ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಸೋಂಕು

ಆರು ತಿಂಗಳಲ್ಲಿ ಗರಿಷ್ಠ ಪ್ರಕರಣ ದೃಢ; ನಿಯಮ ಪಾಲನೆಗೆ ಒತ್ತು
Last Updated 22 ಏಪ್ರಿಲ್ 2021, 6:58 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚಾಗುತ್ತಿದ್ದು, ಇದುವರೆಗೂ ಗ್ರಾಮಾಂತರ ಜಿಲ್ಲೆಯಲ್ಲಿ 23,179 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

20,348 ಮಂದಿ ಗುಣಹೊಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 198 ಮಂದಿ ಇದುವರೆಗೂ ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಬುಧವಾರದಂದು ಒಟ್ಟು 544 ಪ್ರಕರಣಗಳು ದೃಢಪಟ್ಟಿವೆ. 2ನೇ ಅಲೆ ಆರಂಭವಾದಾಗಿನಿಂದ ಒಟ್ಟು 2633 ಪ್ರಕರಣಗಳು ಸಕ್ರಿಯವಾಗಿವೆ. ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಕೊರೊನಾ ನಿಯಂತ್ರಣ ಮಾಡಲಿಕ್ಕೆ ಜನರ ಸಹಕಾರ ಬಹಳ ಮುಖ್ಯವಾಗಿದೆ.

ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕೊರೊನಾ 2ನೇ ಅಲೆ ಅಬ್ಬರ ಜಿಲ್ಲೆಯಾದ್ಯಂತ ನಿರೀಕ್ಷೆಗೂ ಮೀರಿ ಅಬ್ಬರಿಸುತ್ತಿರುವುದು ಎದ್ದು ಕಾಣುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳೂ ಸೇರಿದಂತೆ ಸರ್ಕಾರ ಸಾಕಷ್ಟು ಪ್ರಯತ್ನಪಡುತ್ತಿದೆ. ಜನರು ಸ್ವಯಂ ಪ್ರೇರಿತರಾಗಿ ಕೋವಿಡ್ ನಿಯಮಾವಳಿಗಳನ್ನು ಪಾಲನೆ ಮಾಡುವ ತನಕ ಇದರ ನಿಯಂತ್ರಣ ಕಷ್ಟ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ನಿಲ್ಲದ ಸಾವಿನ ಸರಣಿ: ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಆರಂಭದ ಬಳಿಕ ಜಿಲ್ಲೆಯಲ್ಲಿ ಒಟ್ಟು 15 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವಂತಹ ಆತಂಕದಲ್ಲಿ ಜನರು ಜೀವನ ನಡೆಸುವಂತಾಗಿದೆ. ಜ್ವರ, ಮೈ ಕೈ ನೋವು, ಕೆಮ್ಮು, ನೆಗಡಿಯಂತಹ ಲಕ್ಷಣಗಳು ಕಂಡು ಬಂದ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಪಡುವಂತೆ ಜನರಲ್ಲಿ ಎಷ್ಟೇ ಜಾಗೃತಿಯನ್ನು ಮೂಡಿಸುತ್ತಿದ್ದರೂ ಜನರು ಆಸ್ಪತ್ರೆಗೆ ಹೋಗಿ ಕೋವಿಡ್ ಪರೀಕ್ಷೆಗೆ ಒಳಪಡಲಿಕ್ಕೂ ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ.

ಬಹುತೇಕರು ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದರೂ ಪರೀಕ್ಷೆ ಮಾಡಿಸಿಕೊಂಡರೆ ಕೊರೊನಾ ಪಾಸಿಟೀವ್ ಬರಬಹುದು ಎನ್ನುವ ಭಯದಲ್ಲಿ ಮೆಡಿಕಲ್ ಸ್ಟೋರ್‌ಗಳಲ್ಲಿ ಮಾತ್ರೆಗಳನ್ನು ಖರೀದಿ ಮಾಡಿಕೊಂಡು ಬಂದು ಸ್ವಯಂ ಪ್ರೇರಿತರಾಗಿ ಚಿಕಿತ್ಸೆ ಮಾಡಿಕೊಳ್ಳಲಾರಂಭಿಸಿದ್ದಾರೆ.

ಲಸಿಕೆ ಪ್ರಮಾಣ ಹೆಚ್ಚಿಸಬೇಕಿದೆ: ಈಗಾಗಲೇ 45 ವರ್ಷಗಳು ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕುವಂತಹ ಪ್ರಕ್ರಿಯೆ ಜಾರಿಯಲ್ಲಿದ್ದರೂ ಬಹುತೇಕರು ಲಸಿಕೆ ತೆಗೆದುಕೊಂಡರೆ ಜ್ವರ ಕಾಣಿಸಿಕೊಳ್ಳುತ್ತದೆ. ಅಡ್ಡಪರಿಣಾಮಗಳು ಆಗುತ್ತಿವೆ ಎನ್ನುವ ವದಂತಿಗಳನ್ನು ನಂಬಿಕೊಂಡು ಲಸಿಕೆ ಹಾಕಿಸಿಕೊಳ್ಳಲಿಕ್ಕೆ ಮುಂದಾಗುತ್ತಿಲ್ಲ. ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆಲ್ಲಾ ಲಸಿಕೆ ಹಾಕಲು ಆರಂಭಿಸುವ ಮುನ್ನಾ ಲಸಿಕೆಯ ಕುರಿತು ಜನರಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕಾಗಿರುವ ಅನಿವಾರ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.

ಆಂಟಿಜನ್ ಟೆಸ್ಟ್: ಒಮ್ಮೆ ಆಸ್ಪತ್ರೆಗೆ ಬಂದ ರೋಗಿಗೆ ಆಂಟಿಜನ್ ಟೆಸ್ಟ್ ಮಾಡಿದಾಗ ಅದರಲ್ಲಿ ನೆಗೆಟೀವ್ ಬರುತ್ತದೆ. ಆರ್.ಟಿ.ಪಿ.ಸಿ.ಆರ್ ಮಾಡಿದರೆ ಪಾಸಿಟೀವ್ ಬಂದಿರುವ ಪ್ರಕರಣಗಳೇ ಹೆಚ್ಚು. ಆಂಟಿಜನ್‌ನಲ್ಲಿ ನೆಗೆಟೀವ್ ಬಂದ ಕೂಡಲೇ ಜನ ಧೈರ್ಯವಾಗಿ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಆರ್.ಟಿ.ಪಿ.ಸಿ.ಆರ್ ಮಾಡಿ, ಪರೀಕ್ಷೆಗೆ ಒಳಪಟ್ಟವರನ್ನು ಕಡ್ಡಾಯವಾಗಿ ಅಂತರ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT