ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ವಿಭಜನೆ ಪ್ರಾಯಶ್ಚಿತಕ್ಕಾಗಿ ರಾಹುಲ್ ಯಾತ್ರೆ: ನಳಿನ್ ಕುಮಾರ್ ಕಟೀಲ್

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕೆ
Last Updated 27 ಸೆಪ್ಟೆಂಬರ್ 2022, 12:57 IST
ಅಕ್ಷರ ಗಾತ್ರ

ವಿಜಯಪುರ:ದೇಶ ವಿಭಜನೆಯ ಪ್ರಾಯಶ್ಚಿತಕ್ಕಾಗಿ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಮಾಡುತ್ತಿದ್ದಾರೆ. ಇಂದು ಆಗಬೇಕಿರುವುದು ಭಾರತ ಜೋಡೊ ಅಲ್ಲ, ಕಾಂಗ್ರೆಸ್ ಜೋಡು ಎಂದುಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ನಗರದ ಶಿವಗಿರಿಯ ವಿಶ್ವಶಾಂತಿ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಿಜೆಪಿ ನಾಗಠಾಣ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್‌ನ ಅಧಿಕಾರ ಆಸೆಯಿಂದಾಗಿ ದೇಶದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ಹೆಚ್ಚಾಗಿತ್ತು. ಯುಪಿಎ ಆಡಳಿತಾವಧಿಯಲ್ಲಿ ದೇಶದ ಹಲವೆಡೆ ಪ್ರತಿನಿತ್ಯ ಬಾಂಬ್ ಸ್ಪೋಟ ನಡೆಯುತ್ತಿತ್ತು. ಮೋದಿ ಪ್ರಧಾನಿ ಆದ ಬಳಿಕ ಎಲ್ಲಿಯೂ ಬಾಂಬ್ ಸ್ಪೋಟ ಆಗುತ್ತಿಲ್ಲ. ಶಾಂತಿ ನೆಲಸಿದೆ ಎಂದರು.

ಕರ್ನಾಟಕ ಮಾತ್ರವಲ್ಲ, ಇಡೀ ಭಾರತ ಕಾಂಗ್ರೆಸ್ ಮುಕ್ತವಾಗಲಿದೆ. ಸಿದ್ದರಾಮಣ್ಣ ರಾಜಕೀಯ ಸನ್ಯಾಸ ಸ್ವೀಕರಿಸಬೇಕಾಗುತ್ತದೆ. ವಿಜಯಪುರದ ಎಂಟು ಕ್ಷೇತ್ರದಲ್ಲಿ ಕಮಲ ಅರಳುವ ಮೂಲಕ ಎಂ.ಬಿ.ಪಾಟೀಲರು ಮನೆ ಸೇರುತ್ತಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿವಿಶ್ವ ವಂದ್ಯಾ ಭಾರತ, ಜಗದ್ಗುರು ಭಾರತ ನಿರ್ಮಾಣವಾಗುತ್ತಿದೆ. ಭಾರತದ ಮೇಲೆ ಜಗತ್ತಿಗೆ ವಿಶ್ವಾಸ ಹೆಚ್ಚಾಗುತ್ತಿದೆ.ಭ್ರಷ್ಟಾಚಾರ ಮುಕ್ತ ಆಡಳಿತ ಮೋದಿ ನೀಡುತ್ತಿದ್ದಾರೆ. ಸಾಮಾನ್ಯ ಜನರಿಗೆ ಗೌರವ ಕೊಡುವ ಕಾರ್ಯ ನಡೆದಿದೆ ಎಂದರು.

ಬಡವರ ಕಲ್ಯಾಣದ ಹೆಸರಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಎಂ.ಬಿ.ಪಾಟೀಲರ ಕುಟುಂಬ ಅಭಿವೃದ್ಧಿ ಆಗಿದೆ ಎಂದು ಆರೋಪಿಸಿದರು.

ವಿಜಯಪುರ ಜಿಲ್ಲೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಟ್ಟ ಅನುದಾನ ಎಷ್ಟು? ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಟ್ಟ ಅನುದಾನ ಎಷ್ಟು? ಎಂಬುದರ ಬಹಿರಂಗ ಚರ್ಚೆಗೆ ಜಿಲ್ಲೆಯ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿ ಎಂದು ಪಕ್ಷದ ಮುಖಂಡರಿಗೆ ಹೇಳಿದರು.

ಕಾಂಗ್ರೆಸ್‌ನವರು ಪೇಸಿಎಂ ಅಭಿಯಾನ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ, ಡಿ.ಕೆ.ಶಿವಕುಮಾರ್ ಏಕೆ ಸಿಎಂ ಆಗದೇ ಸಿದ್ದರಾಮಯ್ಯ ಹೇಗೆ ಸಿಎಂ ಆದರು?ಮೇಡಂಗೆ ಪೇ ಮಾಡಿ ಸಿಎಂ ಆದವರು ಸಿದ್ದರಾಮಯ್ಯ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಆಗಬೇಕೆಂಬ ಉದ್ದೇಶದಿಂದಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್‌ ಪರ ಅಭ್ಯರ್ಥಿಗಳನ್ನು ಸಿದ್ದರಾಮಯ್ಯ ಸೋಲಿಸಲಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಪರ ಅಭ್ಯರ್ಥಿಗಳನ್ನು ಡಿಕೆಶಿ ಸೋಲಿಸಲಿದ್ದಾರೆ. ಬಿಜೆಪಿ ಜಯ ಗಳಿಸಲಿದೆ ಎಂದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾಗಠಾಣದಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕರಾಗಿ ಆಯ್ಕೆಯಾಗಬೇಕು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು ಎಂದು ಹೇಳಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, 60 ವರ್ಷ ಕಾಂಗ್ರೆಸ್ ದೇಶದ ಉದ್ದಗಲಕ್ಕೂ ಆಡಳಿತ ನಡೆಸಿದೆ. ಆದರೆ, ಸಾಧನೆ ಶೂನ್ಯ. ವೋಟಿಗಾಗಿ ಜಾತಿ, ಧರ್ಮದ ನಡುವೆ ಗಲಭೆ ಮಾಡಿದರು. ದೇಶ ಇಬ್ಬಾಗ ಮಾಡಿದರು. ಇದರ ಪ್ರಾಯಚಿತ್ತಕ್ಕಾಗಿ ಭಾರತ ಜೋಡೊ ಯಾತ್ರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ.ಕೆಂಪಣ್ಣ ಗುತ್ತಿಗೆದಾರರೇ ಅಲ್ಲ. ಕಾಂಗ್ರೆಸ್‌ನವರು ಹೇಳಿಕೊಟ್ಟಂತೆ ಕೆಂಪಣ್ಣ ಆರೋಪ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಸಾಕ್ಷಿ, ಆಧಾರ ಇದ್ದರೆ ಕೆಂಪಣ್ಣ ಲೋಕಾಯುಕ್ತದಲ್ಲಿ ಕೇಸು ದಾಖಲಿಸಿ ಎಂದು ಸವಾಲು ಹಾಕಿದರು.

ಸಂಸದ ರಮೇಶ ಜಿಗಜಿಣಗಿ,ಕಾಂಗ್ರೆಸ್ ಆಡಳಿತಾವಧಿಯಲ್ಲಿ ದೇಶ, ರಾಜ್ಯದ ಅಭಿವೃದ್ಧಿಯಾಗಿಲ್ಲ. ಕೇವಲ ಭ್ರಷ್ಟಾಚಾರ ಮಾಡಿದರು ಎಂದು ಆರೋಪಿಸಿದರು.

ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಸೋಲಿಸಲು ವಿರೋಧಿಗಳು ಒಂದಾಗುತ್ತಿದ್ದಾರೆ. ಆದರೆ, ಬಿಜೆಪಿ 400 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿಮಹೇಶ ಟೆಂಗಿನಕಾಯಿ,ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಉಪಾಧ್ಯಕ್ಷ ಉಮೇಶ ಕಾರಜೋಳ, ಮುಖಂಡರಾದ ಚಂದ್ರಶೇಖರ ಕವಟಗಿ, ಬಸವರಾಜ ಯಂಕಂಚಿ, ಮಲ್ಲಿಕಾರ್ಜುನ ಜೋಗೂರ, ರಾಮಣ್ಣ ಅವಟಿ, ಶಿವರುದ್ರ ಬಾಗಲಕೋಟ ಇದ್ದರು.

ಚಡಚಣ, ನಾಗಠಾಣ ಕ್ಷೇತ್ರಕ್ಕೆ ಅನುಕೂಲವಾಗುವ ರೇವಣ ಸಿದ್ದೇಶ್ವರ ಏತನೀರಾವರಿ ಯೋಜನೆ ಜಾರಿ ಮಾಡಿದ್ದೇವೆ. ಜನವರಿ 15ಕ್ಕೆ ವಿಜಯಪುರಕ್ಕೆ ವಿಮಾನ ಇಳಿಸುತ್ತೇವೆ

–ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT