ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ಕಮಹಾದೇವಿ ಮಹಿಳಾ ವಿವಿ ಘಟಿಕೋತ್ಸವ: ರೈತನ ಪುತ್ರಿಗೆ ಕನ್ನಡದಲ್ಲಿ ಚಿನ್ನದ ಫಸಲು

Published 11 ಮಾರ್ಚ್ 2024, 16:15 IST
Last Updated 11 ಮಾರ್ಚ್ 2024, 16:15 IST
ಅಕ್ಷರ ಗಾತ್ರ

ವಿಜಯಪುರ: ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ 15ನೇ ಘಟಿಕೋತ್ಸವದಲ್ಲಿ ಕನ್ನಡ ಅಧ್ಯಯನ ವಿಭಾಗದ ಕನ್ನಡ ಸ್ನಾತಕೋತ್ತರ ಪದವಿಧರೆ ಆರತಿ ಸವ್ವಾಸೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಂದ ನಾಲ್ಕು ಚಿನ್ನದ ಪದಕ ಹಾಗೂ ಎರಡು ನಗದು ಪಾರಿತೋಷಕ ಸ್ವೀಕರಿಸಿ ಚಿನ್ನದ ನಗೆ ಬೀರಿದರು.

ಜಮಖಂಡಿ ತಾಲ್ಲೂಕಿನ ರಹಿಮತ್‌ಪುರದ ಲಕ್ಷಣ ಸವ್ವಾಸೆ ಮತ್ತು ಪೂಲಾಬಾಯಿ ರೈತ ದಂಪತಿ ಪುತ್ರಿ ಆರತಿ, ಕನ್ನಡದಲ್ಲೇ ಪಿಎಚ್.ಡಿ ಮಾಡಿ, ಭವಿಷ್ಯದಲ್ಲಿ ಉಪನ್ಯಾಸಕಿಯಾಗಬೇಕು ಎಂಬ ಗುರಿ ಇಟ್ಟುಕೊಂಡಿದ್ದಾರೆ. 

‘ಮನೆಯಲ್ಲಿ ಬಡತನ ಇದ್ದರೂ ಅಪ್ಪ, ಅಮ್ಮನ ಪ್ರೋತ್ಸಾಹದಿಂದ ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ಇದ್ದು ಕಷ್ಟಪಟ್ಟು ಓದಿದ್ದೇನೆ. ಹಳ್ಳಿಯಿಂದ ಬಂದವಳಾದ ನಾನು ಈ ಸಾಧನೆ ಮಾಡಲು ವಿಶ್ವವಿದ್ಯಾಲಯದ ಸುರಕ್ಷಿತ ಶೈಕ್ಷಣಿಕ ಸ್ನೇಹಿ ವಾತಾವರಣವೇ ಕಾರಣ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ನಾನು ಶಾಲೆ ಕಲಿತಿಲ್ಲ. ಆದರೆ, ನನ್ನ ನಾಲ್ಕು ಮಂದಿ ಮಕ್ಕಳಿಗೂ ಅವರಿಷ್ಟ ಬಂದ ವಿಷಯ ಕಲಿಯಲು ಅವಕಾಶ ಕಲ್ಪಿಸಿದೆ. ಮಗಳು ಚಿನ್ನದ ಪದಕ ಪಡೆದಿರುವುದಕ್ಕೆ ಖುಷಿಯಾಗಿದೆ’ ಎಂದು ಆರತಿ ಸವ್ವಾಸೆ ಅವರ ತಂದೆ ಲಕ್ಷ್ಮಣ ಸವ್ವಾಸೆ ಸಂತಸ ವ್ಯಕ್ತಪಡಿಸಿದರು.

ಆಹಾರ ಸಂಸ್ಕರಣೆಯಲ್ಲಿ ನಾಲ್ಕು ಚಿನ್ನ

‘ಆಹಾರ ಸಂಸ್ಕರಣೆ ಮತ್ತು ಪೋಷಕಾಂಶ’ ಎಂಬ ಕೋರ್ಸ್‌ ಇದೆ ಎಂಬುದೇ ಬಹುತೇಕರಿಗೆ ಅರಿವಿಲ್ಲ. ಈ ಕೋರ್ಸ್‌ ಮಾಡಿದವರಿಗೆ ಭವಿಷ್ಯದಲ್ಲಿ ಹೆಚ್ಚಿನ ಉದ್ಯೋಗವಾಶಗಳಿವೆ ಎಂಬುದು ಈ ಕೋರ್ಸ್‌ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಬೆಳಗಾವಿಯ ಅನುಷಾ ತಕ್ಕನ್ನವರ ಅಭಿಪ್ರಾಯ.

ತಂದೆ ಆನಂದ ತಕ್ಕನ್ನವರ ಅವರನ್ನು ಬಾಲ್ಯದಲ್ಲೇ ಕಳೆದುಕೊಂಡಿರುವ ಅನುಷಾ, ಸದ್ಯ ತಾಯಿ ಸುಶೀಲಾ ಮತ್ತು ಅಜ್ಜ, ಅಜ್ಜಿಯ ಆಶ್ರಯದಲ್ಲಿ ಇದ್ದಾರೆ. 

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಚಿನ್ನದ ಪದಕ ಬರುತ್ತದೆ ಎಂಬ ನಿರೀಕ್ಷೆ ಇತ್ತು. ಆಹಾರ ಸಂಸ್ಕರಣೆ ಮತ್ತು ಪೋಷಕಾಂಶ ವಿಷಯಕ್ಕೆ ಸಂಬಂಧಿಸಿದಂತೆ ಪಿಎಚ್‌.ಡಿ ಮಾಡುತ್ತೇನೆ. ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗಿಯಾಗಬೇಕೆಂಬ ಆಶಯ ಇದೆ’ ಎಂದರು.

ಪತ್ರಿಕೋದ್ಯಮದಲ್ಲಿ ಎರಡು ಚಿನ್ನ:

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದಲ್ಲಿ ಎರಡು ಚಿನ್ನದ ಪದಕವನ್ನು ಬಾಚಿಕೊಂಡ ಲಕ್ಷ್ಮಿ ಬಾಗಲಕೋಟಿ, ಸದ್ಯ ಬೆಂಗಳೂರಿನಲ್ಲಿ ಖಾಸಗಿ ಸುದ್ದಿ ವಾಹಿನಿಯಲ್ಲಿ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಚಿನ್ನದ ಪದಕ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ, ಉತ್ತಮ ಸಾಧನೆ ಮಾಡುತ್ತೇನೆ ಎಂಬ ನಂಬಿಕೆ ಇತ್ತು. ಈ ಚಿನ್ನದ ಪದಕಗಳನ್ನು ನನ್ನ ಓದಿಗೆ ಕಾರಣರಾದ ಇತ್ತೀಚೆಗೆ ನಿಧನರಾದ ತಂದೆಗೆ ಅರ್ಪಿಸುತ್ತೇನೆ’ ಎಂದು ಭಾವುಕರಾದರು.

‘ಕುಟುಂಬದ ಪ್ರೋತ್ಸಾಹ ಹಾಗೂ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರ ಸಲಹೆ, ಮಾರ್ಗದರ್ಶನದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ರಾಜ್ಯದ ಬೇರೆ ವಿವಿಗಳಲ್ಲಿ ಇರದಷ್ಟು ಅತ್ಯಾಧುನಿಕ ಕಲಿಕಾ ಸೌಲಭ್ಯಗಳು ನಮ್ಮ ವಿವಿಯ ಪತ್ರಿಕೋದ್ಯಮ ವಿಭಾಗದಲ್ಲಿ ಇದೆ ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

80 ಚಿನ್ನದ ಪದಕ ವಿತರಣೆ:

ಘಟಿಕೋತ್ಸವದಲ್ಲಿ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 77 ವಿದ್ಯಾರ್ಥಿನಿಯರಿಗೆ 80 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. 20 ವಿದ್ಯಾರ್ಥಿನಿಯರಿಗೆ ನಗದು ಪಾರಿತೋಷಕ ಹಾಗೂ 48 ವಿದ್ಯಾರ್ಥಿನಿಯರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು.

ಗೌರವ ಡಾಕ್ಟರೇಟ್‌ ಪ್ರದಾನ:

ಕಲಬುರ್ಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಡಾ.ದಾಕ್ಷಾಯಿಣಿ ಎಸ್. ಅಪ್ಪಾ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್‌  ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

ಮುಂಬೈನ ‘ಸರ್ಫೋಜಿರಾಜೆ ಭೋಸಲೆ ಸೆಂಟರ್’ ನಡೆಸುತ್ತಿರುವ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿರುವ ಡಾ.ಸಂಧ್ಯಾ ಪುರೇಚ ಅವರ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಯಿತು.

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ 15ನೇ ಘಟಿಕೋತ್ಸವದಲ್ಲಿ ಕಲಬುರ್ಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಡಾ.ದಾಕ್ಷಾಯಿಣಿ ಎಸ್. ಅಪ್ಪಾ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್‌  ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಕುಲಸಚಿವ ಶಂಕರಗೌಡ ಸೋಮನಾಳ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್ ಇದ್ದಾರೆ–ಪ್ರಜಾವಾಣಿ ಚಿತ್ರ
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ 15ನೇ ಘಟಿಕೋತ್ಸವದಲ್ಲಿ ಕಲಬುರ್ಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಡಾ.ದಾಕ್ಷಾಯಿಣಿ ಎಸ್. ಅಪ್ಪಾ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್‌  ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಕುಲಸಚಿವ ಶಂಕರಗೌಡ ಸೋಮನಾಳ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್ ಇದ್ದಾರೆ–ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT