ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

465 ಹೆಕ್ಟೇರ್ ಬೆಳೆ ನಾಶ, ಶೀಘ್ರವೇ ಪರಿಹಾರ: ಸಚಿವೆ ಶಶಿಕಲಾ ಜೊಲ್ಲೆ

Last Updated 7 ಆಗಸ್ಟ್ 2021, 8:32 IST
ಅಕ್ಷರ ಗಾತ್ರ

ಆಲಮಟ್ಟಿ(ವಿಜಯಪುರ): ಆಲಮಟ್ಟಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಟ್ಟಾಗ ನಿಡಗುಂದಿ ತಾಲ್ಲೂಕಿನ 465 ಹೆಕ್ಟೇರ್ ಪ್ರದೇಶ ಜಲಾವೃತವಾಗಿ ಬೆಳೆ ಹಾನಿಯಾಗಿರುವ ರೈತರಿಗೆ ಗರಿಷ್ಠ ಬೆಳೆ ಪರಿಹಾರ ಶೀಘ್ರ ನೀಡಲಾಗುವುದು ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಯಲಗೂರ ಗ್ರಾಮದ ಪ್ರವಾಹ ಪೀಡಿತ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.

ಪ್ರವಾಹದಿಂದ ಕಬ್ಬು, ಸೂರ್ಯಕಾಂತಿ, ಹತ್ತಿ, ತೊಗರಿ ಸೇರಿ ನಾನಾ ಬೆಳೆಗಳು ಜಲಾವೃತಗೊಂಡಿದೆ.
2019 ರಲ್ಲಿ ತಾಂತ್ರಿಕ ತೊಂದರೆಯ ಕಾರಣ ಕೆಲವರಿಗೆ ಬೆಳೆ ಪರಿಹಾರ ಬಂದಿಲ್ಲ, ಹೀಗಾಗಿ ಈ ಬಾರಿ ಯಾವುದೇ ತಾಂತ್ರಿಕ ತೊಂದರೆ ಉದ್ಭವಿಸದಂತೆ ಹಾಗೂ ಯಾವ ಕ್ಷೇತ್ರವೂ ಬಿಟ್ಟು ಹೋಗದಂತೆ ಜಲಾವೃತಗೊಂಡ ಪ್ರದೇಶದ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಈಗಾಗಲೇ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಬೆಳೆ ಹಾನಿ ಸಮೀಕ್ಷೆ ನಡೆಸುತ್ತಿದ್ದಾರೆ. ಒಂದೆರೆಡು ದಿನಗಳಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳಲಿದ್ದು, ಹಾನಿಯ ನಿಖರ ಮಾಹಿತಿ ಗೊತ್ತಾಗಲಿದೆ ಎಂದರು.

ತಾಂತ್ರಿಕ ಅಧ್ಯಯನ: ಪ್ರವಾಹ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳಾದ ತಡೆಗೋಡೆ ನಿರ್ಮಾಣ, ಶಾಶ್ವತ ಭೂಸ್ವಾಧೀನ ಸೇರಿ ನಾನಾ ಚಿಂತನೆಗಳು ಸರ್ಕಾರದ ಮುಂದಿದ್ದು, ಈ ಬಗ್ಗೆ ತಾಂತ್ರಿಕ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವೆ ಜೊಲ್ಲೆ ಹೇಳಿದರು.

ಜಾಕವೆಲ್ ಸ್ಥಳಾಂತರ: ಯಲಗೂರ ಬಳಿ ಇರುವ ನಿಡಗುಂದಿ ಪಟ್ಟಣಕ್ಕೆ ನೀರು ಪೂರೈಕೆಯ ಜಾಕ್‌ವೆಲ್ ಪ್ರತಿ ವರ್ಷ ಪ್ರವಾಹ ಬಂದಾಗ ಜಲಾವೃತಗೊಳ್ಳುತ್ತಿದೆ. ಬೇಸಿಗೆಯಲ್ಲಿ ಈ ಜಾಕ್‌ವೆಲ್‌ಗೆ ನೀರಿನ ಕೊರತೆ ಎದುರಾಗುತ್ತದೆ. ಇದರಿಂದ ನಿಡಗುಂದಿ ಪಟ್ಟಣಕ್ಕೆ ನೀರು ಪೂರೈಕೆಗೆ ತೊಂದರೆಯಾಗುತ್ತದೆ. ಈ ಹಿನ್ನಲೆಯಲ್ಲಿ ಈ ಜಾಕ್‌ವೆಲ್ ಅನ್ನು ಜಲಾಶಯದ ಹಿಂಭಾಗಕ್ಕೆ ಸ್ಥಳಾಂತರ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಕೋವಿಡ್ ಎರಡನೇ ಅಲೆಯಲ್ಲಿ ಜಿಲ್ಲೆಯ ಅಧಿಕಾರಿಗಳು ಹಗಲಿರುಳು ಎನ್ನದೇ ಶ್ರಮಿಸಿದ್ದು, ಮೂರನೇ ಅಲೆಗೆ ಅಗತ್ಯ ಸಿದ್ಧತೆ ಈಗಿನಿಂದಲೇ ಆರಂಭಗೊಂಡಿದೆ. ಆಮ್ಲಜನಕ, ಆಸ್ಪತ್ರೆಯಲ್ಲಿ ಹಾಸಿಗೆ, ಅಗತ್ಯ ಔಷಧಗಳ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್, ಎಸ್ಪಿ ಎಚ್.ಡಿಆನಂದಕುಮಾರ, ಜಂಟಿ ಕೃಷಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್‌, ತಹಶೀಲ್ದಾರ್ ಸತೀಶ ಕೂಡಲಗಿ, ರಮೇಶ ಮಾಡಬಾಳ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಪ್ರಭುಗೌಡ ದೇಸಾಯಿ, ಶಿವಾನಂದ ಅವಟಿ, ಶಿವಾನಂದ ಮುಚ್ಚಂಡಿ, ಸಂತೋಷ ಕಡಿ, ಡಾ ಸಂಗಮೇಶ ಗೂಗಿಹಾಳ, ಶೇಖರ ಕುಂಬಾರ, ಸುರೇಶ ಆಲಕೊಪ್ಪರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT