ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ: 169 ಕೆರೆಗಳ ಭರ್ತಿಗೆ ಅನುಮತಿ ಅಗತ್ಯ

ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿ: ಇಂದು ರಾತ್ರಿಯಿಂದ ಕಾಲುವೆಗೆ ನೀರು ಸ್ಥಗಿತ
Last Updated 9 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಆಲಮಟ್ಟಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲಾ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ಏಪ್ರಿಲ್ 10 ಮಧ್ಯರಾತ್ರಿಯಿಂದ ನೀರು ಹರಿಸುವುದು ಸ್ಥಗಿತಗೊಳ್ಳಲಿದೆ.

ನ.23 ರಂದು ಬೆಂಗಳೂರಿನಲ್ಲಿ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆಯ ನದಿ ನೀರು ಬಳಕೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ (ಐಸಿಸಿ) ನಿರ್ಧರಿಸಿದಂತೆ ಡಿ.12 ರಿಂದ ಮಾ.30 ರ ವರೆಗೆ ವಾರಾಬಂಧಿ ಪದ್ಧತಿಗೆ ಒಳಪಟ್ಟು ಹಿಂಗಾರು ಹಂಗಾಮಿಗೆ ನೀರು ಹರಿಸಲು ನಿರ್ಧರಿಸಲಾಗಿತ್ತು. ರೈತರ ಬೇಡಿಕೆಯ ಹಿನ್ನಲೆಯಲ್ಲಿ ಅದನ್ನು ಏ.10 ರವರೆಗೆ ವಿಸ್ತರಿಸಲಾಗಿತ್ತು. ಮುಂಗಾರು ಹಂಗಾಮಿಗೆ ಜುಲೈ 26 ರಿಂದ ನ. 24 ರ ವರೆಗೆ 120 ದಿನಗಳ ಕಾಲ ನೀರು ಹರಿಸಲಾಗಿದೆ.

169 ಕೆರೆಗಳ ಭರ್ತಿಗಾಗಿ ನೀರು: ಆಲಮಟ್ಟಿ ಜಲಾಶಯ ವ್ಯಾಪ್ತಿಯ ಕಾಲುವೆಗಳ ಮೂಲಕ 117 ಕೆರೆಗಳು ಹಾಗೂ ಪಂಪಸೆಟ್ ಗಳ ಮೂಲಕ ನೀರು ಎತ್ತಿ 52 ಕೆರೆಗಳು ಸೇರಿ ಜಿಲ್ಲೆಯ 169 ಕೆರೆಗಳಿಗೆ ಎರಡು ಬಾರಿ ನೀರು ಹರಿಸಲಾಗುತ್ತದೆ. ಈಗಾಗಲೇ ನೀರಾವರಿಗಾಗಿ ನೀರು ಬಿಟ್ಟಾಗಲೇ ಬಹುತೇಕ ಕೆರೆಗಳ ಸಾಮರ್ಥ್ಯದ ಶೇ 50 ರಷ್ಟು ಭರ್ತಿಯಾಗಿವೆ. ಕೆರೆಗಳ ಭರ್ತಿಗೆ ಬೇಡಿಕೆ ಬಂದರೆ ಜಿಲ್ಲಾಧಿಕಾರಿಗಳ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಅನುಮತಿಗಾಗಿ ಪತ್ರ ಬರೆಯಲಾಗುವುದು ಎಂದು ಕೆಬಿಜೆಎನ್ ಎಲ್ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಎಚ್. ಸುರೇಶ ತಿಳಿಸಿದರು.

ಕೆರೆಗಳ ಭರ್ತಿಗಾಗಿ 2 ಟಿಎಂಸಿ ಅಡಿಯಷ್ಟು ನೀರು ಕಾಯ್ದಿರಿಸಲಾಗಿದೆ. ಅಗತ್ಯ ಎನಿಸಿದರೆ ಹಾಗೂ ಅನುಮತಿ ದೊರೆತರೆ ಕೆರೆಗಳ ಭರ್ತಿಗಾಗಿ ಯೋಜನೆ ರೂಪಿಸಿ ಕಾಲಾವಧಿ ಹಾಕಿಕೊಂಡು ಭರ್ತಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಜತೆಗೆ ಕಲಬುರ್ಗಿ, ಜೇವರ್ಗಿ, ಸಿಂದಗಿ, ಇಂಡಿ, ಭೀಮಾ ತೀರದ ಪ್ರದೇಶ, ಲಿಂಗಸೂರು ಸೇರಿ ನಾರಾಯಣಪುರ ಜಲಾಶಯದ ವ್ಯಾಪ್ತಿಯ ಕುಡಿಯುವ ನೀರಿಗಾಗಿಯೂ ಆ ಭಾಗದ ಕಾಲುವೆ ಜಾಲಗಳ ಮೂಲಕ ನೀರು ಹರಿಸಲು, ಆಲಮಟ್ಟಿ ಜಲಾಶಯದಲ್ಲಿ ನೀರನ್ನು ಸಂಗ್ರಹಿಸಿಡಲಾಗಿದೆ.

ಜತೆಗೆ ರಾಯಚೂರ ಉಷ್ಣ ವಿದ್ಯುತ್ ಸ್ಥಾವರ, ಗೂಗಲ್ ಬ್ಯಾರೇಜ್ ಗೂ ಬೇಸಿಗೆಯ ಬಳಕೆಗೆ ನೀರು ಇಡಲಾಗಿದೆ. ಅಲ್ಲಿ ನೀರು ಹರಿಸಲು ಕಲಬುರಗಿ ಪ್ರಾದೇಶಿಕ ಆಯುಕ್ತರ ಅನುಮತಿಯೂ ಅಗತ್ಯ ಎಂದರು.

17 ಟಿಎಂಸಿ ಅಡಿ ನೀರು ಕಡಿಮೆ: ಜಲಾಶಯಕ್ಕೆ ನೀರಿನ ಒಳಹರಿವು ನವೆಂಬರ್ 11 ರಂದು ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ಜಲಾಶಯದಲ್ಲಿ ನೀರಿನ ಕೊರತೆ ಕಂಡು ಬಂದಿದೆ.

519.60 ಮೀ ಗರಿಷ್ಠ ಎತ್ತರದ ಜಲಾಶಯದಲ್ಲಿ ಸದ್ಯ 509.75 ಮೀ.ವರೆಗೆ ನೀರು ಸಂಗ್ರಹವಿದೆ. ಜಲಾಶಯದಲ್ಲಿ 28.708 ಟಿಎಂಸಿ ಅಡಿ ನೀರು ಸಂಗ್ರಹವಿದ್ದರೂ, ಬಳಕೆಯೋಗ್ಯ (ಲೈವ್ ಸ್ಟೋರೇಜ್) 11.088 ಟಿಎಂಸಿ ಅಡಿ ನೀರು ಮಾತ್ರ ಲಭ್ಯವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 17 ಟಿಎಂಸಿ ಅಡಿಯಷ್ಟು ನೀರು ಕಡಿಮೆ ಸಂಗ್ರಹವಿದೆ.

ಕ್ಲೋಸರ್ ಕಾಮಗಾರಿ ಇಲ್ಲ: ಕಾಲುವೆಗಳ ಜಾಲದ ದುರಸ್ತಿ ಹಾಗೂ ನಿರ್ವಹಣೆಯ ಕ್ಲೋಸರ್ ಕಾಮಗಾರಿ ಈ ವರ್ಷ ನಡೆಯುವುದು ಅನುಮಾನ ಎನ್ನಲಾಗಿದೆ. ಸದ್ಯ ಚುನಾವಣೆ ನೀತಿ ಸಂಹಿತೆಯಿದೆ. ಯಾವುದೇ ಟೆಂಡರ್ ಕರೆಯಲು ಆಯೋಗದ ಅನುಮತಿ ಅಗತ್ಯ ಹಾಗೂ ಕ್ಲೋಸರ್ ಕಾಮಗಾರಿಗಾಗಿ ಅನುದಾನವೂ ಸದ್ಯ ಲಭ್ಯವಾಗಿಲ್ಲ ಎನ್ನಲಾಗಿದೆ. ಕೇವಲ ಎರಡೇ ತಿಂಗಳಲ್ಲಿ ಕಾಲುವೆಗಳ ನಿರ್ವಹಣೆಯ ಬದಲಾಗಿ, ವಾರ್ಷಿಕ ಕಾಲುವೆಗಳ ನಿರ್ವಹಣೆಯ ವ್ಯವಸ್ಥೆ ಜಾರಿಗೆ ತರುವ ಉದ್ದೇಶವೂ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT