ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಲವ್ ಜಿಹಾದ್ ನಿಯಂತ್ರಣಕ್ಕೆ ಕಾನೂನು: ನಳಿನ್ ಕುಮಾರ್ ಕಟೀಲ್

Last Updated 17 ಫೆಬ್ರುವರಿ 2021, 7:54 IST
ಅಕ್ಷರ ಗಾತ್ರ

ವಿಜಯಪುರ: ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವಂತೆ ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ನಿಯಂತ್ರಣ ಮಾಡುವ ಕಾನೂನನ್ನು ರಾಜ್ಯ ಸರ್ಕಾರ ಜಾರಿಗೆ ತರಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ವಿಜಯಪುರ ನಗರದ ಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಭಾರತೀಯ ಜನತಾ ಪಾರ್ಟಿ ರಾಜ್ಯ ಪ್ರಕೋಷ್ಠಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಅಯೋಧ್ಯೆ ಶ್ರೀ ರಾಮನ ಜನ್ಮ ಸ್ಥಳ ಎಂದು ಬಿಜೆಪಿಯಾಗಲಿ, ಆರ್ ಎಸ್ ಎಸ್ ಆಗಲಿ, ಯಾವುದೇ ಸ್ವಾಮೀಜಿಗಳು ಹೇಳಿದ್ದಲ್ಲ, ಈ ದೇಶದ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಾಗಿದೆ. ಆದರೆ, ಅಯೋಧ್ಯೆಯ ವಿವಾದಿತ ಪ್ರದೇಶ ಎನ್ನುವ ಮೂಲಕ ಸಿದ್ದರಾಮಯ್ಯ ಅವರು ಸುಪ್ರೀಂಕೋರ್ಟ್ ಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದರು.

ಇದುವರೆಗೆ ಕಾಂಗ್ರೆಸ್ ಗೆ ಸ್ವಾತಂತ್ರ್ಯ ಸಂಗ್ರಾಮದ ಪುಣ್ಯ ಇತ್ತು, ಮಹಾತ್ಮ ಗಾಂಧಿಯವರ ಪುಣ್ಯ ಇತ್ತು. ಆದರೆ, ಈಗ ಕಾಂಗ್ರೆಸ್ ಅಕೌಂಟ್ ಖಾಲಿಯಾಗಿದೆ ಎಂದರು.

ರಾಜ್ಯದಲ್ಲಿ ಈ ಹಿಂದೆ ಡ್ರಗ್ಸ್ ಹಣದಲ್ಲಿ ಸರ್ಕಾರ ನಡೆಯುತ್ತಿತ್ತು. ಆದರೆ, ಯಡಿಯೂರಪ್ಪ ಸರ್ಕಾರ ರಾಜ್ಯವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಿದೆ ಎಂದರು.

ದೇಶದಲ್ಲಿ ಗಲಭೆ ಸೃಷ್ಟಿಸಲು, ಮೋದಿ ಹೆಸರು ಕೆಡಿಸಲು, ಕಳಂಕ ತರಲು ಷಡ್ಯಂತ್ರ ನಡೆದಿದೆ. ಆದರೆ, ಇಂತಹ ಷಡ್ಯಂತ್ರಗಳಿಗೆ, ಹೋರಾಟಗಳಿಗೆ ಮೋದಿ ಹೆದರುವುದಿಲ್ಲ ಎಂದರು.

ಬಿಜೆಪಿ ದೇಶದಲ್ಲಿ ಕೇವಲ ಮತ ಪರಿವರ್ತನೆಯ ರಾಜಕಾರಣ ಮಾಡುತ್ತಿಲ್ಲ, ರಾಷ್ಟ್ರ ಪರಿವರ್ತನೆಯ ರಾಜಕಾರಣ ಮಾಡುತ್ತಿದೆ ಎಂದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ, ತುರ್ತು ಪರಿಸ್ಥಿತಿ ಹೇರುವ ಮೂಲಕ ರಾಷ್ಟ್ರ ಭಕ್ತರನ್ನು ಜೈಲಿಗೆ ಹಾಕಿದೆ, ಭ್ರಷ್ಟಾಚಾರ ಮಾಡಿದೆ, ಭಯೋತ್ಪಾದಕರಿಗೆ ಬಿರಿಯಾನಿ ಕೊಟ್ಟಿದೆ, ಸಿಖ್ಖರ ಕಗ್ಗೊಲೆ ಮಾಡಿದೆ, ಕುಟುಂಬ ರಾಜಕಾರಣ ಮಾಡಿದೆ. ಅಧಿಕಾರ ಇಲ್ಲದಿರುವಾಗ ಕಾಂಗ್ರೆಸ್ ಗಲಭೆ ಮಾಡುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ದೇಶದಲ್ಲಿ ವಿರೋಧ ಪಕ್ಷವಾಗಲೂ ನಾಲಾಯಕ್ ಆಗಿದೆ ಎಂದರು.

ವಿವಿಧ ಸಮಾಜಗಳನ್ನು, ಯುವ ಜನರನ್ನು, ಹೊಸಬರನ್ನು ಪಕ್ಷಕ್ಕೆ ಕರೆತರುವ ಕೆಲಸ ಬಿಜೆಪಿ ಪ್ರಕೋಷ್ಠಗಳಿಂದ ಆಗಬೇಕು ಎಂದರು.

ಧಾರವಾಡ, ಬೆಳಗಾವಿ, ಕಲಬುರ್ಗಿ, ಬಳ್ಳಾರಿ ಸೇರಿದಂತೆ ರಾಜ್ಯದ ನಾಲ್ಕು ಪ್ರಕೋಷ್ಠಗಳ 14 ಜಿಲ್ಲೆಗಳ 640 ಸಂಚಾಲಕರು, ಸಹ ಸಂಚಾಲಕರು ಪಾಲ್ಗೊಂಡಿದ್ದಾರೆ.

ಸಂಸದ ರಮೇಶ ಜಿಗಜಿಗಣಿ, ಭಾನುಪ್ರಕಾಶ್, ಶಾಸಕರಾದ ಪಿ.ರಾಜು, ಸೋಮನಗೌಡ ಪಾಟೀಲ ಸಾಸನೂರ, ಶಿವಯೋಗಿ ಸ್ವಾಮಿ, ಆರ್.ಎಸ್. ಪಾಟೀಲ ಕುಚಬಾಳ, ಸಂಜೀವ ಬೆಟದೂರ, ಚಂದ್ರಶೇಖರ ಕವಟಗಿ ಇದ್ದಾರೆ.

ಬಿಜೆಪಿ ಕಾರ್ಯಕರ್ತರು
ಬಿಜೆಪಿ ಕಾರ್ಯಕರ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT