ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್ ಕ್ಯಾಂಪಸ್‌ನಲ್ಲಿ ‘ಕೃಷಿ ವಿಹಾರ’

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇನ್‌ವಿಕ್ಟಸ್‌–2019
Last Updated 29 ಮಾರ್ಚ್ 2019, 19:46 IST
ಅಕ್ಷರ ಗಾತ್ರ

ವಿಜಯಪುರ:ಪ್ರತಿಷ್ಠಿತ ಬಿಎಲ್‌ಡಿಇ ಸಂಸ್ಥೆಯ ನಗರದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್‌ನಲ್ಲಿ ‘ಕೃಷಿ ವಿಹಾರ’ ಲೋಕವೊಂದು ಸೃಷ್ಟಿಗೊಂಡಿದೆ.

ಸಿವಿಲ್‌ ವಿಭಾಗದ ಅಂತಿಮ ಸೆಮಿಸ್ಟರ್‌ನ ವಿದ್ಯಾರ್ಥಿಗಳ ಮೂಸೆಯಲ್ಲಿ ಅರಳಿರುವ ಈ ‘ಕೃಷಿ ವಿಹಾರ’ ಎಲ್ಲರನ್ನೂ ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಪ್ರತಿ ವರ್ಷವೂ ಕಾಲೇಜಿನ ಕ್ಯಾಂಪಸ್‌ನಲ್ಲಿ ಇನ್‌ವಿಕ್ಟಸ್‌ ಕಾರ್ಯಕ್ರಮ ಎರಡು ದಿನ ನಡೆಯಲಿದೆ. ಪ್ರತಿ ಬಾರಿಯೂ ವಿಶೇಷತೆಯನ್ನೇ ಪ್ರದರ್ಶಿಸುವುದು ಇಲ್ಲಿನ ವಿಶೇಷ. ಈ ಬಾರಿಯ ಇನ್‌ವಿಕ್ಟಸ್‌–2019 ಶುಕ್ರವಾರ ಆರಂಭಗೊಂಡಿದ್ದು, ಶನಿವಾರ ಮುಸ್ಸಂಜೆ ಸಮಾರೋಪಗೊಳ್ಳಲಿದೆ.

ಕೃಷಿ ಲೋಕದಲ್ಲೊಂದು ಸುತ್ತು

ಕೃಷಿ ವಿಹಾರ ಲೋಕದೊಳಗೆ ಕಾಲಿಡುವ ಮುನ್ನವೇ ಅಲಂಕೃತ ಎತ್ತಿನ ಬಂಡಿ, ರೈತನ ಪ್ರತಿಕೃತಿ, ಗೋಡೆಯ ಮೇಲಿನ ‘ಫೀಡಿಂಗ್‌ ದ ಫ್ಯೂಚರ್‌’ ಚಿತ್ರ ಕಲಾಕೃತಿ, ಬಳಸಿದ ಎಳನೀರಿನ ತ್ಯಾಜ್ಯದೊಳಗೆ ಗಿಡಗಳನ್ನು ಬೆಳೆಸಿರುವ ಪರಿ, ಕಟ್ಟಿಗೆಯ ತುಂಡುಗಳಿಂದ ಹೊಲದಲ್ಲಿ ನಿರ್ಮಿಸುವ ಜೋಪಡಿಯ ಮಾದರಿ ಕಣ್ಮನ ಸೆಳೆಯುತ್ತವೆ.

ಕೃಷಿ ಲೋಕದೊಳಗಿನ ಆರಂಭದಲ್ಲೇ ಕೃಷಿಕರ ವೇಷಭೂಷಣ ತೊಟ್ಟು ಮೂರ್ತಿಗಳಂತೆ ನಿಂತಿದ್ದ ಐವರು ಯುವಕ–ಯುವತಿಯರು ಅಚ್ಚರಿ ಮೂಡಿಸಿದರು. ಇಲ್ಲಿಂದ ಆರಂಭಗೊಳ್ಳುವ ಕೃಷಿ ಜಗತ್ತು ವೈವಿಧ್ಯಮಯ ಮಾಹಿತಿ ಕಣಜವಾಗಿದೆ.

ಕೃಷಿಯಲ್ಲಿ ಮಹಿಳೆಯ ಪಾತ್ರ, ಬಳಕೆಯಾಗುವ ಸಲಕರಣೆಗಳು, ಮಣ್ಣಿನ ಪರೀಕ್ಷೆ, ಜಿಲ್ಲೆಯ ವಿವಿಧ ಭಾಗದ 17 ಮಣ್ಣಿನ ಮಾದರಿ, ಮಳೆ ನೀರು ಕೊಯ್ಲು, ಇದರಡಿಯೇ ಬೆಳೆಸುವ ಉದ್ಯಾನ, ಸಸಿಗಳನ್ನು ಕಸಿ ಮಾಡುವಿಕೆ, ಸರ್ಕಾರದ ಸಕಲ ಕೃಷಿ ಯೋಜನೆಗಳು, ಸಿರಿಧಾನ್ಯಗಳೊಂದಿಗೆ ರೂಪಿಸಿದ್ದ ರಾಶಿಯ ಕಣ ಎಲ್ಲರ ಚಿತ್ತವನ್ನು ಒಮ್ಮೆ ತನ್ನತ್ತ ಸೆಳೆಯಲಿವೆ.

ಮಳೆ ನಕ್ಷತ್ರಗಳು, ಯಾವ್ಯಾವ ಮಣ್ಣಿನಲ್ಲಿ ಯಾವ್ಯಾವ ಬೆಳೆ ಬೆಳೆಯಬಹುದು ಎಂಬ ಚಿತ್ರಣ, ಈಚೆಗೆ ಪರಿಚಿತಗೊಳ್ಳುತ್ತಿರುವ ಮೊಬೈಲ್ ಕೃಷಿ ಆ್ಯಪ್‌ಗಳು, ಸಾವಯವ ಕೃಷಿಗೆ ತಂತ್ರಜ್ಞಾನ ಸ್ಪರ್ಶದ ಚಿತ್ರಣವೂ ಈ ಪ್ರದರ್ಶನದಲ್ಲಿ ಬಿಂಬಿತಗೊಂಡಿದೆ.

ಬೆಳೆ, ಮಣ್ಣಿನ ರೋಗದ ಮಾಹಿತಿ, ನೀರಾವರಿಯ ಚಿತ್ರಣ, ಡ್ರೋಣ್‌ ಮೂಲಕ ಬೆಳೆಯ ನಿರ್ವಹಣೆ, ಸೋಲಾರ್‌ ಔಷಧಿ ಸಿಂಪಡಣೆ ಯಂತ್ರ, ವಿಜಯಪುರ ಜಿಲ್ಲೆಯ ಜಲಸಂಪನ್ಮೂಲ, ಕೃಷಿಯ ಮಾಹಿತಿ, ಅಂತರ್ಜಲ ಮರುಪೂರಣ, ಮಣ್ಣಿನ ಸವಕಳಿ ತಡೆಯುವಿಕೆಯ ಮಾಹಿತಿ, ಸೋಲಾರ್ ಬೇಲಿ ಬಳಿ ಎಚ್ಚರಿಕೆಯ ಸಂದೇಶ ನೀಡುವ ಯಂತ್ರದ ಆವಿಷ್ಕಾರ, ಮೊಬೈಲ್ ಸಿಮ್ ಮೂಲಕ ನೀರೆತ್ತುನ ಪಂಪಿನ ನಿರ್ವಹಣೆಯ ಪ್ರಾತ್ಯಕ್ಷಿಕೆ ಕೃಷಿ ವಿಹಾರದ ಪ್ರಮುಖ ಆಕರ್ಷಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT