ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರೋಣ್‌ನಿಂದ ಬೆಳೆಗೆ ಕೀಟನಾಶಕ ಸಿಂಪಡಣೆ

ವಿಜಯಪುರ ಜಿಲ್ಲೆಯ ರೈತರ ತೊಗರಿ, ಕಬ್ಬಿನ ಹೊಲದಲ್ಲಿ ಕೃಷಿ ಇಲಾಖೆಯಿಂದ ಪ್ರಾಯೋಗಿಕ ಬಳಕೆ
Last Updated 8 ಅಕ್ಟೋಬರ್ 2020, 12:38 IST
ಅಕ್ಷರ ಗಾತ್ರ

ವಿಜಯಪುರ: ಕೂಲಿಯಾಳುಗಳ ಕೊರತೆ ಮತ್ತು ಹೆಚ್ಚಿನ ಕೂಲಿ ಬಾರವನ್ನು ನೀಗಿಸಬಲ್ಲ ಡ್ರೋಣ್‌‌ ಮೂಲಕ ಹೊಲಕ್ಕೆ ಕೀಟನಾಶಕ ಸಿಂಪಡಿಸುವ ಹೊಸ ತಂತ್ರಜ್ಞಾನವನ್ನು ಕೃಷಿ ಇಲಾಖೆ ವಿಜಯಪುರ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರೈತರಿಗೆಪ್ರಾಯೋಗಿಕವಾಗಿ ಪರಿಚಯಿಸಿದೆ.

ಚಿತ್ರದುರ್ಗದ ವರ್ಷಾ ಅಸೋಸಿಯೇಟ್‌‌ ಸಹಯೋಗದೊಂದಿಗೆ ಕೃಷಿ ಇಲಾಖೆಯು ರೈತರ ತೊಗರಿ ಮತ್ತು ಕಬ್ಬಿನ ಹೊಲಗಳಿಗೆ ಡ್ರೋಣ್‌ ಮೂಲಕ ಔಷಧ ಸಿಂಪಡಿಸುವ ಮೂಲಕ ಗಮನ ಸೆಳೆದಿದ್ದು, ನೂರಾರು ರೈತರು ಈ ಪ್ರಾಯೋಗಿಕ ಪರೀಕ್ಷೆಯನ್ನು ವೀಕ್ಷಿಸಿ, ಮೆಚ್ಚಿಕೊಂಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್‌, ‘ರೈತರು ದ್ರಾಕ್ಷಿ, ಕಬ್ಬು, ತೊಗರಿ, ಭತ್ತ ಸೇರಿದಂತೆ ಪ್ರಮುಖ ಬೆಳೆಗಳಿಗೆ ಹೊಲದೊಳಗೆ ಹೋಗಿ ಔಷಧ ಸಿಂಪಡಿಸುವುದು ಕಷ್ಟವಾಗುತ್ತದೆ. ಆದರೆ, ಡ್ರೋಣ್‌ ಮೂಲಕ ಸುಲಭವಾಗಿ ಕೀಟನಾಶಕ ಸಿಂಪಡಿಸಲು ನೆರವಾಗುತ್ತದೆ’ ಎಂದರು.‌

’ಎಂಟು ನಿಮಿಷದಲ್ಲಿ ಒಂದು ಎಕರೆಗೆ ಡ್ರೋಣ್‌ ಮೂಲಕಕೀಟನಾಶಕವನ್ನು ಪರಿಣಾಮಕಾರಿಯಾಗಿ ಸಿಂಪಡಿಸಬಹುದಾಗಿದೆ. ಇದರಿಂದ ರೈತರಿಗೆ ಸಮಯದ ಉಳಿತಾಯವಾಗಲಿದೆ’ ಎಂದು ಹೇಳಿದರು.

‘10 ಲೀಟರ್‌ ಮತ್ತು 20 ಲೀಟರ್‌ ಕೀಟನಾಶಕ ಇರುವ ಕ್ಯಾನ್‌(ಟ್ಯಾಂಕ್‌) ಅನ್ನು ಒಮ್ಮೆಗೆ ಎತ್ತಿಕೊಂಡು ಹಾರಾಡುವ ಸಾಮಾರ್ಥ್ಯವನ್ನು ಡ್ರೋಣ್‌ ಹೊಂದಿದೆ’ ಎಂದು ಹೇಳಿದರು.

‘ಡ್ರೋಣ್‌ ಅನ್ನು ಒಮ್ಮೆ ಸೆಟ್‌ ಮಾಡಿ ಬಿಟ್ಟರೆ ಇಡೀ ಹೊಲಕ್ಕೆ ತಾನೇ ಔಷಧ ಸಿಂಪಡಿಸಿಕೊಂಡು ಬರುತ್ತದೆ.ರಿಮೋಟ್‌ ಕಂಟ್ರೋಲ್‌ ಮೂಲಕ ಅದನ್ನು ನಿಯಂತ್ರಿಸಬಹುದಾಗಿದೆ. ಸೆನ್ಸಾರ್‌ ಇರುವುದರಿಂದ ಹೊಲದಲ್ಲಿ ವಿದ್ಯುತ್‌ ಕಂಬ, ತಂತಿ, ಮರ, ಗಿಡಗಳು ಎದುರಾದರೆ ಅದರ ಬಳಿ ಹೋಗದೇ ಉಳಿದ ಕಡೆ ಔಷಧವನ್ನು ಸಿಂಪಡಿಸಲಿದೆ’ ಎಂದು ಹೇಳಿದರು.

‘ಕೀಟನಾಶಕ ಸಿಂಪಡಿಸುವ ಒಂದು ಡ್ರೋಣ್‌ ಬೆಲೆ ₹12 ಲಕ್ಷದಿಂದ ₹ 13 ಲಕ್ಷವಾಗಲಿದೆ.ಡ್ರೋಣ್‌ ಜೊತೆಗೆ ಐದು ಬ್ಯಾಟರಿ ಹಾಗೂ ಚಾರ್ಜರ್‌ ಯುನಿಟ್‌ ಇರುತ್ತದೆ. ಐದು ಬ್ಯಾಟರಿಗಳ ಸಹಾಯದಿಂದ ಕನಿಷ್ಠ 15ರಿಂದ 20 ಎಕರೆಗೆ ಔಷಧ ಸಿಂಪಡಿಸಬಹುದು’ ಎಂದರು.

‘ಹೊಸ ತಂತ್ರಜ್ಞಾನವಾಗಿರುವುದರಿಂದ ಬೆಲೆ ದುಬಾರಿ ಎನಿಸಿದರೂ ಕೂಲಿಯಾಳುಗಳ ಕೊರತೆ ಮತ್ತು ಸಮಯದ ಉಳಿತಾಯವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT