ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ನ್ಯಾ. ಸದಾಶಿವ ವರದಿ ಕೇಂದ್ರಕ್ಕೆ ಸಲ್ಲಿಸಲು ಆಗ್ರಹ

Last Updated 29 ಸೆಪ್ಟೆಂಬರ್ 2021, 13:28 IST
ಅಕ್ಷರ ಗಾತ್ರ

ವಿಜಯಪುರ: ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ. ಜೆ. ಸದಾಶಿವ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಅಸ್ಪೃಶ್ಯ ಜಾತಿಗಳ ಒಕ್ಕೂಟದ ಗೌರವಾಧ್ಯಕ್ಷ ಚಂದ್ರಶೇಖರ ಕೊಡಬಾಗಿ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕ ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಹಾಗೂ ಬಂಜಾರ ಹಕ್ಕು ಹೋರಾಟ ಸಮಿತಿ ಪದಾಧಿಕಾರಿಗಳು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ವಿನಾಕಾರಣ ಸಚಿವರಾದ ಗೋವಿಂದ ಕಾರಜೋಳ, ನಾರಾಯಣಸ್ವಾಮಿ ಅವರ ರಾಜೀನಾಮೆ ಕೇಳುತ್ತಿರುವುದು ಅಸಂಬದ್ಧ ಹಾಗೂ ದುರುದ್ದೇಶದಿಂದ ಕೂಡಿದೆ ಎಂದರು.

ದೇಶದ ಯಾವುದೇ ಪ್ರದೇಶ ಅಥವಾ ರಾಜ್ಯದಲ್ಲಿ ಭೋವಿ ಮತ್ತು ಲಂಬಾಣಿಗಳು ಪರಿಶಿಷ್ಟರ ಪಟ್ಟಿಯಲ್ಲಿ ಇಲ್ಲ. 1978ರಲ್ಲಿ ದೇವರಾಜ ಅರಸು ಸರ್ಕಾರ ಕರ್ನಾಟಕದಲ್ಲಿ ಇವರನ್ನು ಪರಿಶಿಷ್ಟ ಜಾತಿಗೆ ಸೇರಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಆದರೂ ಸಹ ನ್ಯಾ.ಸದಾಶಿವ ಆಯೋಗ ಅವರನ್ನು ಎಸ್.ಸಿ. ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಹೇಳಿದ್ದರೂ ಸಹ ಈ ಆಯೋಗದ ವಿರುದ್ಧ ಮಾತನಾಡುತ್ತಿರುವುದು ನಾಚಿಕಗೆಗೇಡಿನ ಸಂಗತಿ ಎಂದರು.

ನ್ಯಾಯಾಲಯದ ಸೂಚನೆಯಂತೆ 2005ರಲ್ಲಿ ರಚನೆಯಾದ ನ್ಯಾಯಮೂರ್ತಿ ಎ. ಜೆ. ಸದಾಶಿವ ಆಯೋಗವು ತನ್ನ ವರದಿಯನ್ನು ಮೀಸಲಾತಿಯಲ್ಲಿಯೇ ಒಳಮೀಸಲಾತಿಗಾಗಿ ಸಾಮಾಜಿಕ ಮತ್ತು ಆರ್ಥಿಕ ಹಾಗೂ ಜನಸಂಖ್ಯೆ ಆಧಾರದ ಮೇಲೆ ಸಮೀಕ್ಷೆ ನಡೆಸಿ ಪರಿಶಿಷ್ಟ ಜಾತಿಯಲ್ಲಿರುವ 101 ಉಪಜಾತಿಗಳಲ್ಲಿ ಮಾದಿಗ ಸಮುದಾಯಕ್ಕೆ ಶೇ 6 ರಷ್ಟು, ಹೊಲೆಯ ಸಮುದಾಯಕ್ಕೆ ಶೇ 5, ಉಳಿದ ಭೋವಿ ಮತ್ತು ಲಂಬಾಣಿ ಸಮುದಾಯಕ್ಕೆ ಶೇ 3 ರಷ್ಟು ಮೀಸಲಾತಿ ನಿಗದಿಪಡಿಸಿದೆ. ಇದು ಅತ್ಯಂತ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಆಯೋಗ ವರದಿ ನೀಡಿದೆ ಎಂದು ಹೇಳಿದರು.

ಮಾದಿಗ, ಹೊಲೆಯ, ಡೋಹರ, ಚಮ್ಮಾರ ಮತ್ತು ಸಮಗಾರ ಜಾತಿಯವರು ಮಾತ್ರ ಅಸ್ಪೃಶ್ಯರಾಗಿದ್ದರು ಎಂಬುದಕ್ಕೆ ದಾಖಲೆಗಳಿವೆ. ನ್ಯಾ. ಸದಾಶಿವ ಆಯೋಗವು ಸ್ಪರ್ಶ ಜಾತಿಗಳಾದ ಲಂಬಾಣಿ, ಭೋವಿ, ಕೊರಮ ಮತ್ತು ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಎಂದೇ ಪರಿಗಣಿಸಿದೆ. ಆದರೂ ಸಹ ಆಯೋಗದ ಬಗ್ಗೆ ಅವೈಜ್ಞಾನಿಕ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಆಯೋಗದ ಶಿಫಾರಸ್ಸನ್ನು ಸ್ವಾಗತಿಸಬೇಕೇ ಹೊರತು ಇದರಲ್ಲಿ ರಾಜಕೀಯ ಬೆರಸಿರುವುದು ತಪ್ಪು ಎಂದರು.

ಕಾರ್ಯಾಧ್ಯಕ್ಷ ಮಹೇಶ ಕ್ಯಾತನ್, ಪ್ರಧಾನ ಕಾರ್ಯದರ್ಶಿ ಸುರೇಶ ಘೋಣಸಗಿ, ಸಂತೋಷ ಶಹಾಪೂರ, ಹಲಸಂಗಿ, ಸಂಗಪ್ಪ ಚಲವಾದಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT