ಶನಿವಾರ, ಸೆಪ್ಟೆಂಬರ್ 25, 2021
22 °C
ಮುಗಿದ ಹೆಸರು ಬಿತ್ತನೆ ಅವಧಿ; ತೊಗರಿ, ಮೆಕ್ಕೆಜೋಳ, ಸೂರ್ಯಕಾಂತಿ ಬಿತ್ತನೆಗೆ ಮುಂದಾದ ರೈತರು

ಮಳೆ ಕೊರತೆ; ಮುಂಗಾರು ಬಿತ್ತನೆಗೆ ಹಿನ್ನೆಡೆ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಬಿತ್ತನೆಗೆ ಹಿನ್ನೆಡೆಯಾಗಿದೆ.

ಮೇ ನಲ್ಲಿ ವಾಡಿಕೆ ಮಳೆ ಪ್ರಮಾಣ 63 ಎಂಎಂ. ಆದರೆ, ಆ ತಿಂಗಳಿನಲ್ಲಿ ವಾಡಿಕೆಗಿಂತ ಅಧಿಕ ಅಂದರೆ, 71 ಎಂಎಂ ಮಳೆಯಾಗಿದೆ. ಜೂನ್‌ನಲ್ಲಿ 95 ಎಂಎಂ ಮಳೆಯಾಗಬೇಕಿತ್ತು. ಆದರೆ, ಇದುವರೆಗೆ ಕೇವಲ 60 ಎಂಎಂ ಮಳೆಯಾಗಿದೆ. ಅದರಲ್ಲೂ ಸಿಂದಗಿ ಮತ್ತು ಇಂಡಿ ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಕೊರತೆ ತೀವ್ರವಾಗಿದೆ.

ಮೇ ತಿಂಗಳಿನಲ್ಲಿ ನಿರೀಕ್ಷೆ ಮೀರಿ ಮಳೆಯಾದ ಪರಿಣಾಮ ಬಹುತೇಕ ರೈತರು ಕೊರೊನಾ ಸಂಕಷ್ಟದ ನಡುವೆಯೂ ತಮ್ಮ ಹೊಲಗಳನ್ನು ಉತ್ತಿ, ಬಿತ್ತನೆಗೆ ಸಜ್ಜುಗೊಳಿಸಿದ್ದರು. ಆದರೆ, ಜೂನ್‌ 3ರಿಂದ ಹದ ಮಳೆಯಾಗದೇ ಇರುವುದರಿಂದ ಬಿತ್ತನೆಗೆ ಅದರಲ್ಲೂ ಹೆಸರು ಬಿತ್ತನೆ ಸಾಧ್ಯವಾಗಿಲ್ಲ.

‘ಈಗಾಗಲೇ ಹೆಸರು ಬಿತ್ತನೆ ಅವಧಿ ಮುಗಿದಿದ್ದು, ಮಳೆಯ ಕೊರತೆಯಿಂದ ಬಿತ್ತಲಾಗಲಿಲ್ಲ. ಮುಂದಿನ ದಿನಗಳಲ್ಲಿ ಮಳೆ ಆಗಲಿದೆ ಎಂಬ ವಿಶ್ವಾಸದಲ್ಲಿ ತೊಗರಿ, ಸೂರ್ಯಕಾಂತಿ, ಸಜ್ಜೆ, ಹುರುಳಿ ಬಿತ್ತನೆ ಮಾಡುತ್ತಿದ್ದೇವೆ. ಮಳೆ ಆಗದಿದ್ದರೆ ಬೀಜ, ಗೊಬ್ಬಕ್ಕೆ ಹಾಕಿದ ಹಣ ಮಣ್ಣಿಗೆ ಹೋಗುತ್ತದೆ. ನಸಿಬು ಚಲೋ ಇದ್ದರೆ ಫಸಲು ಬರುತ್ತದೆ’ ಎನ್ನುತ್ತಾರೆ ಬೂದಿಹಾಳ ಗ್ರಾಮದ ರೈತ ದಯಾನಂದ ಸೋಮನಾಳ.

ಪರ್ಯಾಯ ಬೆಳೆಗೆ ಸಲಹೆ:

ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್ ಹೆಸರು ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಇದುವರೆಗೆ ಕೇವಲ ಶೇ 4ರಷ್ಟು ಮಾತ್ರ ಬಿತ್ತನೆಯಾಗಿದೆ. ಅಲ್ಲದೇ, ಹೆಸರು ಬಿತ್ತನೆ ಅವಧಿಯೂ ಮುಗಿದಿದ್ದು, ರೈತರು ನಿರಾಶೆಯಾಗಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ರಾಜಶೇಖರ ವಿಲಿಯಮ್ಸ್‌.

ಹೆಸರು ಬಿತ್ತನೆಗೆ ಸಜ್ಜುಗೊಳಿಸಿದ್ದ ಹೊಲದಲ್ಲಿ ರೈತರು ಸೂರ್ಯಕಾಂತಿಯನ್ನು ಬಿತ್ತನೆ ಮಾಡುವುದು ಉತ್ತಮ. ಸಾಲಿನಿಂದ ಸಾಲಿಗೆ 18 ರಿಂದ 24 ಇಂಚಿನ ಬದಲು 36 ಇಂಚು ಅಂತರದಲ್ಲಿ ಬಿತ್ತನೆ ಮಾಡಬೇಕು. ಒಂದು ವೇಳೆ ಮಳೆ ಕಡಿಮೆಯಾದರೂ ಇಳುವರಿ ಚನ್ನಾಗಿ ಬರಲಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಅದೇ ರೀತಿ ತೊಗರಿಯನ್ನು ಸಾಲಿನಿಂದ ಸಾಲಿಗೆ 6 ಅಡಿ ಅಂತರದಲ್ಲಿ ಬಿತ್ತನೆ ಮಾಡಬೇಕು. ಅಲ್ಲದೇ, ಬೀಜೋಪಚಾರ ಮಾಡಬೇಕು ಎಂದಿದ್ದಾರೆ.

ಸೂರ್ಯಕಾಂತಿ, ತೊಗರಿ ಮತ್ತು ಮೆಕ್ಕೆಜೋಳ ಬಿತ್ತನೆಗೆ ಜುಲೈ ಅಂತ್ಯದ ವರೆಗೆ ಅವಕಾಶವಿದೆ ಎಂದು ಅವರು ತಿಳಿಸಿದರು.

4.60 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಮತ್ತು 39 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಹಾಗೂ 5100 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ ಬಿತ್ತನೆ ಗುರಿ ಇದೆ ಎಂದು ಹೇಳಿದರು.

* ಬೀಜ, ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ಆರಂಭದಲ್ಲಿ ರೈತರು ಕೊಂಡೊಯ್ದರು. ಆದರೆ, ಜೂನ್‌ನಲ್ಲಿ ಮಳೆ ಕೊರತೆ ಆಗಿರುವುದರಿಂದ ಬೀಜ, ಗೊಬ್ಬರ ಖರೀದಿಗೆ ರೈತ ಸಂಪರ್ಕ ಕೇಂದ್ರದತ್ತ ರೈತರು ಬರುತ್ತಿಲ್ಲ.

– ಡಾ.ರಾಜಶೇಖರ ವಿಲಿಯಮ್ಸ್‌, ಜಂಟಿ ಕೃಷಿ ನಿರ್ದೇಶಕ, ವಿಜಯಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು