ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವರಹಿಪ್ಪರಗಿ | ಬಾರದ ಪಿಂಚಣಿ: ಫಲಾನುಭವಿಗಳ ಪರದಾಟ

ಹಣ ಪಡೆಯುವ ಮಧ್ಯವರ್ತಿಗಳು: ಪರಿಹಾರ ಮಾತ್ರ ಶೂನ್ಯ
ಅಮರನಾಥ ಕೆ. ಹಿರೇಮಠ
Published 21 ಮೇ 2024, 4:52 IST
Last Updated 21 ಮೇ 2024, 4:52 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ಕಳೆದ 3-4 ತಿಂಗಳಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಹಣ ಬಾರದ ಹಿನ್ನೆಲೆಯಲ್ಲಿ ನೂರಾರು ವೃದ್ಧರು, ಮಹಿಳೆಯರು, ಅಂಗವಿಕಲ ಫಲಾನುಭವಿಗಳು ಪಿಂಚಣಿಗಾಗಿ ಬ್ಯಾಂಕ್, ತಹಶೀಲ್ದಾರ್‌ ಕಚೇರಿ, ಅಂಚೆ ಕಚೇರಿಗಳ ನಡುವೆ ಅಲೆದಾಡುವಂತಾಗಿದೆ.

‘ಸರ್ಕಾರದ ಗ್ಯಾರಂಟಿಗಳ ಪ್ರಚಾರ, ಇನ್ನೊಂದೆಡೆ ಲೋಕಸಭೆ ಚುನಾವಣೆ ಇವುಗಳ ನಡುವೆ ಕಳೆದ 3-4 ತಿಂಗಳಿಂದ ಬಾರದ ಪಿಂಚಣಿ ಯಾರನ್ನು ಕೇಳುವುದು? ನಾನೊಬ್ಬ ಅಂಗವಿಕಲ ನನಗೆ 3 ತಿಂಗಳಿಂದ ಹಣ ಜಮೆ ಆಗಿಲ್ಲ. ಈ ಬಗ್ಗೆ ಅಂಚೆ ಕಚೇರಿಯಲ್ಲಿ ಕೇಳಿದರೆ ಬ್ಯಾಂಕಿನಲ್ಲಿ ಕೇಳಿ ಅಂತಾರೆ, ಬ್ಯಾಂಕ್‌ನಲ್ಲಿ ಕೇಳಿದರೆ ತಹಶೀಲ್ದಾರ್‌ ಆಫೀಸ್‌ಗೆ ಹೋಗು ಅಂತಾರೆ, ಯಾರನ್ನು ಕೇಳಬೇಕು ಎನ್ನುವುದೇ ತಿಳಿಯದಾಗಿದೆ’ ಎಂದು ಅಂಗವಿಕಲರ ಪಿಂಚಣಿಗಾಗಿ ಅಲೆಯುತ್ತಿರುವ ಕೆರೂಟಗಿ ಗ್ರಾಮದ ಹಣಮಂತ ಪೂಜಾರಿ ಹೇಳುತ್ತಾರೆ.

‘ನಮಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಕಳೆದ ಜನವರಿ ತಿಂಗಳಿಂದ ಹಣ ಜಮೆ ಆಗಿಲ್ಲ. ಮೊದಲು ಅಂಚೆ ಕಚೇರಿಯಲ್ಲಿ ಐಪಿಪಿ ಖಾತೆಗೆ ಬರುತ್ತಿದ್ದವು. ಅವರು ಹೆಬ್ಬಟ್ಟು ಒತ್ತಿಸಿ ಹಣ ನೀಡುತ್ತಿದ್ದರು. ಆದರೆ, ಈಗ ಏಕಾಏಕಿ ಹಣ ಬರುವುದು ನಿಂತಿವೆ. ಇದರ ಬಗ್ಗೆ ತಹಶೀಲ್ದಾರ್‌ ಕಚೇರಿಯಲ್ಲಿ ಕೇಳಿದರೆ ಖಾತೆ ಚಾಲನೆ ಮಾಡಲಾಗುವುದು ಅದಕ್ಕಾಗಿ ಹಣ ನೀಡಿ ಎಂದು ಹೇಳಿ ಹಣ ಪಡೆದಿದ್ದಾರೆ. ಆದರೆ, ಇವರೆಗೆ ಹಣ ಜಮೆ ಆಗಿಲ್ಲ. ಈ ಬಗ್ಗೆ ಪುನಃ ಕೇಳಿದರೆ ಬ್ಯಾಂಕ್‌ನಲ್ಲಿ ಕೇಳು ಅಂತಾರೆ, ಬ್ಯಾಂಕ್‌ನಲ್ಲಿ ಕೇಳಿದರೆ ತಹಶೀಲ್ದಾರ್‌ ಕಚೇರಿಯಲ್ಲಿ ಕೇಳಿ ಎಂದು ಪುನಃ ಕಳುಹಿಸುತ್ತಾರೆ. ಹೀಗೆ ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಅಲೆಯುವುದೇ ಆಗಿದೆ. ಆದರೆ ಹಣ ಮಾತ್ರ ಜಮಾ ಆಗಿಲ್ಲ’ ಎಂದು ಸೈಫನ್ಮ ಮಸ್ತಾನ್ ಶೇಖ್ ಹಾಗೂ ಮಸ್ತಾನ್ ಶೇಖ್ ಅಳಲು ತೊಡಿಕೊಂಡರು.

‘ಅಂಗವಿಕಲ, ಸಂಧ್ಯಾ ಸುರಕ್ಷಾ ಸೇರಿದಂತೆ ಹೀಗೆ ಸರ್ಕಾರದ ವಿವಿಧ ಯೋಜನೆಗಳಿಂದ ಪಿಂಚಣಿ ಪಡೆಯುತ್ತಿರುವ ಬಹುತೇಕ ಫಲಾನುಭವಿಗಳ ಖಾತೆಗೆ ಕಳೆದ ನಾಲ್ಕೈದು ತಿಂಗಳಿಂದ ಹಣ ಜಮಾ ಆಗದೇ ಇದ್ದು ಈ ಕುರಿತು ವಿಚಾರಣೆಗೆ ತಹಶೀಲ್ದಾರ್‌ ಕಚೇರಿಗೆ ಬರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ, ಪರಿಹಾರ ಮಾತ್ರ ಶೂನ್ಯ. ಇನ್ನೂ ನಿತ್ಯ ಇಂಥ ಫಲಾನುವಿಗಳಿಗೆ ನೆರವು ನೀಡಬೇಕಾದ ಕಚೇರಿ ಸಿಬ್ಬಂದಿ ಸಹ ಬೇಕಾಬಿಟ್ಟಿಯಾಗಿ ₹ 100ರಿಂದ ₹ 200ರ ವರೆಗೆ ಹಣ ಪಡೆಯುತ್ತಿರುವುದನ್ನು ಫಲಾನುಭವಿಗಳೇ ಹೇಳುತ್ತಿದ್ದಾರೆ. ಜೊತೆಗೆ ಇಂತಹ ಫಲಾನುಭವಿಗಳಿಗೆ ಸಹಾಯ ಮಾಡುವ ನೆಪದಲ್ಲಿ ಮಧ್ಯವರ್ತಿಗಳು ಸಹ ಹುಟ್ಟಿಕೊಂಡಿದ್ದು ಇವರು ಸಹ 4 ತಿಂಗಳ ಹಣ ಒಮ್ಮೇಲೆ ಬರುವಂತೆ ಮಾಡುತ್ತೇವೆ ಎಂಬ ಮಾತುಗಳಿಂದ ನಂಬಿಸಿ ₹ 2 ಸಾವಿರದ ವರೆಗೆ ಹಣ ಪಡೆದಿದ್ದು ಉಂಟು. ಆದರೆ, ಪರಿಹಾರ ಮಾತ್ರ ದೊರೆತಿಲ್ಲ’ ಎಂದು ಪಟ್ಟಣದ ವೃದ್ಧೆ ಮಹಾದೇವಿ ಪಾಟೀಲ ಆರೋಪಿಸಿದರು.

‘ಸರ್ಕಾರ ವಿವಿಧ ಯೋಜನೆಗಳ ಮೂಲಕ ಮಾಶಾಸನ ನೀಡುತ್ತಿರುವುದು ನಿಜಕ್ಕೂ ಉತ್ತಮ ಕಾರ್ಯ ಆದರೆ, ಇವುಗಳಲ್ಲಿಯೂ ಫಲಾನುಭವಿಗಳಿಂದ ಹಣ ಕೀಳುವುದು ಹಾಗೂ ಕೇಳುವುದು ತಪ್ಪು. ಇಂಥ ಯೋಜನೆಗಳಿಂದ ಫಲಾನುಭವಿಗೆ ಹಣಜಮೆ ಆಗದೇ ಇದ್ದಲ್ಲಿ ತಾಲ್ಲೂಕು ಆಡಳಿತ, ಬ್ಯಾಂಕ್, ಅಂಚೆ ಕಚೇರಿಗಳು ಸಂಬಂಧಿತ ಫಲಾನುಭವಿಗೆ ಸೂಕ್ತ ಮಾಹಿತಿ ನೀಡಬೇಕು. ಹಾಗೂ ಮಧ್ಯವರ್ತಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಶಕುಂತಲಾ ಹಿರೇಮಠ, ವಿಜಯಲಕ್ಷ್ಮಿ ಅರಳಿಮಟ್ಟಿ.

ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳ ಆಧಾರ್ ಸಂಖ್ಯೆಗೆ ಬ್ಯಾಂಕ್ ಖಾತೆ ಲಿಂಕ್ ಬ್ಯಾಂಕ್‌ ಖಾತೆ ಸಂಖ್ಯೆ ಐಎಫ್ಎಸ್‌ಸಿ ಕೋಡ್‌ ನಮೂದಿಸದೇ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿರಬಹುದು. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು

-ಪ್ರಕಾಶ ಸಿಂದಗಿ ತಹಶೀಲ್ದಾರ್‌ ದೇವರಹಿಪ್ಪರಗಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT