ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮೇಲ | ಕಡಣಿ ಸೇತುವೆ: ದಶಕದಿಂದ ನನೆಗುದಿಗೆ

2018ರ ಬಜೆಟ್‌ನಲ್ಲಿ ₹53 ಕೋಟಿ ನಿಗದಿಪಡಿಸಿ ಘೋಷಣೆ
ರಮೇಶ ಕತ್ತಿ
Published 23 ಮೇ 2024, 5:54 IST
Last Updated 23 ಮೇ 2024, 5:54 IST
ಅಕ್ಷರ ಗಾತ್ರ

ಆಲಮೇಲ: ತಾಲ್ಲೂಕಿನ ಕಡಣಿ ಗ್ರಾಮದ ಭೀಮಾನದಿಯ ಅಡ್ಡಲಾಗಿ ಸಂಪರ್ಕ ಸೇತುವಾಗಿದ್ದ ಕಡಣಿ ಬ್ಯಾರೇಜು ಮುಳುಗಡೆಯಾಗಿ ಹಲವು ವರ್ಷಗಳೇ ಕಳೆದಿವೆ. ಸೊನ್ನ ಸಮೀಪ ಭೀಮಾ ಏತನೀರಾವರಿ ಯೋಜನೆಯಿಂದಾಗಿ ಭೀಮಾ ಹಿನ್ನೀರು ಪರಿಣಾಮ ಈ ಸೇತುವೆ ಮುಳಗಡೆಯಾಗಿದೆ. ಹೀಗಾಗಿ ಮಹಾರಾಷ್ಟ್ರದ ಅಕ್ಕಲಕೋಟ ಹಾಗೂ ನೆರೆಯ ಕಲಬುರಗಿ ಜಿಲ್ಲೆಯ ಸಂಪರ್ಕಕ್ಕೆ ಇರುವ ಕೊಂಡಿಯೊಂದು ಕಳಚಿದಂತಾಗಿದೆ.

ಕಳೆದ ಒಂದು ದಶಕದಿಂದ ಈ ವಿಷಯ ಪ್ರಸ್ತಾಪದಲ್ಲಿದ್ದು, ಬ್ಯಾರೇಜು ನಿರ್ಮಾಣದ ಕಾರ್ಯ ಮಾತ್ರ ಕೈಗೂಡುತ್ತಿಲ್ಲ. 2018ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಉಸ್ತುವಾರಿ ಸಚಿವರಾಗಿದ್ದ ಎಂ.ಸಿ. ಮನಗೂಳಿ ವಿಶೇಷ ಆಸಕ್ತಿಯಿಂದಾಗಿ ಬಜೆಟ್‌ನಲ್ಲಿ ₹ 53 ಕೋಟಿ ನಿಗದಿಪಡಿಸಿ ಘೋಷಣೆ ಮಾಡಿಸಿದ್ದರು. ಅದಕ್ಕೂ ಮೊದಲು ನಡೆದ ಚುನಾವಣೆಯಲ್ಲೂ ಇದು ಪ್ರಮುಖ ವಿಷಯವಾಗಿ ಚಾಲ್ತಿಯಲ್ಲಿತ್ತು.

ಏನು ಲಾಭ: ಈ ಬ್ಯಾರೇಜು ನಿರ್ಮಾಣ ಮಾಡುವುದರಿಂದ ನೆರೆಯ ಮಹಾರಾಷ್ಟ್ರದ ಸಂಪರ್ಕದ ಅಂತರ ಕಡಿಮೆಯಾಗಿ ವ್ಯಾಪಾರ ವಹಿವಾಟಿಗೆ ಹೆಚ್ಚು ಸಹಕಾರಿಯಾಗಲಿದೆ. ಎರಡೂ ರಾಜ್ಯಗಳ ಜನರೊಂದಿಗೆ ಉತ್ತಮ ಭಾಂಧವ್ಯ ಹೆಚ್ಚಿಸಲಿದೆ. ಆಲಮೇಲದಿಂದ ಮಹಾರಾಷ್ಟ್ರದ ಅಕ್ಕಲಕೋಟ ಪಟ್ಟಣಕ್ಕೆ ಈಗಿರುವ ದೂರ 70 ಕಿ.ಮೀದಿಂದ 40 ಕಿ.ಮೀಗೆ ಇಳಿಯುತ್ತದೆ. ಅಫಜಲಪುರದಿಂದ ಹೋಗಬೇಕಾದ ಅನಿವಾರ್ಯತೆ ಇಲ್ಲವಾಗಿ ಆಲಮೇಲ ಕಡಣಿ ಕರಜಗಿ ಮಾರ್ಗವಾಗಿ ಅಕ್ಕಲಕೋಟ ತಲುಪಬಹುದು. ಇದರಿಂದ ಪ್ರಯಾಣದ ಸಮಯ ಹಾಗೂ ಹಣದ ಉಳಿತಾಯ ಆಗುತ್ತದೆ. ಸರಕು ಸರಂಜಾಮು ಹೊತ್ತು ತರುವ ಬೃಹತ್ ವಾಹನಗಳಿಗೆ ದುಪ್ಪಟ್ಟು ಲಾಭ ಆಗಲಿದೆ ಎಂಬುದು ಲೆಕ್ಕಾಚಾರ. ರೈತರಿಗೆ ಹೆಚ್ಚು ಪ್ರಯೋಜನವಾಗಲಿದ್ದು ಈ ಭಾಗದ ರೈತರಿಗೆ ಕೃಷಿ ವ್ಯವಹಾರಕ್ಕೆ ಉತ್ತೇಜನವಾಗುತ್ತದೆ. ಆಲಮೇಲ ಕಡಣಿ ರಸ್ತೆಯಲ್ಲಿರುವ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವದಕ್ಕೆ ನೆರೆಯ ಕಲಬುರಗಿ ಜಿಲ್ಲೆಯ ರೈತರಿಗೂ ಇದರಿಂದ ಸಹಕಾರಿ ಆಗಲಿದೆ. ಅಲ್ಲದೇ ಇಲ್ಲಿಯ ರೈತರು ಅಕ್ಕಲಕೋಟ ಹಾಗೂ ಸೊಲ್ಲಾಪುರ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ತುಂಬಾ ಸಹಕಾರಿಯಾಗುತ್ತದೆ. ಸ್ಥಳೀಯ ವ್ಯಾಪಾರ ವಹಿವಾಟು ವೃದ್ದಿಯಾಗುತ್ತದೆ.

ಹೋರಾಟ, ಭರವಸೆ: 1970ರ ಕಾಲದಲ್ಲಿ ಭೀಮಾ ನದಿಗೆ ಅಡ್ಡಲಾಗಿ ಕಡಣಿ ಸೇತುವೆ ನಿರ್ಮಾಣವಾಗಿದ್ದು, ಇದು ಬ್ರಿಡ್ಜ್ ಕಂ ಬ್ಯಾರೇಜು ಆಗಿದ್ದರಿಂದ ಸಂಪರ್ಕ ಮತ್ತು ಭೀಮೆಯ ನೀರು ತಡೆದು ಸಂಗ್ರಹಿಸಲಾಗುತ್ತಿತ್ತು. ಕಾಲಘಟ್ಟದಿಂದಾಗಿ ಹೊಸ ಯೋಜನೆಗಳು ರೂಪುಗೊಂಡು ದೇವಣಗಾಂವ ಸನಿಹದಲ್ಲಿ ಭೀಮಾ ಏತನೀರಾವರಿ ಸಲುವಾಗಿ ಬೃಹತ್ ಸೇತುವೆ ನಿರ್ಮಾಣವಾದ ಕಾರಣ ಈ ಸೇತುವೆ ಹಿನ್ನೀರಿನಲ್ಲಿ ಮುಳುಗುವಂತಾಯಿತು. ಪ್ರತಿ ವರ್ಷ ಬೇಸಿಗೆಯಲ್ಲಿ ನೀರು ಬರಿದಾದಾಗ ಮಾತ್ರ ಈ ಬ್ಯಾರೇಜು ಕಾಣುತ್ತದೆ. ಸಂಪರ್ಕಕ್ಕೆ, ವಾಹನಗಳ ಓಡಾಟಕ್ಕೆ ಉಪಯೋಗಕ್ಕೆ ಬರುವುದು ಈಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಈ ಸೇತುವೆ ಎತ್ತರಿಸಬೇಕು ಅಥವಾ ಪಕ್ಕದಲ್ಲೇ ಬ್ಯಾರೇಜು ನಿರ್ಮಮಿಸಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ. ಅದು ದಶಕದ ಬೇಡಿಕೆಯೂ ಆಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂರೂ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿ ಶಾಶ್ವತ ಪರಿಹಾರದ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಶಾಸಕರಾಗಿ ಆಯ್ಕೆಯಾದ ಅಶೋಕ ಮನಗೂಳಿ ಅವರು ತಮ್ಮ ತಂದೆಯವರ ಸಂಕಲ್ಪವೂ ಇದಾಗಿದ್ದು ಇದನ್ನು ಮಾಡಿಯೇ ಮುಂದಿನ ಚುನಾವಣೆ ಎದುರಿಸುವ ಮಾತುಗಳನ್ನು ಆಡಿದ್ದಾರೆ.

ಬ್ಯಾರೇಜು ಮುಳುಗಡೆಯಾಗಿದ್ದರಿಂದ ಕಡಣಿಯಿಂದ ನೆರೆಯ ಗ್ರಾಮಕ್ಕೆ ಹೋಗಲು ಬೋಟ್ ಬಳಸಬೇಕಾದ ಸ್ಥಿತಿ ಇದೆ
ಬ್ಯಾರೇಜು ಮುಳುಗಡೆಯಾಗಿದ್ದರಿಂದ ಕಡಣಿಯಿಂದ ನೆರೆಯ ಗ್ರಾಮಕ್ಕೆ ಹೋಗಲು ಬೋಟ್ ಬಳಸಬೇಕಾದ ಸ್ಥಿತಿ ಇದೆ
ಇನ್ನೆರಡು ತಿಂಗಳಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಕಡಣಿ ಬ್ಯಾರೇಜು ನಿರ್ಮಾಣಕ್ಕೆ ಹಣ ಮಂಜೂರು ಮಾಡಿಸಿಕೊಂಡು ಕಾಮಗಾರಿ ಆರಂಭಿಸುತ್ತೇವೆ. ಬ್ಯಾರೇಜು ನಿರ್ಮಾಣ ಗ್ಯಾರಂಟಿ ಆಗಲಿದೆ
ಅಶೋಕ ಎಂ. ಮನಗೂಳಿ ಶಾಸಕ ಸಿಂದಗಿ
ಕಡಣಿ ಬ್ಯಾರೇಜು ನಿರ್ಮಾಣ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ನಿರ್ಮಾಣವಾದರೆ ರೈತರಿಗೂ ಹೆಚ್ಚು ಲಾಭವಾಗಲಿದೆ. ಮುಂದಿನ ದಿನಗಳಲ್ಲಿ ಹೋರಾಟ ಅವಶ್ಯವಾದಲ್ಲಿ ಅದಕ್ಕೂ ಸಿದ್ಧ
ಶ್ರೀಮಂತ ದುದ್ದಗಿ ಅಧ್ಯಕ್ಷ ಜಿಲ್ಲಾ ಕಬ್ಬು ಬೆಳೆಗಾರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT