ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೀಸಲಾತಿ ದಲಿತರ ಜನ್ಮಸಿದ್ಧ ಹಕ್ಕು: ಸಂಸದ ರಮೇಶ ಜಿಗಜಿಣಗಿ

Published : 13 ಸೆಪ್ಟೆಂಬರ್ 2024, 15:46 IST
Last Updated : 13 ಸೆಪ್ಟೆಂಬರ್ 2024, 15:46 IST
ಫಾಲೋ ಮಾಡಿ
Comments

ವಿಜಯಪುರ: ‘ದೇಶದಲ್ಲಿ ಕಾಂಗ್ರೆಸ್ ನಿರಂತರ ಮೀಸಲಾತಿ ವಿರೋಧಿ ನಡೆ ಅನುಸರಿಸಿಕೊಂಡು ಬಂದಿದೆ. ದೇಶದಲ್ಲಿ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಹೇಳಿಕೆ ನೀಡಿರುವ ರಾಹುಲ್‌ ಗಾಂಧಿ ಕಾಂಗ್ರೆಸ್‌ನ ಮೀಸಲಾತಿ ವಿರೋಧಿ ಮುಖವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ಮಾಜಿ ಪ್ರಧಾನಿ ನೆಹರೂ ಅವರು ಮೀಸಲಾತಿಯಿಂದ ಅನರ್ಹ ಜನ ಅಧಿಕಾರಿಗಳಾಗುತ್ತಾರೆ ಎಂದಿದ್ದರು. ಇಂದಿರಾ ಗಾಂಧಿ ಮತ್ತು ರಾಜೀವ್‌ಗಾಂಧಿ ಸಹ ಮೀಸಲಾತಿ ವಿರೋಧಿ ಅನೇಕ ಹೇಳಿಕೆ ನೀಡಿದ್ದರು. ಈಗ ರಾಹುಲ್‌ ಗಾಂಧಿ ಅಮೆರಿಕದಲ್ಲಿ ಮೀಸಲಾತಿ ರದ್ದು ಪಡಿಸುವುದಾಗಿ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ’ ಎಂದು ಕುಟುಕಿದರು. 

‘ಮೀಸಲು ರದ್ದು ಮಾಡುತ್ತೇವೆ ಎಂದು ಹೇಳಲು ಮೀಸಲಾತಿ ಎಂಬುದು ಕಾಂಗ್ರೆಸ್ ಕೊಟ್ಟಿರುವ ಭಿಕ್ಷಾ ಪಾತ್ರೆಯಲ್ಲ. ಮೀಸಲಾತಿ ದಲಿತರ ಜನ್ಮ ಸಿದ್ಧ ಹಕ್ಕು. ಅದನ್ನು ಯಾರೂ ಕಸಿದುಕೊಳ್ಳಲು ಬಿಜೆಪಿ ಪಕ್ಷ ಬಿಡುವುದಿಲ್ಲ’ ಎಂದರು. 

‘ಚುನಾವಣೆ ಸಮಯದಲ್ಲಿ ಮಾತ್ರ ಕಾಂಗ್ರೆಸ್ ದಲಿತರ ಕುರಿತು ಮೊಸಳೆ ಕಣ್ಣೀರು ಹಾಕುತ್ತದೆ. ಕಳೆದ 70 ವರ್ಷಗಳಿಂದ ದಲಿತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಾ ಬಂದಿದ್ದಾರೆ. ದಲಿತರ ಶ್ರೇಯೋಭಿವೃದ್ಧಿ ಸಮಗ್ರ ನೀತಿಯನ್ನು ರೂಪಿಸುವಲ್ಲಿ ಕಾಂಗ್ರೆಸ್‌ ಸಂಪೂರ್ಣ ವಿಫಲವಾಗಿದೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಪಕ್ಷ ದಲಿತರನ್ನು ಕೇವಲ ಮತಬ್ಯಾಂಕ್‌ ರೂಪದಲ್ಲಿ ಕಾಣುತ್ತದೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಎರಡು ಬಾರಿ ಸೋಲಿಸಿದ್ದು ಕಾಂಗ್ರೆಸ್‌. ಸಂವಿಧಾನ ರಚಿಸಿದ ಅಂಬೇಡ್ಕರ್‌ ಅವರನ್ನು ಅಪಮಾನ ಮಾಡಿದ್ದು ಕಾಂಗ್ರೆಸ್‌. ಈಗ ಮೀಸಲಾತಿ ರದ್ದುಪಡಿಸುವುದಾಗಿ ಹೇಳಿಕೆ ನೀಡಿ ಅವರ ವಿಚಾರಗಳಿಗೂ ತಿಲಾಂಜಲಿ ನೀಡಲು ಹೊರಟಿದೆ’ ಎಂದರು.

‘ದೇಶ ವಿಭಜನೆಯ ಷಡ್ಯಂತ್ರ ರೂಪಿಸುವ ಶಕ್ತಿಗಳೊಂದಿಗೆ ನಿಂತು ದೇಶ ವಿರೋಧಿ  ಹೇಳಿಕೆ ನೀಡುವುದು ಕಾಂಗ್ರೆಸ್‌ಗೆ ಅಭ್ಯಾಸವಾಗಿದೆ. ರಾಹುಲ್‌ ಗಾಂಧಿ ಯಾವಾಗಲೂ ದೇಶದ ಭದ್ರತೆಗೆ ಬೆದರಿಕೆ ಒಡ್ಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ದಲಿತರ ₹25,000 ಕೋಟಿ ಅನುದಾನವನ್ನು ಅನ್ಯ ಯೋಜನೆಗಳಿಗೆ ರಾಜ್ಯ ಸರ್ಕಾರ ಹಂಚಿಕೆ ಮಾಡಿದೆ. ಮಹರ್ಷಿ ವಾಲ್ಮೀಕಿ ನಿಗಮದ ₹187 ಕೋಟಿ ಹಣವನ್ನು ಲೂಟಿ ಮಾಡಿ ಬಳ್ಳಾರಿ ಚುನಾವಣೆಗೆ ಬಳಸಿದ್ದಾರೆ’ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಅರುಣ ಶಹಾಪುರ, ವಿಜುಗೌಡ ಪಾಟೀಲ, ಸಂಜೀವ ಐಹೊಳೆ, ಮಳುಗೌಡ ಪಾಟೀಲ, ಸಾಬು ಮಾಶಾಳ, ಈರಣ್ಣ ರಾವೂರ, ವಿಜಯ ಜೋಶಿ ಮತ್ತಿತರರಿದ್ದರು.

ದಲಿತರನ್ನು ಮುಖ್ಯಮಂತ್ರಿ ಮಾಡಲಿ: ಜಿಗಜಿಣಗಿ ‌

ವಿಜಯಪುರ: ‘ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿಯಾಗಬೇಕು ಎನ್ನುವುದು ನನ್ನ ಆಶಯ. ರಾಜ್ಯದಲ್ಲಿ ಇಲ್ಲಿಯವರೆಗೆ ಒಬ್ಬ ದಲಿತನೂ ಮುಖ್ಯಮಂತ್ರಿಯಾಗಿಲ್ಲ. ರಾಜ್ಯದ ದಲಿತರು ಪಾಪ ಮಾಡಿದ್ದಾರಾ? ಅವರೇನು ಅಯೋಗ್ಯರಾ?’ ಎಂದು ಸಂಸದ ರಮೇಶ ಜಿಗಜಿಣಗಿ ಪ್ರಶ್ನಿಸಿದರು. ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖ್ಯಮಂತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ‘ಕಾಂಗ್ರೆಸ್‌ ಪಕ್ಷವೂ ದಲಿತರಾದ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿ ಕೇಂದ್ರದಲ್ಲಿ ಕೂರಿಸಿದೆ. ಅವರನ್ನು ತಂದು ರಾಜ್ಯದಲ್ಲಿ ಏಕೆ ಮುಖ್ಯಮಂತ್ರಿ ಮಾಡಬಾರದು’ ಎಂದರು. ‘ಯಾವುದೇ ಪಕ್ಷದಲ್ಲಾಗಲಿ ಒಬ್ಬ ದಲಿತನನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ನೆರೆ–ಹೊರೆ ರಾಜ್ಯಗಳಲ್ಲಿ ದಲಿತರು ಮುಖ್ಯಮಂತ್ರಿಗಳಾಗಿ ಹೋಗಿದ್ದಾರೆ. ನಮ್ಮ ರಾಜ್ಯದಲ್ಲಿಯೇ ಈವರೆಗೆ ಒಬ್ಬ ದಲಿತರು ಮುಖ್ಯಮಂತ್ರಿಯಾಗಿಲ್ಲ. ರಾಜ್ಯದ ದಲಿತರು ಪಾಪಿಷ್ಠರಾ? ಸಿಎಂ ಬದಲಾವಣೆ ಮಾಡಿದ್ರೆ ದಲಿತರನ್ನು ಮುಖ್ಯಮಂತ್ರಿ ಮಾಡಲಿ ಎನ್ನುವುದು’ ನನ್ನ ಆಶಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT