ತಳವಾರ, ಮಹಿಬೂಬ ಕಕ್ಕಳಮೇಲಿ, ಎಐಟಿಯುಸಿ ಕಾರ್ಮಿಕ ಸಂಘಟನೆಯ ಮಲ್ಲಿಕಾರ್ಜುನ ಎಚ್. ಟಿ., ಮಲ್ಲಿಕಾರ್ಜುನ ಹಿರೇಮಠ, ವಿದ್ಯಾರ್ಥಿ ಸಂಘಟನೆಯ ಸುರೇಖಾ ಕಡಪಟ್ಟಿ, ಎ. ಯು ಮುಲ್ಲಾ, ಜನಶಕ್ತಿಯ ಸದಾನಂದ ಮೋದಿ ರಾಕೇಶ್, ದಸ್ತಗೀರ ಉಕ್ಕಲಿ,  ರವಿ ದೊಡಮನಿ, ನಿರ್ಮಲಾ ಹೊಸಮನಿ, ಪ್ರಕಾಶ್ ಹಿಟ್ನಳ್ಳಿ, ರಾಜು ಮೆಟೊಳ್ಳಿ, ರಿಜ್ವಾನ್ ಮುಲ್ಲಾ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು