ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೋರಾರ್ಜಿ ವಸತಿ ಶಾಲೆ ನನ್ನ ಕನಸಿನ ಕೂಸು: ಸಂಸದ ರಮೇಶ ಜಿಗಜಿಣಗಿ

Published 16 ಜೂನ್ 2024, 14:15 IST
Last Updated 16 ಜೂನ್ 2024, 14:15 IST
ಅಕ್ಷರ ಗಾತ್ರ

ಸಿಂದಗಿ: ‘ರಾಜ್ಯದ ಸಮಾಜಕಲ್ಯಾಣ ಸಚಿವನಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಜೊತೆ ಜಗಳಾಡಿ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಮೋರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭಿಸುವಲ್ಲಿ ಯಶಸ್ವಿಯಾದೆ. ಈ ಶಾಲೆ ನನ್ನ ಕನಸಿನ ಕೂಸು. ಬಡ ಪ್ರತಿಭಾವಂತ ಮಕ್ಕಳಿಗೆ ಅತ್ಯಂತ ಉಪಯುಕ್ತವಾದ ಗುಣಮಟ್ಟದ ಶಿಕ್ಷಣ ನೀಡುವ ವಸತಿ ಶಾಲೆಯಾಗಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಇಲ್ಲಿಯ ಮಾಂಗಲ್ಯ ಭವನದಲ್ಲಿ ಭೀಮರಾಯಗೌಡ ಬಿರಾದಾರ ಮಾಗಣಗೇರಿ ಫೌಂಡೇಷನ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಈ ಶಾಲೆ ಪ್ರಾರಂಭಿಸಲು ಆಂಧ್ರಪ್ರದೇಶ ರಾಜ್ಯದಲ್ಲಿರುವ ಸರ್ಕಾರಿ ವಸತಿ ಶಾಲೆ ನನಗೆ ಪ್ರೇರಣೆಯಾಗಿತ್ತು. ಅಂತೆಯೇ ಅಲ್ಲಿಯ ಶಾಲೆಯ ಸಮಗ್ರ ಮಾಹಿತಿ ಪಡೆದುಕೊಂಡು ಅದೇ ಮಾದರಿಯ ಶಾಲೆ ನಮ್ಮ ರಾಜ್ಯದಲ್ಲಿ ಪ್ರಾರಂಭಿಸಲು ಕ್ಯಾಬಿನೆಟ್ ನಲ್ಲಿ ವಿರೋಧವಿದ್ದರೂ ಪಟ್ಟು ಹಿಡಿದು ಒಪ್ಪಿಗೆ ಪಡೆದುಕೊಂಡಿದ್ದೆ’ ಎಂದು ವಿವರಿಸಿದರು.

ವಿಜಯಪುರ ವನಶ್ರೀ ಸಂಸ್ಥಾನಮಠದ ಜಯಬಸವ ಕುಮಾರ ಸ್ವಾಮೀಜಿ ಮಾತನಾಡಿ, ‘ಧರ್ಮ ಮತ್ತು ರಾಜಕಾರಣ ಜನಸಾಮಾನ್ಯರಿಗೆ ನ್ಯಾಯ ಒದಗಿಸುವುದಕ್ಕಾಗಿವೆ. ರಾಜಕಾರಣಿಗಳನ್ನು ಭ್ರಷ್ಟರನ್ನಾಗಿಸುವವರು ಮತದಾರರೇ. ಚುನಾವಣೆಗಳಲ್ಲಿ ಹಣ ಹಂಚುವ ರಾಜಕಾರಣಿಗಳೇ ಜಾಸ್ತಿ. ಸಿಂದಗಿ ಭಾಗದಲ್ಲಿ ಚುನಾವಣೆಯಲ್ಲಿ ಹಣ ಹಂಚುವಿಕೆ ಸಾಮಾನ್ಯವಾಗಿ ಬಿಟ್ಟಿದೆ’ ಎಂದು ವಿಷಾದಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ‘ರಮೇಶ ಜಿಗಜಿಣಗಿಯವರ ಮಹತ್ವಾಕಾಂಕ್ಷೆ ಸರ್ಕಾರಿ ಶಾಲೆ ಮೋರಾರ್ಜಿ ದೇಸಾಯಿ ವಸತಿ ಶಾಲೆ ಇಡೀ ದೇಶಕ್ಕೆ ಮಾದರಿಯಾಗಿದೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿ ಮಾಡಿದ ಸಾಧನೆ ಪ್ರತಿಯೊಬ್ಬ ವಿದ್ಯಾರ್ಥಿಗೆ ಆತ್ಮವಿಶ್ವಾಸ ಮೂಡಿಸಲು ಪ್ರೇರಣೆಯಾಗಿದೆ’ ಎಂದು ಹೇಳಿದರು.

ಪ್ರಸ್ತುತ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಅಂಕಿತಾ ಕೊಣ್ಣೂರ ಮಾತನಾಡಿದರು.

ಸಾಹಿತಿ ಶಿವಶರಣಪ್ಪ ಶಿರೂರ ಉಪನ್ಯಾಸ ನೀಡಿದರು. ಆಲಮೇಲ ವಿರಕ್ತಮಠದ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಮಾತನಾಡಿದರು.


ಮಾಜಿ ಶಾಸಕ ರಮೇಶ ಭೂಸನೂರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಅಶೋಕ ಮನಗೂಳಿ ಸಹೋದರ ಮುತ್ತು ಮನಗೂಳಿ, ಕನ್ನೊಳ್ಳಿ ಹಿರೇಮಠದ ಶ್ರೀ, ಯಂಕಂಚಿ ಹಿರೇಮಠದ ಶ್ರೀಗಳು, ಫೌಂಡೇಷನ್ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಸಿದ್ಧಲಿಂಗ ಚೌಧರಿ, ಗುರನಗೌಡ ಬಿರಾದಾರ, ಸಿ.ಪಿ.ಐ ಪರುಶರಾಮ ಮನಗೂಳಿ ಹಾಗೂ ಮಾಗಣಗೇರಿ ಬಿರಾದಾರ ಕುಟುಂಬದ ಸದಸ್ಯರು ಇದ್ದರು. ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಆಲಮೇಲ ಮತ್ತು ಸಿಂದಗಿ ತಾಲ್ಲೂಕಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅಧಿಕ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.

ಸಾಧನೆಗೆ ಪ್ರಯತ್ನ ಪರಿಶ್ರಮ ಮುಖ್ಯ. ಬಡತನ ಸಾಧನೆಗೆ ಅಡ್ಡಿಯಾಗಲಾರದು.
ಅಂಕಿತಾ ಬಸಪ್ಪ ಕೊಣ್ಣೂರ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ವಿಜೇತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT