ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿಗಳಿಗೆ ಆತ್ಮ ವಿಶ್ವಾಸ ತುಂಬುತ್ತಿದ್ದೇವೆ: ಶುಶ್ರೂಷಕಿ ಕರುಣಾ ಕುಂಬಾರ.

Last Updated 7 ಮೇ 2021, 13:02 IST
ಅಕ್ಷರ ಗಾತ್ರ

ಮನಗೂಳಿ: ಕೋವಿಡ್ ಮೊದಲ ಅಲೆಗಿಂತಲೂ ಎರಡನೇ ಅಲೆ ತೀವ್ರವಾಗಿದೆ. ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ನಮ್ಮ ಜೀವವನ್ನೆ ಪಣಕ್ಕಿಟ್ಟು ಸಹದ್ಯೋಗಿಗಳೊಂದಿಗೆ ರೋಗಿಗಳ ಸೇವೆಯನ್ನು ಮಾಡುತ್ತಿದ್ದೇವೆ ಎನ್ನುತ್ತಾರೆ ಮನಗೂಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶುಶ್ರೂಷಕಿ ಕರುಣಾ ಕುಂಬಾರ.

2008ರಿಂದಲೂ ಗುತ್ತಿಗೆ ಆಧಾರದ ಮೇಲೆ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಕೆಲಸಕ್ಕೆ ಬಂದ ಮೇಲೆ ಹಲವಾರು ತೆರನಾದ ಸವಾಲುಗಳನ್ನು ಸ್ವೀಕರಿಸಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಆದರೆ, ಕೋವಿಡ್‌ ವಿರುದ್ಧದ ಹೋರಾಟ ಮಾತ್ರ ಜಾಂಗಾ ಬಲವನ್ನೆ ನಡುಗಿಸುತ್ತಿದೆ. ಇಂತಹ ಸಂದರ್ಭದಲ್ಲಿಯೂ ಕೂಡ ಹೆರಿಗೆ ಮಾಡಿಸುತ್ತಿದ್ದೇವೆ.

ಮೊದ ಮೊದಲು ಪಿಪಿಇ ಕಿಟ್ಟು ಇಲ್ಲದೇ ಕೆಲಸ ಮಾಡಿದ್ದೇವೆ. ಕೋವಿಡ್‌ನ ಬಗ್ಗೆ ತುಂಬಾ ಭಯವಿತ್ತು. ಆದರೆ, ಇವಾಗ ಎಲ್ಲಾ ಸಾಧನಗಳನ್ನು ಬಳಸಿಕೊಂಡು ಕಾರ್ಯ ನಿರ್ವಹಿಸುತ್ತೇವೆಯಾದರೂ ಮನಸ್ಸಿನ ಒಂದು ಮೂಲೆಯಲ್ಲಿ ಭಯ ಇದ್ದೇ ಇರುತ್ತದೆ.
ನನ್ನ ಜೊತೆ ಕೆಲಸ ಮಾಡುತ್ತಿರುವ ಶುಶ್ರೂಷಕಿಯರಾದ ಶೈಲಜಾ ವಾಣಿ ಮತ್ತು ಎ.ಎಚ್.ವಾಲಿಕಾರ ತುಂಬಾ ಸಹಕಾರ ನೀಡುತ್ತಾರೆ. ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ರೋಗಿಗಳಿಗೆ ಆತ್ಮ ವಿಶ್ವಾಸ ತುಂಬುತ್ತಾ ಮುನ್ನಡೆಯುತ್ತಿದ್ದೇವೆ.

ಆಸ್ಪತ್ರೆಯಲ್ಲಿ ದಿನಪೂರ್ತಿ ಕಾರ್ಯ ನಿರ್ವಹಿಸುವ ನಮಗೆ ಮನೆಗೆ ಹೋಗಲು ಭಯವಾಗುತ್ತದೆ. ಮಕ್ಕಳೊಂದಿಗೆ ಮುಕ್ತವಾಗಿ ಬೆರೆಯಲಾಗುತ್ತಿಲ್ಲ. ಮನೆಯವರೊಂದಿಗೆ ಸರಿಯಾಗಿ ಮಾತನಾಡಲು ಕೂಡ ಆಗುತ್ತಿಲ್ಲ. ಮೊನ್ನೆ ನನ್ನ ಪತಿಗೂ ಕೋವಿಡ್‌-19 ಪಾಸಿಟಿವ್ ಬಂದಿದೆ. ಅವರೂ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ದಿನದಿಂದ ದಿನಕ್ಕೆ ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಬೆಂಗಳೂರಿನಲ್ಲಿ ಶುಶ್ರೂಷಕರಾಗಿದ್ದ ನನ್ನ ಸ್ನೇಹಿತರೊಬ್ಬರು ಮೊನ್ನೆ ತೀರಿಹೋಗಿರುವ ಸುದ್ದಿ ಕೇಳಿ ನಮ್ಮ ಮನೆಯವರೆಲ್ಲ ಎಂತಾ ಕೆಲಸಕ್ಕೆ ಸೇರಿದ್ದಿಯಾ ನೀನು? ಎಂದು ಬೈಯುತ್ತಿದ್ದಾರೆ. ಆದರೂ ನಾನು ಅವರೆಲ್ಲರಿಗೂ ಧೈರ್ಯ ತುಂಬಿ, ಸಾಂತ್ವನ ಹೇಳಿ ಕೆಲಸಕ್ಕೆ ಬರುತ್ತೇನೆ.

ನಿರೂಪಣೆ: ರಾಜಶೇಖರ ಗುಬ್ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT