ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯ ಸಾರಿಗೆ: ಬಾರದ ಪ್ರಯಾಣಿಕ, ಅರ್ಧದಷ್ಟು ಆದಾಯ ಖೋತಾ

ಈಶಾನ್ಯ ಸಾರಿಗೆ ವಿಜಯಪುರ ವಿಭಾಗದ 453 ಮಾರ್ಗಗಳಲ್ಲಿ ಬಸ್‌ ಸಂಚಾರ ಪುನರಾರಂಭ
Last Updated 1 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ಬಹುತೇಕ ಮಾರ್ಗಗಳಲ್ಲಿ ಬಸ್‌ ಸಂಚಾರ ಆರಂಭವಾಗಿವೆ. ಆದರೆ, ನಿರೀಕ್ಷಿತ ಸಂಖ್ಯೆಯಲ್ಲಿ ಪ್ರಯಾಣಿಕರು ಬಾರದೇ ಇರುವುದರಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗವು ಆದಾಯ ಕೋತಾ ಅನುಭವಿಸುತ್ತಿದೆ.

ಕೊರೊನಾ ಪೂರ್ವದಲ್ಲಿ ಪ್ರತಿ ದಿನಕ್ಕೆ ₹70 ಲಕ್ಷದಿಂದ ₹ 80 ಲಕ್ಷ ಆದಾಯ ಗಳಿಕೆಯಾಗುತ್ತಿತ್ತು. ಆದರೆ, ಸದ್ಯ ₹30 ಲಕ್ಷದಿಂದ ₹ 35 ಲಕ್ಷ ಮಾತ್ರ ಆದಾಯ ಬರುತ್ತಿದೆ ಎಂದು ಸಂಸ್ಥೆಯ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊರೊನಾ ಲಾಕ್‌ಡೌನ್‌ ಪೂರ್ವದಲ್ಲಿ ವಿಜಯಪುರ ವಿಭಾಗದಿಂದ 701 ಮಾರ್ಗಗಳಲ್ಲಿ ಬಸ್‌ ಸಂಚರಿಸುತ್ತಿದ್ದವು. ಲಾಕ್‌ಡೌನ್‌ ತೆರವಾದ ಬಳಿಕ ಹಂತಹಂತವಾಗಿ ಇದುವರೆಗೆ 453 ಮಾರ್ಗಗಳಲ್ಲಿ ಬಸ್‌ ಸಂಚಾರ ಪುನರಾರಂಭವಾಗಿದೆ ಎಂದರು.

ಜಿಲ್ಲೆಯಲ್ಲಿ 342 ಗ್ರಾಮೀಣ ಮಾರ್ಗಗಳಿದ್ದು, ಸದ್ಯ 200 ಮಾರ್ಗಗಳಲ್ಲಿ ಮಾತ್ರ ಬಸ್‌ ಸಂಚಾರ ಆರಂಭವಾಗಿದೆ. ಉಳಿದ ಮಾರ್ಗಗಳಲ್ಲೂ ಈ ತಿಂಗಳಲ್ಲಿ ಸಂಚಾರ ಆರಂಭಿಸಲಾಗುವುದು ಎಂದು ಹೇಳಿದರು.

ವಿಜಯಪುರ ನಗರ ಸಾರಿಗೆಗೆ ಸಂಬಂಧಿಸಿದಂತೆ ಒಟ್ಟು 63 ಬಸ್‌ಗಳ ಪೈಕಿ ಸದ್ಯ ಶಾಲಾ,ಕಾಲೇಜುಗಳು ಪುನರಾರಂಭವಾಗದೇ ಇರುವುದರಿಂದ 50 ಬಸ್‌ಗಳು ಸಂಚರಿಸುತ್ತಿವೆ. ಇವುಗಳಿಗೂ ಸಹ ನಿರೀಕ್ಷಿತ ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಿಲ್ಲ ಎಂದರು.

ಬಹುತೇಕ ಮಂದಿ ಬೈಕ್‌, ಕಾರು ಸೇರಿದಂತೆ ಸ್ವಂತ ವಾಹನಗಳಲ್ಲಿ ಹೆಚ್ಚು ಸಂಚರಿಸುತ್ತಿದ್ದಾರೆ. ಹೀಗಾಗಿ ಆದಾಯ ಬರುವ ಮಾರ್ಗಗಳಲ್ಲಿ ಮಾತ್ರ ಸದ್ಯ ಬಸ್‌ ಸಂಚರಿಸುತ್ತಿವೆ ಎಂದು ಹೇಳಿದರು.

ನೆರೆ ರಾಜ್ಯಕ್ಕೆ ಹೆಚ್ಚಿದ ಬೇಡಿಕೆ:

ನೆರೆಯ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ವಿವಿಧ ನಗರಗಳಿಗೆ ಜಿಲ್ಲೆಯಿಂದ 162 ಬಸ್‌ಗಳು ಸಂಚರಿಸುತ್ತಿದ್ದವು. ಆದರೆ, ಕೊರೊನಾ ಲಾಕ್‌ಡೌನ್‌ ಬಳಿಕ ಎಲ್ಲ ಬಸ್‌ ಸಂಚಾರ ಸ್ಥಗಿತವಾಗಿವೆ ಎಂದರು.

ಪಣಜಿ, ಪುಣೆ, ಮಿರಜ್‌.ರತ್ನಗಿರಿ, ಸೊಲ್ಲಾಪುರ, ಕೊಲ್ಹಾಪುರ, ಮುಂಬೈ ಮತ್ತು ಹೈದರಾಬಾದ್‌ಗೆ ಹೋಗಲು ಮತ್ತು ಅಲ್ಲಿಂದ ಜಿಲ್ಲೆಗೆ ಬರಲು ಪ್ರತಿ ದಿನ ನೂರಾರು ಜನರು ಫೋನ್‌ ಮಾಡಿ ವಿಚಾರಿಸುತ್ತಿದ್ದಾರೆ. ಆದರೆ, ಸರ್ಕಾರಅಂತರರಾಜ್ಯಗಳ ಸಂಚಾರಕ್ಕೆ ಅನುಮತಿ ನೀಡದೇ ಇರುವುದರಿಂದ ಸಂಚಾರ ಪುನರಾರಂಭ ಮಾಡಿಲ್ಲ ಎಂದು ಹೇಳಿದರು.

270 ಮಂದಿ ರಜೆ:

ವಿಭಾಗದಲ್ಲಿ ಇರುವ 2200 ಚಾಲಕ, ನಿರ್ವಾಹಕರ ಪೈಕಿ 55 ವರ್ಷ ಮೇಲ್ಪಟ್ಟ270 ಸಿಬ್ಬಂದಿಗೆ ಕೊರೊನಾ ಹಿನ್ನೆಲೆಯಲ್ಲಿಕಡ್ಡಾಯ ರಜೆ ನೀಡಲಾಗಿದೆ ಎಂದು ತಿಳಿಸಿದರು.

ಪ್ರತಿ ಟ್ರಿಪ್‌ಗೂ ಸ್ಯಾನಿಟೈಜ್‌:

ಬಸ್‌ಗಳು ಪ್ರತಿ ಟ್ರಿಪ್‌ ಹೋಗಿ ಬಂದ ತಕ್ಷಣ ಕಡ್ಡಾಯವಾಗಿ ಸ್ಯಾನಿಟೈಜ್‌ ಮಾಡಲಾಗುತ್ತಿದೆ. ಅಲ್ಲದೇ, ಪ್ರತಿ ದಿನ ಬಸ್‌ಗಳನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಲಾಗುತ್ತಿದೆ ಎಂದು ಹೇಳಿದರು.

ಅಂತರಕ್ಕೆ ವಿನಾಯ್ತಿ:

ಕೋವಿಡ್‌ ಹಿನ್ನೆಲೆಯಲ್ಲಿ ಈ ಮೊದಲು ಎರಡು ಸೀಟುಗಳ ನಡುವೆ ಒಂದು ಸೀಟ್‌ ಅನ್ನು ಖಾಲಿ ಬಿಟ್ಟು ಓಡಿಸಲಾಗುತ್ತಿತ್ತು. ಆದರೆ, ಸರ್ಕಾರದಿಂದ ಆದೇಶ ಬಂದಿರುವುದರಿಂದ ಮಂಗಳವಾರದಿಂದ ಸೀಟುಗಳ ನಡುವೆ ಅಂತರದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಬಸ್‌ನ ಸಾಮಾರ್ಥ್ಯಕ್ಕೆ ಅನುಗುಣವಾಗಿ ಎಲ್ಲ ಸೀಟುಗಳಲ್ಲೂ ಪ್ರಯಾಣಿಕರು ಕೂರಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಗಣೇಶ ಚತುರ್ಥಿ ಬಳಿಕ ಬಸ್‌ಗೆ ಬರುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ
-ನಾರಾಯಣಪ್ಪ ಕುರುಬರ
ವಿಭಾಗೀಯ ನಿಯಂತ್ರಣಾಧಿಕಾರಿ,ಈಶಾನ್ಯ ಸಾರಿಗೆ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT