ಮಂಗಳವಾರ, ಮೇ 24, 2022
23 °C
ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಸೂಚನೆ

ವಿಜಯಪುರ ರಸ್ತೆ ತಗ್ಗು, ಗುಂಡಿ ದುರಸ್ತಿಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಪಾಲಿಕೆ ವ್ಯಾಪ್ತಿಯಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ವೈಜ್ಞಾನಿಕ ರೀತಿಯಲ್ಲಿ ದುರಸ್ತಿಗೊಳಿಸಲು ವಿಶೇಷ ಗಮನ ನೀಡುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿಗೆ ವಿಶೇಷ ಯಂತ್ರಚಾಲಿತ ವಾಹನ ತರಿಸಲು ಸಲಹೆ ನೀಡಿದ ಅವರು, ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು. 

ನಗರದ ರಸ್ತೆಗಳ ವ್ಯಾಪ್ತಿಯಲ್ಲಿ ಬರುವಂತಹ ವಿದ್ಯುತ್ ದೀಪಗಳನ್ನು ಅತ್ಯುತ್ತಮವಾಗಿ ನಿರ್ವಹಿಸುವಂತೆ ಅವರು ಸೂಚನೆ ನೀಡಿದರು.

ರಸ್ತೆ ನಿಮಯಗಳ ಉಲ್ಲಂಘಿಸುವ ವಾಹನ ಚಾಲಕರ ಡ್ರೈವಿಂಗ್‌ ಲೈಸನ್ಸ್‌ ಅಮಾನತ್ತಿನಲ್ಲಿ ಇಡಲು ಕ್ರಮ ಕೈಗೊಳ್ಳಲು ಪೊಲೀಸ್‌ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ವಿವಿಧ ರಸ್ತೆಗಳಲ್ಲಿರುವ ಅಪಾಯಕಾರಿಯಾದ ಡಾರ್ಕ್ ಸ್ಪಾಟ್‍ ಮತ್ತು ಬ್ಲ್ಯಾಕ್ ಸ್ಪಾಟ್‍ಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಸೋಲಾರ್ ಲೈಟ್ ಅಳವಡಿಕೆಗೆ ಅವಕಾಶವಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿಗೆ ಸೇರುವಂತಹ ನಗರದ ಮುಖ್ಯ ರಸ್ತೆಗಳ ಸಂಪರ್ಕ ಸ್ಥಳಗಳನ್ನು ಪೊಲೀಸರ ನೆರವಿನೊಂದಿಗೆ ಗುರುತಿಸಿ ವಿದ್ಯುತ್ ದೀಪ ಅಳವಡಿಕೆಗೆ ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು.

ಹೆಚ್ಚು ಅಪಘಾತ ಸಂಭವಿಸುವ ರಸ್ತೆಗಳನ್ನು ಗುರುತಿಸಿ ವೈಜ್ಞಾನಿಕ ಹಂಪ್ಸ್ ಇರುವಂತೆ ನೋಡಿಕೊಳ್ಳಬೇಕು. ಅವಶ್ಯಕ ರಸ್ತೆ ಸುರಕ್ಷತಾ ಪರಿಕರಗಳನ್ನು ಅಳವಡಿಸಲು ಅವರು ಸಲಹೆ ನೀಡಿದರು.

ನಗರದ ರಸ್ತೆಗಳ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಮ್ಯಾನುವೆಲ್ ಚೆಂಬರ್‌ಗಳನ್ನು ಸರಿಪಡಿಸಲು ವಿಶೇಷ ಗಮನ ನೀಡುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರನ್ನು ಒಳಗೊಂಡ ಸಮಿತಿ ರಚಿಸಿಕೊಂಡು ನೋ ಪಾರ್ಕಿಂಗ್ ಸ್ಥಳಗಳ ಮೇಲೆ ನಿಗಾ ಇಡಬೇಕು. ಅಪಘಾತ ವಲಯಗಳನ್ನು ಪುನರ್ ಪರಿಶೀಲನೆ ಮಾಡಿ, ಪ್ರಾದೇಶಿಕ ಸಾರಿಗೆ ಮತ್ತು ಪೊಲೀಸ್‌ ಇಲಾಖೆ ಸಮನ್ವಯತೆಯಿಂದ ವರದಿ ಸಿದ್ಧಪಡಿಸುವಂತೆ ಸೂಚನೆ ನೀಡಿದರು.

ರಸ್ತೆ ಅಪಘಾತದ ಸಂದರ್ಭದಲ್ಲಿ ಸೆಕ್ಸನ್‌ 304 ಪ್ರಕರಣ ದಾಖಲಿಸಿಕೊಂಡವರ ಬಗ್ಗೆ ನಿಗಾ ಇಟ್ಟು, ಆಟೊ ರಿಕ್ಷಾ ಚಾಲನಾ ಪರವಾನಗಿ ರದ್ಧತಿಗೆ ಕ್ರಮಕೈಗೊಳ್ಳಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೊಲ್ಲಾಪುರ, ಕಲಬುರ್ಗಿ ಅಧಿಕಾರಿಗಳು ಮುಂದಿನ ಸಭೆಗಳಲ್ಲಿ ಕೈಗೊಂಡ ಕ್ರಮಗಳ ವರದಿಯೊಂದಿಗೆ ಬರಬೇಕು ಎಂದು ಅವರು ಸೂಚಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಸಿಂದಗಿ–ದೇವರ ಹಿಪ್ಪರಗಿ ಮಾರ್ಗ ಮಧ್ಯೆದಲ್ಲಿ ಬರುವ (ಶಾಂಭವಿ ರೆಸ್ಟೋರೆಂಟ್ ಹತ್ತಿರ) ಸೇತುವೆ ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದು, ತಕ್ಷಣ ಈ ಕಾಮಗಾರಿ ಕೈಗೊಳ್ಳಬೇಕು ಎಂದು ಹೇಳಿದರು.

ಸರ್ಕಾರಿ ಬಸ್‍ಗಳನ್ನು ಬಸ್ ನಿಲ್ದಾಣ ಹೊರತುಪಡಿಸಿ ರಸ್ತೆ ಮಧ್ಯೆದಲ್ಲಿ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸದಂತೆ ವಾಹನ ಚಾಲಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಗಮನಕ್ಕೆ ತಂದರು.  

ಹೆದ್ದಾರಿ, ರಸ್ತೆಗಳನ್ನು ಅಗೆದು ಕಾಲುವೆ, ಪೈಪ್‌ಲೈನ್‌ ನಿರ್ಮಿಸಿದ ನಂತರ ಸಂಬಂಧಪಟ್ಟ ಇಲಾಖೆಯಿಂದ ರಸ್ತೆ ಸರಿಪಡಿಸುವಂತೆ ಸೂಚಿಸಬೇಕು. ಒಂದು ವೇಳೆ ರಸ್ತೆ ಸರಿಪಡಿಸದೆ ಇದ್ದಲ್ಲಿ ಠೇವಣಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಪಾರ್ಥನಳ್ಳಿ, ರಸ್ತೆ ಅಪಘಾತಗಳು ಕಳೆದ ಮೂರು ತಿಂಗಳಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿವೆ. ಮರಣ ಪ್ರಮಾಣ ಹೆಚ್ಚಾಗಿದ್ದು, ಗಂಭೀರ ಪ್ರಮಾಣದ ಗಾಯಗಳ ಪ್ರಕರಣ ಕಡಿಮೆಯಾಗಿವೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ 108 ಪ್ರಚಾರ ಹೆಚ್ಚಾಗಬೇಕು. ರಾತ್ರಿ ವೇಳೆ ಹೆಚ್ಚಿನ ನಿಗಾ ಇಡಬೇಕು. ಅಪಘಾತ ಸ್ಥಳಕ್ಕೆ ಕೂಡಲೇ ಧಾವಿಸುವ ಮೂಲಕ ಸ್ಪಂದಿಸಬೇಕು. ಪ್ರಥಮ ಮತ್ತು ತುರ್ತು ಚಿಕಿತ್ಸೆ ಒದಗಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು