ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೇದಗುಡ್ಡ: ಅತಂತ್ರವಾದ ಅಲೆಮಾರಿಗಳ ಬದುಕು

ತುತ್ತಿನ ಚೀಲ ತುಂಬಿಸಲೂ ಪರದಾಡುತ್ತಿರುವ ಅಲೆಮಾರಿಗಳು.
ಎಚ್.ಎಸ್.ಘಂಟಿ
Published 28 ಅಕ್ಟೋಬರ್ 2023, 7:29 IST
Last Updated 28 ಅಕ್ಟೋಬರ್ 2023, 7:29 IST
ಅಕ್ಷರ ಗಾತ್ರ

ಗುಳೇದಗುಡ್ಡ: ತಾಲ್ಲೂಕಿನ ಕಾಟಾಪೂರ ಮತ್ತು ಮಂಗಳಗುಡ್ಡ ಗ್ರಾಮದಲ್ಲಿರುವ ಅಲೆಮಾರಿಗಳ ಬದುಕು ಅತಂತ್ರವಾಗಿದೆ. ಕಾಟಾಪೂರ ಗ್ರಾಮದಲ್ಲಿ 300 ಕ್ಕೂ ಹೆಚ್ಚು ಜನರ 65 ಕುಟುಂಬಗಳಿವೆ ಅವರಲ್ಲಿ 70 ಕ್ಕೂ ಹೆಚ್ಚು ಜನ ಮಕ್ಕಳಿದ್ದಾರೆ ಅವರಗೆ ಈ ಹಿಂದೆ ಶಿಳ್ಳೇಕೇತರ ಎಂಬ ಜಾತಿ ಸೂಚಕ ಪದಕ್ಕೆ ಪರಿಶಿಷ್ಟ ಜಾತಿ(ಎಸ್.ಸಿ) ಜಾತಿ ಪ್ರಮಾಣ ಪತ್ರ ನೀಡಿತ್ತು ಈಗ ಸರ್ಕಾರ ನಿಲ್ಲಿಸಿದೆ.

‘ಕಿಳ್ಳೇಕೇತ ಪ್ರವರ್ಗ-01 ಎಂದು ಇತ್ತೀಚಿಗೆ ಯಾವುದೋ ಒಂದು ಆಯೋಗ ಶಿಪರಸ್ಸು ಮಾಡಿದ್ದಾರೆ. ಇದರಿಂದ ನಾವು ಮೀಸಲಾತಿಯಿಂದ ವಂಚಿತರಾಗಿದ್ದೇವೆ. ಶಿಳ್ಳೇಕೇತ,ಕಿಳ್ಳೆಕ್ಯಾತ,ಕಟಬು ಎಲ್ಲಾ ಒಂದೇ ಜಾತಿ ಸೂಚಿಸುವ ಅಲೆಮಾರಿಗಳೆ ಆಗಿವೆ. ಸರ್ಕಾರ ಒಡೆದು ಆಳುವ ನೀತಿ ಅನುಸರಿಸುತ್ತಿವೆ. ಸರ್ಕಾರ ಗಮನ ಹರಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು. ನಮ್ಮ ಮಕ್ಕಳು ಸಾಮಾನ್ಯ ವರ್ಗದಡಿ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಆರ್ಥಿಕ ಸಂಕಷ್ಟ ಇರುವುದರಿಂದ ಅದೆಷ್ಟೋ ಮಕ್ಕಳು ಮನೆಯಲ್ಲಿ ಇರಬೇಕಾದ ಸ್ಥಿತಿ ಬಂದೋದಗಿದೆ‘ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.

ಮಹಾರಾಷ್ಟ್ರದಿಂದ ಎರಡು- ಮೂರು ತಲೆಮಾರುಗಳಿಂದ ಕಾಟಾಪೂರ ಗ್ರಾಮಕ್ಕೆ ವಲಸೆ ಬಂದಿರುವ ಇವರು ಮನೆ ಭಾಷೆ ಮರಾಠಿಯಾದರೂ ಕನ್ನಡ ಭಾಷೆಯನ್ನು ಚೆನ್ನಾಗಿಯೇ ಮಾತನಾಡುತ್ತಾರೆ. ಇಲ್ಲಿ ಇವರಿಗೆ ಯಾವುದೇ ಜಮೀನು ಇಲ್ಲಾ ಸಮೀಪದ ಮಲಪ್ರಭಾ ನದಿಯಲ್ಲಿ ಮೀನು ಹಿಡಿದು ಮಾರುವ ಮನೆಯ ಜವಾಬ್ದಾರಿ ಪುರುಷನದ್ದಾಗಿದೆ. ಬೇಸಿಗೆಯಲ್ಲಿ ನದಿಯಲ್ಲಿ ನೀರಿಲ್ಲದಾಗ ಇವರ ಸ್ಥಿತಿ ಹೇಳ ತೀರದು. ಗಾಳಿ ದುರಗವ್ವ ಇವರ ಕುಲದೇವರು, ಬರಮದೇವರು ಗಂಡು ದೇವರರಾಗಿದ್ದಾರೆ. ಮಹಾನವಮಿಯಲ್ಲಿ ಬರಮದೇವರಿಗೆ ನೂರು ಹುಂಜಗಳನ್ನು ಬಲಿಕೊಡುವ ಮೂಲಕ ಮೀನುಗಾರಿಕೆ ಆರಂಭಿಸುತ್ತಾರೆ. ಈ ದೇವರಿಗೆ ಹೆಣ್ಣು ಮಕ್ಕಳಿಗೆ ನಮ್ಮ ಜಾತಿಯಲ್ಲಿ ನಿರ್ಭಂದ ಇರುತ್ತದೆ ಎಂದು ಹೇಳುತ್ತಾರೆ.

ಇವರು ತೊಗಲು ಗೊಂಬೆ ಸಿದ್ದ ಪಡಿಸಿ, ಆಡಿಸುತ್ತಿದ್ದರು. ಆದರೆ ಇತ್ತೀಚಿಗೆ ಜನ ನೋಡದೇ ಇರುವುದರಿಂದ ಅದನ್ನು ಅಢಿಸುವುದಿಲ್ಲಾ ಬದಲಾಗಿ ಮೀನುಗಾರಿಕೆ,ಹಚ್ಚೆ ಹಾಕುವುದು,ಕೌದಿ ಹೊಲಿಯುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಗ್ರಾಮಗಳನ್ನು ಸುತ್ತಿ ಕೌದಿ ಹೊಲಿಯಲು ಬಟ್ಟೆ ಸಂಗ್ರಹಿಸಿ ಅದನ್ನು ಹೊಲಿದು ಮತ್ತೇ ಅದೇ ಗ್ರಾಮಕ್ಕೆ ತೆರಳಿ ಕೊಟ್ಟು ಬರುತ್ತಾರೆ.ಇದರಿಂದ ಬರುವ ಆದಾಯ ತುಂಬಾ ಕಡಿಮೆಯಾದ್ದರಿಂದ ಕುಟುಂಬ ನಿರ್ವಹಣೆ ಕಟ್ಟವಾಗಿದೆ ಎನ್ನುತ್ತಾರೆ.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದರೂ ನಮಗೆ ಸರ್ಕಾರ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಯಾವುದೇ ಅವಕಾಶ ಕಲ್ಪಿಸಿಲ್ಲ.ಅಲೆಮಾರಿಗಳ ಜಾತಿ ಪ್ರಮಾಣ ಸಿಗದಂತಾಗಿದೆ. ಬಾಬಾ ಸಾಹೇಬ ಅಂಬೆಡ್ಕರ ಅವರ ಸಾಮಾಜಿಕ ನ್ಯಾಯವನ್ನು ಸರ್ಕಾರ ಮರೆತಿದೆ. ಮೀಸಲಾತಿಗಾಗಿ ದೊಡ್ಡ ಸಂಖ್ಯೆಯ ಮೇಲ್ಜಾತಿಯವರ ಮುಂದೆ ಅಲೆಮಾರಿಗಳು ಭಿಕ್ಷೆ ಬೇಡುವಂತಾಗಿದೆ. ಬೇರೆ ರಾಜ್ಯಗಳಲ್ಲಿ ಎಸ್.ಸಿ ಪ್ರಮಾಣ ಪತ್ರ ನೀಡಲಗುತ್ತಿದೆ. ಅವರೊಂದಿಗೆ ಜಾತಿ ಬದಲಾದಂತೆ ಬೀಗತನ ಮಾಡುವುದು ಕಷ್ಟವಾಗಿದೆ.ಕರ್ನಾಟಕದಲ್ಲೂ ಪ್ರ ವರ್ಗ 1 ರ ಬದಲಾಗಿ ಎಸ್‌ಸಿ ಪ್ರಮಾಣ ಪತ್ರನೀಡಬೇಕೆಂದು ಲಕ್ಷ್ಮಪ್ಪ ಕಿಳ್ಳೇಕೇತರ,ಶಂಕ್ರಪ್ಪ ಕಟ್ಟಿಮನಿ, ಕಾಕಪ್ಪ ಕಿಳ್ಳೇಕೇತರ,ಬಸಪ್ಪ ಕಿಳ್ಳೇಕೇತರ,ದೇವೇಂದ್ರಪ್ಪ ಕಿಳ್ಳೇಕೇತರ ಅಗ್ರಹಿಸುತ್ತಾರೆ.


’ಶಿಳ್ಳೇಕೇತ,ಕಿಳ್ಳೆಕ್ಯಾತ,ಕಟಬು ಎಂದು ವಿವಿಧ ಹೆಸರಿನಿಂದ ಗುರುತಿಸಲಾದ ಸಮಾಜವನ್ನು ಒಂದೇ ಜಾತಿ, ವಿವಿಧ ಪರ್ಯಾಯ ಹೆಸರಿನಲ್ಲಿ ಸರ್ಕಾರ ನಮ್ಮನ್ನು ವಿಭಜಿಸಿ ಅನ್ಯಾಯ ಮಾಡುವುದರ ಜೊತೆಗೆ ಎಲ್ಲ ಅಲೆಮಾರಿಗಳನ್ನು ಕಡೆಗಣಿಸಿದೆ’ ಎಂದು ಕರ್ನಾಟಕ ರಾಜ್ಯ ಶಿಳ್ಳೇಕ್ಯಾತರ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮದ್ದಾನೆಪ್ಪ ಕಿಳ್ಳೇಕೇತರ ಹೇಳುತ್ತಾರೆ.

‘ಬಾದಾಮಿ ತಾಲ್ಲೂಕಿನ ಖ್ಯಾಡ, ಕಾಕನೂರ, ಮಲ್ಲಾಪೂರ, ನೀರಲಕೇರಿ,ಗುಳೇದಗುಡ್ಡ ತಾಲ್ಲೂಕಿನ ಕಾಟಾಪೂರ ಹಾಗೂ ಬಾಗಲಕೋಟೆ ಜಿಲ್ಲೆಯಾದ್ಯಂತ ಅಲೆಮಾರಿ ಸಮುದಾಯವಿದ್ದು ಸರ್ಕಾರ ಅಲೆಮಾರಿಗಳಿಗೆ ಅನ್ಯಾಯ ಮಾಡುತ್ತಿದೆ.ಮೂಲಭೂತ ಸೌಲಭ್ಯದೊಂದಿಗೆ ಎಸ್.ಸಿ.ಪ್ರಮಾಣ ಪತ್ರ ನೀಡಬೇಕ‘

ಕಿಳ್ಳೇಕ್ಯಾತ ಅಲೆಮಾರಿ ಸಮುದಾಯದ ಮಹಿಳೆಯರು ಕೌದಿ ಹೊಲಿಯುತ್ತಿರುವುದು ಮತ್ತು ಅಚ್ಚಿ ಹಾಕುತ್ತಿರುವುದು
ಕಿಳ್ಳೇಕ್ಯಾತ ಅಲೆಮಾರಿ ಸಮುದಾಯದ ಮಹಿಳೆಯರು ಕೌದಿ ಹೊಲಿಯುತ್ತಿರುವುದು ಮತ್ತು ಅಚ್ಚಿ ಹಾಕುತ್ತಿರುವುದು
ಕಿಳ್ಳೇಕ್ಯಾತ ಅಲೆಮಾರಿ ಸಮುದಾಯದ ಮಹಿಳೆಯರು ಕೌದಿ ಹೊಲಿಯುತ್ತಿರುವುದು ಮತ್ತು ಅಚ್ಚಿ ಹಾಕುತ್ತಿರುವುದು
ಕಿಳ್ಳೇಕ್ಯಾತ ಅಲೆಮಾರಿ ಸಮುದಾಯದ ಮಹಿಳೆಯರು ಕೌದಿ ಹೊಲಿಯುತ್ತಿರುವುದು ಮತ್ತು ಅಚ್ಚಿ ಹಾಕುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT