ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಾಪುರ ಮೀಸಲು ಲೋಕಸಭಾ ಕ್ಷೇತ್ರ: ಬಿಜೆಪಿ, ಕಾಂಗ್ರೆಸ್ ಜಿದ್ದಾಜಿದ್ದಿನ ಕಾಳಗ

ರಮೇಶ ನಾಯಿಕ
Published 5 ಮೇ 2024, 5:08 IST
Last Updated 5 ಮೇ 2024, 5:08 IST
ಅಕ್ಷರ ಗಾತ್ರ

ಸೋಲಾಪುರ: ಸೋಲಾಪುರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಒಟ್ಟು 13 ಸ್ಪರ್ಧಿಗಳು ಕಣದಲ್ಲಿ ಇದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಬಿಜೆಪಿಯ ರಾಷ್ಟ್ರೀಯ ಯುವ ಮೋರ್ಚಾ ಉಪಾಧ್ಯಕ್ಷ ರಾಮ ಸಾತಪುತೆ, ಕಾಂಗ್ರೆಸ್‌ನ ಸೋಲಾಪುರ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕಿ ಪ್ರಣಿತಿ ಸಿಂಧೆ ನಡುವೆ ಪೈಪೋಟಿ ಏರ್ಪಟ್ಟಿದೆ.

ಬಹುಜನ ಆಘಾಡಿ ಮತ್ತು ಎಂಐಎಂ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದು, ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸಿರುವುದು ಕಣದಲ್ಲಿ ಜಿದ್ದಾಜಿದ್ದಿಗೆ ಕಾರಣವಾಗಿದೆ.

ಬಿಜೆಪಿಯು 2014ರಿಂದ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದರೂ ಅಭ್ಯರ್ಥಿ ಬದಲಾವಣೆ 2024ರಲ್ಲೂ ಮುಂದುವರಿಸಿದೆ. ಈ ಬಾರಿ ಬಿಜೆಪಿಯು ಮಾಳಸಿರಸ ಕ್ಷೇತ್ರದಲ್ಲಿ ಶಾಸಕರಾಗಿರುವ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಉಪಾಧ್ಯಕ್ಷ ರಾಮ ಸಾತಪುತೆಗೆ ಕಣಕ್ಕಿಳಿಸಿದೆ.

ಸ್ಥಳೀಯರಾಗಿರದ ಕಾರಣ ಮತದಾರರನ್ನು ಸೆಳೆಯುವಲ್ಲಿ ರಾಜಕೀಯ ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಇತ್ತೀಚೆಗೆ ಬಂದಿರುವುದು ಮತ್ತಷ್ಟು ಬಲ ತಂದು ಕೊಟ್ಟಿದೆ.

ಕಾಂಗ್ರೆಸ್‌ನಲ್ಲಿ ಬಹಳ ದೀರ್ಘಕಾಲದ ನಂತರ ಹಿರಿಯ ನಾಯಕ ಸುಶೀಲ ಕುಮಾರ ಸಿಂಧೆ ಸ್ಪರ್ಧೆಯಿಂದ ಹಿಂದಕ್ಕೆ ಸರಿದು ತಮ್ಮ ಪುತ್ರಿಯನ್ನು ಕಣಕ್ಕಿಳಿಸಿದ್ದಾರೆ. ಇದಕ್ಕೆ ತಮ್ಮ ವಯೋ ಸಹಜ ಕಾರಣ ಒಂದೆಡೆ ಇದ್ದರೆ, ಮತ್ತೊಂದೆಡೆ ಸತತ ಎರಡು ಬಾರಿ ಸೋಲುಂಡಿರುವ ಹತಾಶೆಯು ಅವರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಚುನಾವಣೆಯಲ್ಲಿ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬ ಮಹಾದಾಸೆಯಿಂದ ತಮ್ಮ ಕ್ಷೇತ್ರವನ್ನು ಪುತ್ರಿಗೆ ಬಿಟ್ಟುಕೊಟ್ಟು ಕ್ಷೇತ್ರದಲ್ಲಿ ಅಧಿಕವಾಗಿರುವ ಯುವ ಸಮುದಾಯವನ್ನು ಸೆಳೆಯಲು ಯೋಜನೆ ರೂಪಿಸಿದ್ದಾರೆ.

ಪ್ರಣಿತಿ ಸಿಂಧೆ ಸೋಲಾಪುರ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದು, ಜನ ಮೆಚ್ಚುಗೆ ಗಳಿಸಿದ್ದಾರೆ ಜೊತೆಗೆ ಸ್ಥಳೀಯರಾಗಿದ್ದು ಜಿಲ್ಲೆಯಾದ್ಯಂತ ಜನ ಸಂಪರ್ಕವನ್ನು ಹೊಂದಿದ್ದಾರೆ.

ಕ್ಷೇತ್ರದಲ್ಲಿ ಚಿರಪರಿಚಿತವಾಗಿರುವುದರ ಜೊತೆಗೆ ಗುರುತರವಾದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ. ಎಲ್ಲಾ ವರ್ಗದ ಜನರ ಜೊತೆಗೆ ಬೆರೆಯುವ ಸ್ವಭಾವವನ್ನು ಹೊಂದಿದ್ದು, ಸಮಾಜದ ಮುಖಂಡರೊಂದಿಗೆ ಸಂಪರ್ಕ ಹೊಂದಿದ್ದಾರೆ. ಕಳೆದ ಎರಡು ಸಲ ಸೋತಿರುವ ಕಾಂಗ್ರೆಸ್‌ಗೆ ಪ್ರಣಿತಿ ಸಿಂಧೆ ಗೆಲುವು ತಂದುಕೊಡುವರೇ ಕಾದು ನೋಡಬೇಕಿದೆ.

ಅಕ್ಕಲಕೋಟ, ದಕ್ಷಿಣ ಸೋಲಾಪುರ, ಪಂಢರಪುರ ಹಾಗೂ ಉತ್ತರ ಸೋಲಾಪುರ ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರಿದ್ದಾರೆ. ಸೋಲಾಪುರ ಸಿಟಿ ಸೆಂಟ್ರಲ್ ಕಾಂಗ್ರೆಸ್ ಇದ್ದರೆ, ಮೋಹೋಳ ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಹೆಚ್ಚು ಶಾಸಕರನ್ನು ಹೊಂದಿದೆ.

ರಾಮ ಸಾತಪುತೆ
ರಾಮ ಸಾತಪುತೆ

ಒಟ್ಟು ಮತದಾರರು: 18, 51,654

ಪುರುಷರು: 8,86,600

ಮಹಿಳೆಯರು:9,64,998

ಲಿಂಗತ್ವ ಅಲ್ಪಸಂಖ್ಯಾತರು: 56 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT